ಮನೆ ಭಾವನಾತ್ಮಕ ಲೇಖನ ಸ್ನೇಹ ಮಾನಸಿಕ ಆರೋಗ್ಯಕ್ಕೂ ಒಳ್ಳೆಯದು

ಸ್ನೇಹ ಮಾನಸಿಕ ಆರೋಗ್ಯಕ್ಕೂ ಒಳ್ಳೆಯದು

0

ಸ್ನೇಹ ಎನ್ನುವುದು ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಹಾಗಾದರೆ ಸ್ನೇಹದಿಂದ ನಮ್ಮ ಮನಸ್ಸಿನ ಮೇಲೆ ಯಾವ ರೀತಿ ಧನಾತ್ಮಕ ಪರಿಣಾಮ ಬೀರುತ್ತದೆ ಎನ್ನುವ ಮಾಹಿತಿ ಇಲ್ಲಿದೆ ನೋಡಿ.

ಪ್ರತೀ ವ್ಯಕ್ತಿಯ ಬದುಕಿನಲ್ಲಿ ಸ್ನೇಹ ಎನ್ನುವುದು ಜೀವನದ ಒಂದು ಭಾಗ. ಕಣ್ಣೀರೊರೆಸುವ ಕೈಗಳಾಗಿ, ಬಿದ್ದಾಗ, ಸೋತಾಗ ಬೆನ್ನು ತಟ್ಟುವ ಶಕ್ತಿಯಾಗಿ, ನಗುವಲ್ಲಿ ಜೊತೆಯಾಗುವವರು ಸ್ನೇಹಿತರು.

ಸ್ನೇಹದಿಂದ ಮನಸ್ಸು ಧನಾತ್ಮಕವಾಗಿ ಯೋಚಿಸಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಮಾನಸಿಕ ತಜ್ಞರು. ಅದು ನಿಜಕ್ಕೂ ಹೌದು. ನೀವೇ ನೋಡಿ, ಯಾವಾಗಲಾದರೂ ಬೇಜಾರದಲ್ಲಿದ್ದಾಗ ಮೊದಲು ಫೋನ್‌ ಮಾಡಿ ಮಾತನಾಡುವುದು ಬೆಸ್ಟ್‌ ಫ್ರೆಂಡ್‌ ಬಳಿಯೇ. ಸಮಸ್ಯೆಗೆ ಪರಿಹಾರ ಸಿಗುತ್ತೋ ಬಿಡುತ್ತೋ ಅದು ಸೆಕೆಂಡರಿ ಆದರೆ ಬೇಸರದಲ್ಲಿ ಫೋನ್‌ ಮಾಡಿದಾಗ ಕೊನೆಯಲ್ಲಿ ಮುಖದ ಮೇಲೆ ನಗು ಮಾತ್ರ ಮೂಡಿರುತ್ತದೆ. ಅದು ಸ್ನೇಹದ ಶಕ್ತಿ.

ಹಾಗಾದರೆ ಸ್ನೇಹ ನಮ್ಮ ಮಾನಸಿಕ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎನ್ನುವ ಬಗ್ಗೆ ಮಾನಸಿಕ ತಜ್ಞೆ ಡಾ. ಪುರೋಯಿತ್ರೀ ಮಜುಂದಾರ್ ಮಾಹಿತಿ ನೀಡಿದ್ದಾರೆ ಇಲ್ಲಿದೆ ನೋಡಿ.

​ಸ್ನೇಹ ಮತ್ತು ಮಾನಸಿಕ ಆರೋಗ್ಯ

ಉತ್ತಮ ಸ್ನೇಹಿತರಿದ್ದರೆ ಜೀವನದಲ್ಲಿ ಎಂತಹ ಸಾಧನೆಯನ್ನಾದರೂ ಮಾಡಬಹುದು. ಸ್ನೇಹಿತರೇ ಜೊತೆಗೂಡಿ ಮಾಡಿದ ಅನೇಕ ಯಶಸ್ಸಿನ ಗಾಥೆಗಳು ನಮ್ಮ ಕಣ್ಣೆದುರಿಗಿವೆ. ಸ್ನೇಹ ಎನ್ನುವುದು ಕೇವಲ ಹೆಸರಿಗಷ್ಟೇ ಅಲ್ಲ. ನಮ್ಮ ಮಾನಸಿಕ ಆರೋಗ್ಯವನ್ನು ಉತ್ತಮವಾಗಿಸುವ ಶಕ್ತಿ.

2018 ರಲ್ಲಿ ನಡೆಸಿದ ಅಧ್ಯಯನವು ಸ್ನೇಹಿತರಿಂದ ಪಡೆಯುವ ಒಂದು ಪ್ರೀತಿಯ ಅಪ್ಪುಗೆಯು ಒತ್ತಡ ಮತ್ತು ಆತಂಕದಂತಹ ಕಷ್ಟಕರ ಭಾವನೆಗಳನ್ನು ಕಡಿಮೆ ಮಾಡುತ್ತದೆ ಎಂದು ಹೇಳಿದೆ. ಎಲ್ಲಾ ವಯಸ್ಸಿನಲ್ಲಿಯೂ ಅನೇಕ ಸ್ನೇಹಿತರು ಜೊತೆಯಾಗುತ್ತಾರೆ. ಆದರೆ ಕೆಲವರು ಮಾತ್ರ ಜೀವನದಲ್ಲಿ ಅತೀ ಹತ್ತಿರವಾಗುತ್ತಾರೆ.

​ಆತಂಕದ ನಿವಾರಣೆ

ಜೀವನದಲ್ಲಿ ಉತ್ತಮ ಸ್ನೇಹಿತರಿದ್ದರೆ ಎಲ್ಲ ವಿಚಾರಗಳನ್ನೂ ಹಂಚಿಕೊಳ್ಳುತ್ತೇವೆ. ಇದರಿಂದ ಮಾನಸಿಕ ಆತಂಕ, ದುಗುಡವನ್ನು ನಿವಾರಿಸಬಹುದು. ವೈದ್ಯರು ಹೇಳುವ ಪ್ರಕಾರ, ಒಂದು ಉತ್ತಮ ಸ್ನೇಹ ಒಬ್ಬ ಖಿನ್ನತೆಗೆ ಒಳಗಾದ ವ್ಯಕ್ತಿಯನ್ನೂ ಸರಿಪಡಿಸಬಲ್ಲದು. ಅಂತಹ ಅದ್ಭುತ ಶಕ್ತಿ ಸ್ನೇಹಕ್ಕಿದೆ.

​ಒಂಟಿತನಕ್ಕೆ ಗುಡ್‌ ಬಾಯ್‌ ಹೇಳಿ

ಒಂಟಿತನ ಎಂತಹ ಗಟ್ಟಿ ವ್ಯಕ್ತಿಗಳನ್ನೂ ಕೂಡ ದುರ್ಬಲಗೊಳಿಸಬಲ್ಲದು. ಆದರೆ ಸ್ನೇಹ ಎಂತಹ ಹೊಸ ವಿಷಯಗಳಿಗೆ, ಹೊಸ ಕೆಲಸಗಳಿಗೂ ನಾಂದಿಯಾಗಬಲ್ಲದು. ಆದ್ದರಿಂದ ಸ್ನೇಹತರೊಂದಿಗೆ ಇರುವಾಗ ಒಂಟಿತನಕ್ಕೆ ಅವಕಾಶವೇ ಇರುವುದಿಲ್ಲ.

ಒಂಟಿಯಾಗಿದ್ದಾಗ ಮನುಷ್ಯ ಬಾವಿಯೊಳಗಿನ ಕಪ್ಪೆಯಾಗುತ್ತಾನೆ. ಹೊಸ ವಿಚಾರಗಳ ಹರಿವಿಲ್ಲದೆ ತನ್ನದೇ ಯೋಚನಾಲಹರಿಯಲ್ಲಿ ಬದುಕುತ್ತಾನೆ. ಆದರೆ ಸ್ನೇಹಿತರೊಂದಿಗೆ ಇದ್ದರೆ ಮೆದುಳಿನ ಕಾರ್ಯ ಚಟುವಟಿಕೆ ಚುರುಕುಗೊಳ್ಳುತ್ತದೆ. ಒಂದೇ ಕೈಯಿಂದ ಚಪ್ಪಾಳೆ ಸಾಧ್ಯವಿಲ್ಲ ಎನ್ನುವ ಹಾಗೆ ಒಬ್ಬನಿಂದ ಆಗದ ಕೆಲಸವನ್ನು ಸ್ನೇಹಿತರೊಂದಿಗೆ ಮಾಡಿದಾಗ ಯಶಸ್ಸು ಸಾಧ್ಯ. ಆದ್ದರಿಂದ ಸ್ನೇಹ ಎನ್ನುವುದು ಜೀವನದ ಗುರಿ ಮುಟ್ಟಲು, ಮಾನಸಿಕವಾಗಿ ಆರೋಗ್ಯವಾಗಿರಲು ಬಹಳ ಮುಖ್ಯವಾಗಿದೆ.

​ಒತ್ತಡದಿಂದ ದೂರವಾಗಲು ಸಾಧ್ಯ

ಇತ್ತಿಚಿನ ದಿನಗಳಲ್ಲಿ ಬದುಕು ಹೇಗಾಗಿದೆ ಎಂದರೆ ಉದ್ಯೋಗ, ಮನೆ, ಸಾಂಕ್ರಾಮಿಕ ಕಾಯಿಲೆಯ ಭಯ ಹೀಗೆ ಇಡೀ ದಿನ ಒತ್ತಡದಲ್ಲಿಯೇ ಬದುಕು ಸಾಗುತ್ತಿದೆ. ಸ್ನೇಹಿತರ ಸಂಗ ಇದಕ್ಕೆ ಚಿಕಿತ್ಸೆ ನೀಡುತ್ತದೆ. ನೀವೇ ನೋಡಿ ವಾರದಲ್ಲಿ ಒಮ್ಮೆ ನಿಮ್ಮ ಬೆಸ್ಟ್‌ ಫ್ರೆಂಡ್‌ನ್ನು ಭೇಟಿಯಾಗಿ ಬನ್ನಿ ನಿಮ್ಮ ಮನಸ್ಸು ಉಲ್ಲಾಸಭರಿತವಾಗಿರುತ್ತದೆ.

ಅಲ್ಲದೆ ಅಧ್ಯಯನಗಳು ಹೇಳುವ ಪ್ರಕಾರ ಸ್ನೇಹಿತರೊಂದಿಗೆ ಹೆಚ್ಚು ಬೆರೆತಾಗ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವಷ್ಟು ಸದೃಢರಾಗಬಹುದು. ನಮ್ಮನ್ನು ಒತ್ತಡಕ್ಕೆ ತಳ್ಳುವ ವಿಷಯಗಳನ್ನು ಸ್ನೇಹತರೊಂದಿಗೆ ಹಂಚಿಕೊಂಡಾಗ ಅವರ ಸಲಹೆ ಬದುಕಿನಲ್ಲಿ ಧನಾತ್ಮಕ ಬದಲಾವಣೆಯನ್ನು ತರಬಹುದು.

​ಕೊನೆಯ ಮಾತು

ಸ್ನೇಹಕ್ಕೆ ವಯಸ್ಸಿನ ಅಂತರವಿಲ್ಲ. ಜಾತಿ, ಮತ, ಬಣ್ಣದ ಬೇಧವಿಲ್ಲ. ಬದುಕಿನ ಯಾವ ಗಳಿಗೆಯಲ್ಲಿ ಬೇಕಾದರೂ ಯಾರೊಂದಿಗಾದರೂ ಸ್ನೇಹವಾಗಬಹುದು. ಸದಾ ಬದುಕಿನೆಡೆಗೆ ತುಡಿತವಿರುವ, ಧನಾತ್ಮಕವಾಗಿ ಯೋಚಿಸುವ ಸ್ನೇಹಿತರನ್ನು ಆಯ್ದುಕೊಳ್ಳಿ. ಸಣ್ಣ ವಿಚಾರಗಳಿಗೆ ಮುನಿಸಿಕೊಂಡರೆ ಸ್ನೇಹಕ್ಕೆ ಅರ್ಥವಿಲ್ಲ. ಅದು ಮಾನಸಿಕ ಆರೋಗ್ಯಕ್ಕೂ ಹಾನಿ. ಹೀಗಾಗಿ ನಿಮ್ಮ ಸ್ನೇಹ ಜೀವನದುದ್ದಗಲಕ್ಕೂ ಜೊತೆಯಾಗಿರುವಂತೆ ನೋಡಿಕೊಳ್ಳಿ. ಇದರಿಂದ ನಿಮ್ಮ ಮಾನಸಿಕ ಸ್ಥಿತಿಯನ್ನೂ ಕಾಪಾಡಿಕೊಳ್ಳಬಬಹುದು.