ಮನೆ ಭಾವನಾತ್ಮಕ ಲೇಖನ ಸಾಧ್ಯತೆಯಿಂದ ಸಾಧನೆಯೆಡೆಗೆ

ಸಾಧ್ಯತೆಯಿಂದ ಸಾಧನೆಯೆಡೆಗೆ

0

ಶಿಷ್ಯನೊಬ್ಬ ಗುರುವನ್ನು ಕೇಳಿದ: ಗುರುಗಳೇ ನಾನು ಏನಾದರೊಂದು ಸಾಧನೆ ಮಾಡಬೇಕು ಎಂದು ಬಯಸಿದ್ದೇನೆ. ಏನು ಮಾಡಬಹುದು?

ಗುರು ಶಿಷ್ಯನ ಮುಖ ನೋಡುತ್ತ ಹೇಳಿದ: ಏನು ಬೇಕಾದರೂ ಮಾಡಬಹುದು?

ಶಿಷ್ಯನಿಗೆ ಆಶ್ಚರ್ಯ: ಏನು ಬೇಕಾದರೂ ಅಂದರೆ?

ಗುರು: ಹೌದು ಏನು ಬೇಕಾದರೂ ಸಾಧಿಧಿಸಬಹುದು?

ಶಿಷ್ಯ: ನಾನು ಕಲಿತ ವಿದ್ಯೆಗೆ ಪೂರಕವಾಗಿ ಏನಾದರೂ ಮಾಡಬಹುದು ಎನ್ನುವುದಾದರೆ ಸರಿ, ಅದು ಬಿಟ್ಟು ಏನು ಬೇಕಾದರೂ ಅಂದರೆ?

ಗುರುಗಳು ಹೇಳಿದರು: ನೀನು ಹಕ್ಕಿಯಂತೆ ಹಾರಬಹುದು, ಮೀನಿನಂತೆ ಈಜಬಹುದು, ಬೆಟ್ಟಗಳನ್ನೇ ಪುಡಿಗಟ್ಟಬಹುದು. ನಿನ್ನಂತಹುದೇ ಇನ್ನೊಬ್ಬ ವ್ಯಕ್ತಿಯನ್ನು ಸೃಷ್ಟಿಸಬಹುದು.

ಶಿಷ್ಯ: ಹೌದಾ? ನೀವಿದನ್ನು ನನಗೆ ಹೇಳಿಕೊಟ್ಟೇ ಇಲ್ಲವಲ್ಲಾ?

ಗುರುಗಳು: ಇದು ಹೇಳಿಕೊಟ್ಟು ಬರುವುದಲ್ಲ. ನಿನ್ನೊಳಗಿನಿಂದ ಬರಬೇಕು. ಏನೆಲ್ಲಮಾಡುವ ಸಾಧ್ಯತೆ ಎಲ್ಲರಿಗೂ ಇರುತ್ತದೆ. ಆದರೆ, ಅದನ್ನು ಮಾಡಿದವರು ಮಾತ್ರ ಸಾಧಕರು ಅನಿಸಿಕೊಳ್ಳುತ್ತಾರೆ. ಇದಕ್ಕೆ ಬೇಕಿರುವುದು ವಿದ್ಯೆಯಲ್ಲ, ಬರೀ ಬುದ್ಧಿಯಲ್ಲ. ಮಾಡಲೇಬೇಕೆಂಬ ಇಚ್ಛಾಶಕ್ತಿ.

ಶಿಷ್ಯ ಹೌದೇ ಎಂಬಂತೆ ತಲೆಬಾಗಿದ.

ಯಶಸ್ಸು, ಸಾಧನೆ ಎನ್ನುವುದು ಪ್ರತಿಯೊಬ್ಬರೂ ಬಯಸುವ ಅಮೃತ ಫಲ. ಹಾಗಂತ ಅದು ಎಲ್ಲರ ಕೈಗೂ ಸಿಗುವುದಿಲ್ಲ. ಯಾಕೆಂದರೆ, ಹೆಚ್ಚಿನವರ ಪಾಲಿಗೆ ಸಾಧನೆ ಎನ್ನುವುದು ಒಂದು ಕೇವಲ ಕನಸಾಗಿ, ಮಹತ್ವಾಕಾಂಕ್ಷೆಯಾಗಿ ಉಳಿಯುತ್ತದೆ. ಆದರೆ, ಸಾಧನೆಗೆ ಬೇಕಿರುವುದು ಬರೀ ಕನಸಲ್ಲ. ಕನಸನ್ನು ನನಸಾಗಿಸಬಲ್ಲ, ಇಚ್ಛಾಶಕ್ತಿ, ಕಠಿಣ ಪರಿಶ್ರಮ, ಎಷ್ಟೇ ಕಷ್ಟವಿದ್ದರೂ ಬೆನ್ನಟ್ಟಬಲ್ಲಎದೆಗಾರಿಕೆ ಮತ್ತು ಅದಕ್ಕೆ ಪೂರಕವಾದ ಸಾಮರ್ಥ್ಯ.

ಸಾಮರ್ಥ್ಯ ಗುರುತಿಸುವುದು ಹೇಗೆ?

ಎಲ್ಲರೊಳಗೂ ಒಂದು ಶಕ್ತಿ ಇದೆ ಅಂತ. ಹಾಗಿದ್ದರೆ ಆ ಶಕ್ತಿಯನ್ನು ಗುರುತಿಸುವುದು ಹೇಗೆ? ಹೆಚ್ಚಿನವರಿಗೆ ತಮ್ಮ ಶಕ್ತಿಯ ಅರಿವು ಇರುವುದಿಲ್ಲ. ಸಾಗರೋಲ್ಲಂಘನ ಮಾಡುವ ಮುನ್ನ ಹನುಮಂತನಿಗೂ ಅಂಥ ಶಕ್ತಿ ಇರುವ ಬಗ್ಗೆ ತಿಳಿದಿರಲಿಲ್ಲ. ಇತರರು ಗುರುತಿಸಿ ಅವನಿಗೆ ಹೇಳಿದ ಮೇಲೆ ಮನವರಿಕೆ ಆಯಿತಂತೆ. ಈಗ ಗುರುತಿಸಿ ಹೇಳುವವರು ಕಡಿಮೆ. ನಾವೇ ಗುರುತಿಸಿಕೊಳ್ಳಬೇಕು. ನಾನು ಚೆನ್ನಾಗಿ ಹಾಡಬಲ್ಲೆನಾ? ನನ್ನ ಕುಣಿತದ ಶಕ್ತಿ ಎಷ್ಟು? ನನ್ನ ಕ್ರಿಯಾತ್ಮಕ ಆಲೋಚನೆಗಳ ತಾಕತ್ತೆಷ್ಟು ಎನ್ನುವುದನ್ನು ನಾವೇ ಅರಿಯಬೇಕು. ಅಂದರೆ, ಸ್ವಯಂ ಅರಿವೇ ನಮಗೆ ಮಹಾಗುರು.

ನಿಮ್ಮ ಗುರಿಗಳೇನು?

ನೀವು ಬದುಕಿನಲ್ಲಿಏನಾಗಬೇಕೆಂದು ಬಯಸಿದ್ದೀರಿ? ನಿಮ್ಮ ಉದ್ದೇಶವೇನು ಎನ್ನುವುದನ್ನು ಮೊದಲು ಅರ್ಥ ಮಾಡಿಕೊಳ್ಳಿ. ಅದನ್ನು ಬರೆದಿಡಿ. ಅದರಲ್ಲಿವೈಯಕ್ತಿಕ ಗುರಿಗಳು ಇರಬಹುದು, ಕೌಟುಂಬಿಕ ಇರಬಹುದು. ವೃತ್ತಿಬದುಕಿನ ಸಾಧನೆ ಇರಬಹುದು, ಸಾಮಾಜಿಕ ಕಲ್ಪನೆಗಳೂ ಇರಬಹುದು. ಉದ್ಯಮ ಕ್ಷೇತ್ರದಲ್ಲಿಇರುವವರು ಔದ್ಯಮಿಕ ಗೋಲ್ಗಳನ್ನು ಹೊಂದಿರಬಹುದು.

ಗುರಿ ತಲುಪುವ ದಾರಿ

ಗುರಿಗಳನ್ನು ಸೆಟ್ ಮಾಡುವುದೇನೋ ಸುಲಭ. ಆದರೆ, ಅದನ್ನು ಸಾಧಿಧಿಸುವುದಕ್ಕೆ ಅಗಾಧವಾದ ತಾಳ್ಮೆ ಮತ್ತು ತಾಕತ್ತು ಬೇಕು. ಗುರಿಯ ಕನಸು ಎನ್ನುವುದು ಒಂದು ಬೀಜವನ್ನು ಬಿತ್ತಿದ ಹಾಗೆ. ಆದರೆ, ಗುರಿ ಸಾಧನೆ ಎನ್ನುವುದು ಅದನ್ನು ಬೆಳೆಸಿದ ಹಾಗೆ. ಬಿತ್ತಿದ ಬೀಜಕ್ಕೆ ಕಾಲ ಕಾಲಕ್ಕೆ ನೀರು, ಗೊಬ್ಬರವನ್ನು ನೀಡಬೇಕು. ಅದನ್ನು ಪ್ರಕೃತಿ ವಿಕೋಪಗಳಿಂದ, ಕೀಟಗಳಿಂದ ರಕ್ಷಿಸಬೇಕು. ಬೆಳೆದು ನಿಂತಾಗ ದಾಳಿ ಮಾಡುವ ಪ್ರಾಣಿಗಳು, ಪಕ್ಷಿಗಳು, ಮನುಷ್ಯರು ಎಲ್ಲರನ್ನೂ ನಿಯಂತ್ರಿಸಬೇಕಾಗುತ್ತದೆ. ನಡುವೆ, ಇದೆಲ್ಲಬೇಕಿತ್ತಾ ಎಂಬ ಬೇಸರಿಕೆಯೂ ಕಾಡಬಹುದು. ಅದೆಲ್ಲವನ್ನೂ ಮೆಟ್ಟಿ ನಿಂತು ಮುಂದೆ ಸಾಗಬೇಕು.

ಪ್ರೌಢತೆ ತುಂಬ ಮುಖ್ಯ

ಸಾಧನೆಯ ಹಾದಿಯಲ್ಲಿಮುಖ್ಯವಾಗಿ ಬೇಕಾಗಿರುವುದು ಪ್ರೌಢತೆ. ಏನು ಮಾಡುತ್ತಿದ್ದೇನೆ ಎಂಬುದರ ಸ್ಪಷ್ಟ ಅರಿವು. ಅದನ್ನು ಮಾಡಲೇಬೇಕೆಂಬ ಇಚ್ಛಾಶಕ್ತಿ ಬೇಕು. ತಪನೆಯ ಅಗ್ನಿಯೊಂದು ನಿತ್ಯ ಉರಿಯುತ್ತಿದ್ದಾಗ ಮಾತ್ರ ಒಳಗೆ ಕುದಿತ ಇರುವುದು. ಮುಂದಡಿ ಇಟ್ಟಿರುವ ಕಾರ್ಯದ ಬಗ್ಗೆ ಆತ್ಮಾಭಿಮಾನ, ಆಗಾಗ ಕಾಡುವ ನೆಗೆಟಿವಿಟಿಗಳನ್ನು ಹತ್ತಿಕ್ಕಬಲ್ಲಸಾಮರ್ಥ್ಯ, ಮನೋನಿಗ್ರಹದ ಜತೆಗೆ ಮನೋ ನೆಮ್ಮದಿ ತುಂಬ ಮುಖ್ಯ. ಕೆಲವೊಮ್ಮೆ ಸಾಧನೆಯ ಹಾದಿಯಲ್ಲಿಹಿನ್ನಡೆಯೂ ಆಗಬಹುದು, ಸೋಲೂ ಕಾಡಬಹುದು. ಆದರೆ, ಅದ್ಯಾವುದೂ ಸಾಧನೆಯ ಹಾದಿಯಿಂದ ನಮ್ಮನ್ನು ಬದಿಗೆ ಸರಿಯದಂತೆ ನೋಡಿಕೊಳ್ಳುವ ಧೀಶಕ್ತಿ ಬೇಕು. ಆಲಸ್ಯಗಳು ಕಾಡದಂತೆ ನೋಡಿಕೊಳ್ಳುವ ಆರೋಗ್ಯ ಬೇಕು. ಇವೆಲ್ಲವೂ ಜತೆಯಾಗಿ ನಿಂತರೆ ಇಂದು ಸಾಧ್ಯತೆಯಾಗಿ ಕಂಡದ್ದು ನಾಳೆಗೆ ಸಾಧನೆಯಾಗಿ ನೆಲೆ ನಿಂತೀತು.