ಮನೆ ಕ್ರೀಡೆ ಭಾರತ ಟೆಸ್ಟ್ ತಂಡಕ್ಕೆ ಬೆಸ್ಟ್ ಕ್ಯಾಪ್ಟನ್ ಹೆಸರಿಸಿದ ಕೆವಿನ್ ಪೀಟರ್ಸನ್!

ಭಾರತ ಟೆಸ್ಟ್ ತಂಡಕ್ಕೆ ಬೆಸ್ಟ್ ಕ್ಯಾಪ್ಟನ್ ಹೆಸರಿಸಿದ ಕೆವಿನ್ ಪೀಟರ್ಸನ್!

0

ಹೊಸದಿಲ್ಲಿ: ಭಾರತ ಟೆಸ್ಟ್‌ ತಂಡದ ಮುಂದಿನ ನಾಯಕ ಯಾರು? ಎಂಬ ಚರ್ಚೆ ನಡೆಯುತ್ತಿರುವ ಬೆನ್ನಲ್ಲೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಇಂಗ್ಲೆಂಡ್‌ನ ಮಾಜಿ ಕ್ಯಾಪ್ಟನ್ ಕೆವಿನ್ ಪೀಟರ್ ಸನ್  ತಮ್ಮ ಆಯ್ಕೆಯ ಅತ್ಯುತ್ತಮ ಆಟಗಾರನನ್ನು ಹೆಸರಿಸಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಸರಣಿ ಬಳಿಕ ವಿರಾಟ್ ಕೊಹ್ಲಿ ಹಠಾತ್‌ ನಿರ್ಧಾರ ಪ್ರಕಟಿಸಿ ನಾಯಕತ್ವದ ಜವಾಬ್ದಾರಿಯಿಂದ ಹೊರಬಂದರು. ಇದೀಗ ಫೆಬ್ರವರಿ ಮಾರ್ಚ್‌ನಲ್ಲಿ ನಡೆಯ ಬೇಕಿರುವ ಶ್ರೀಲಂಕಾ ವಿರುದ್ಧದ ಟೆಸ್ಟ್‌ ಸರಣಿಗೂ ಮುನ್ನ ಭಾರತ ತಂಡಕ್ಕೆ ನೂತನ ಕ್ಯಾಪ್ಟನ್‌ ಆಯ್ಕೆ ಆಗಬೇಕಿದ್ದು, ಓಪನರ್‌ಗಳಾದ ರೋಹಿತ್‌ ಶರ್ಮಾ ಮತ್ತು ಕೆಎಲ್‌ ರಾಹುಲ್‌ ಹೆಸರು ಮುಂಚೂಣಿಯಲ್ಲಿದೆ.

ಅಂದಹಾಗೆ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಸರಣಿಗೆ ರೋಹಿತ್‌ ಶರ್ಮಾ ಉಪನಾಯಕನಾಗಿ ಆಯ್ಕೆ ಆಗಿದ್ದರು. ಆದರೆ, ಗಾಯದ ಸಮಸ್ಯೆ ಕಾರಣ ಅವರು ಈ ಸರಣಿಯಲ್ಲಿ ಪಾಲ್ಗೊಳ್ಳಲಿಲ್ಲ. ಹೀಗಾಗಿ ಕೊಹ್ಲಿ ಬಳಿಕ ರೋಹಿತ್‌ ಟೆಸ್ಟ್‌ ನಾಯಕತ್ವಕ್ಕೆ ಸಹಜ ಆಯ್ಕೆಯಾಗಲಿದ್ದಾರೆ. ಆದರೆ, ರಾಹುಲ್‌ ಆಯ್ಕೆ ಮಾಡಿದರೆ ದೀರ್ಘಕಾಲದ ವರೆಗೆ ಕ್ಯಾಪ್ಟನ್‌ ಆಗಿ ಉಳಿಯಬಲ್ಲರು ಎಂಬುದು ಆಯ್ಕೆ ಸಮಿತಿ ತಲೆಯಲ್ಲಿದೆ.

ಈ ಬಗ್ಗೆ ಮಾತನಾಡಿರುವ ಕೆವಿನ್‌ ಪೀಟರ್ಸನ್‌ ಸದ್ಯ ಭಾರತ ತಂಡ ರೋಹಿತ್‌ ಶರ್ಮಾ ಅವರ ಮೇಲೆ ವಿಶ್ವಾಸವಿಟ್ಟರೆ ಸರಿ ಎಂದಿದ್ದಾರೆ. ಏಕೆಂದರೆ ಕ್ಯಾಪ್ಟನ್‌ ಆಗಿ ರೋಹಿತ್‌ ಎಷ್ಟು ಸಮರ್ಥ ಆಟಗಾರ ಎಂಬುದು ಈಗಾಗಲೇ ಐಪಿಎಲ್‌ನಲ್ಲಿ ಸಾಬೀತಾಗಿದೆ ಎಂದು ಹೇಳಿದ್ದಾರೆ.

“ಮುಂದಿನ ಕ್ಯಾಪ್ಟನ್‌ ಆಯ್ಕೆ ಸಲುವಾಗಿ ಹಲವು ಆಯ್ಕೆಗಳು ಇರುವುದು ಅದೃಷ್ಟವೇ ಸರಿ. ಆದರೆ ನಾನಂತೂ ರೋಹಿತ್‌ ಶರ್ಮಾ ಅವರನ್ನೇ ನೆಚ್ಚಿಕೊಳ್ಳುತ್ತೇನೆ. ಆತ ಮಹಾನ್‌ ಕ್ಯಾಪ್ಟನ್‌. ಪಂದ್ಯದ ಮೇಲೆ ಆತ ಸಾಧಿಸುವ ಹಿಡಿತ ನನಗೆ ಬಹಳಾ ಇಷ್ಟ. ನಿರ್ಧಾರ ತೆಗೆದುಕೊಳ್ಳುವುದರಲ್ಲಿ ನಿಸ್ಸೀಮರು. ಮುಂಬೈ ಇಂಡಿಯನ್ಸ್‌ ತಂಡದಲ್ಲಿ ಅವರ ನಾಯಕತ್ವ ಕಂಡಿದ್ದೇವೆ. ಹಲವಾರು ಟ್ರೋಫಿಗಳನ್ನು ಗೆದ್ದಿದ್ದಾರೆ. ಬಹುಮುಖ್ಯವಾಗಿ ರಾಹುಲ್‌ ದ್ರಾವಿಡ್‌ ಮಾರ್ಗದರ್ಶನದಲ್ಲಿ ಈ ತಂಡ ಹೇಗೆ ಆಡುತ್ತದೆ, ಯುವ ಆಟಗಾರರನ್ನು ಮತ್ತು ಅನುಭವಿಗಳನ್ನು ಹೇಗೆ ನಿಭಾಯಿಸುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ,” ಎಂದು ಇಂಡಿಯಾ ಟುಡೇಗೆ ನೀಡಿರುವ ಸಂದರ್ಶನದಲ್ಲಿ ಪೀಟರ್ಸನ್‌ ಹೇಳಿದ್ದಾರೆ.

ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತ ತಂಡದ ಸಾರ್ವಕಾಲಿಕ ಶ್ರೇಷ್ಠ ಕ್ಯಾಪ್ಟನ್‌ ಆಗಿದ್ದ ವಿರಾಟ್‌ ಕೊಹ್ಲಿ ಹಠಾತ್‌ ನಾಯಕತ್ವ ಬಿಟ್ಟಿದ್ದು ಟೀಮ್ ಇಂಡಿಯಾಗೆ ಬರಸಿಡಿಲಿನಂತೆ ಅಪ್ಪಳಿಸಿತ್ತು. ಈ ಬಗ್ಗೆ ಮಾತನಾಡಿದ ಪೀಟರ್ಸನ್‌ ಬಯೋ ಬಬಲ್‌ ಜೀವನ ಆಟಗಾರರ ಮೇಲೆ ದೊಡ್ಡ ಪರಿಣಾಮ ಬೀರುತ್ತಿದೆ ಎಂದಿದ್ದಾರೆ.

“ವಿರಾಟ್‌ ಕೊಹ್ಲಿ ಅಪ್ಪಟ ಎಂಟರ್ಟೇನರ್‌. ಯಾವುದೇ ಅಥ್ಲೀಟ್‌ಗಳಿಗೆ ಬಬಯೋ ಬಬಲ್‌ ಒಳಗೆ ಉಳಿದು ಆಟವಾಡುವುದು ಬಹಳಾ ಕಷ್ಟ. ಕೇವಲ ಆಟಗಾರರ ಮೇಲೆ ಮಾತ್ರವಲ್ಲ ಅವರ ಕುಟುಂಬದವರ ಮೇಲೂ ಇದು ಪ್ರಭಾವ ಬೀಡುತ್ತದೆ. ಒಂದಲ್ಲಾ ಒಂದು ದಿನ ಈ ಬಯೋ ಬಬಲ್‌ ಒಡೆಯಲೇ ಬೇಕು. ಇಲ್ಲವಾದರೆ ಆಟಗಾರರ ಮೇಲೆ ಇದು ದೊಡ್ಡ ಪರಿಣಾಮ ಬೀರಲಿದೆ,” ಎಂದಿದ್ದಾರೆ.

ಈ ನಡುವೆ ಭಾರತ ತಂಡದ ಮಾಜಿ ಆಟಗಾರರಾದ ಸುನಿಲ್‌ ಗವಾಸ್ಕರ್‌ ಮತ್ತು ಯುವರಾಜ್‌ ಸಿಂಗ್‌, ಟೆಸ್ಟ್‌ ತಂಡದ ನಾಯಕತ್ವ ಸಲುವಾಗಿ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ರಿಷಭ್ ಪಂತ್‌ ಅವರ ಹೆಸರು ಮುಂದಿಟ್ಟಿದ್ದಾರೆ. ವೇಗದ ಬೌಲರ್‌ ಜಸ್‌ಪ್ರೀತ್‌ ಬುಮ್ರಾ ಕೂಡ ಟೆಸ್ಟ್‌ ತಂಡದ ನಾಯಕಾಗುವ ಬಯಕೆ ಹೊರಹಾಕಿದ್ದಾರೆ. ಬಿಸಿಸಿಐ ಯಾರನ್ನು ಆಯ್ಕೆ ಮಾಡುತ್ತದೆ ಎಂಬುದು ಬಹಳಾ ಕುತೂಹಲ ಕೆರಳಿಸಿದೆ.

ಹಿಂದಿನ ಲೇಖನನಿಮ್ಮ ರಾಶಿಯ ಆಧಾರದಲ್ಲಿ 2022ರ ನಿಮ್ಮ ಶೈಕ್ಷಣಿಕ ಭವಿಷ್ಯವನ್ನು ನೋಡಿ..
ಮುಂದಿನ ಲೇಖನಬರ್ತ್ ಡೇ ದಿನವೇ ಆಲ್ರೌಂಡರ್ ಅಕ್ಸರ್ ಪಟೇಲ್ ನಿಶ್ಚಿತಾರ್ಥ