ಮನೆ ಯೋಗಾಸನ ಗರುಡಾಸನ

ಗರುಡಾಸನ

0

“ಗರುಡ”ನೆಂದರೆ ಹದ್ದಿನ ಜಾತಿಗೆ ಸೇರಿದ ಗರುಡಪಕ್ಷಿ. “ಖಗೇಶ್ವರ” ನೆಂಬ ಹೆಸರಾಂತ ಪಕ್ಷಿರಾಜ ಹೆಸರನ್ನು ಈ ಆಸನಕ್ಕೊಳಪಡಿಸಿದೆ. ವಿಷ್ಣುವಿನ ವಾಹನವಾದುದರಿಂದ “ವಿಷ್ಣುರಥ”ವೆಂಬ ಬಿರುದು ಈ ಪಕ್ಷಿಗಿದೆ. ಇದರ ಮುಖ ಬಿಳುಪು. ಕೊಕ್ಕು ಮೊನಚಾಗಿ ಬಗ್ಗಿರುತ್ತದೆ. ಇದರ ದೇಹಕ್ಕೆ ಕೆಂಪು ಬಣ್ಣದ ಪುಕ್ಕಗಳು ಅಲಂಕಾರ.

ಅಭ್ಯಾಸ ಕ್ರಮ :-

೧. ಮೊದಲು ತಾಡಾಸನದಲ್ಲಿ ನಿಂತು, ಬಳಿಕ ಬಲ ಬಲಮಂಡಿಯನ್ನು ಭಾಗಿಸಬೇಕು.

೨. ಆಮೇಲೆ ಎಡಗಾಲನ್ನು ಬಲಮಂಡಿಯ ಮೇಲ್ಭಾಗದ ಬಲತೊಡೆಯ ಮೇಲೆ ತಂದು ಎಡತೊಡೆಯ ಹಿಂಭಾಗವನ್ನು ಬಲ ತೊಡೆಯ ಮುಂಭಾಗಕ್ಕೆ ಒರಗಿಸಿಡಬೇಕು.

೩. ಅನಂತರ ಎಡಕಣಕಾಲು ಬಲದ ಮೀನಖಂಡವನ್ನು ಒತ್ತಿಕೊಂಡಿರುವಂತೆ ಎಡಪಾದವನ್ನು ಬಲಮೀನ ಖಂಡದ ಹಿಂದೆ ಸರಿಸಿ ಎಡಪಾದದ ಹೆಬ್ಬೆರಳು ಬಲಪಾದದ ಒಳಭಾಗದ ಗಿಣ್ಣಿನ ಮೇಲೆ ಕೊಕ್ಕೆಯಂತೆ ಭಾಗಿಸಿಡಬೇಕು. ಈಗ ಎಡಗಾಲು ಬಲಗಾಲಿನ ಮೇಲೆ ಸುರಳಿ ಸುತ್ತಿದಂತಾಗುತ್ತದೆ. (ಬಳ್ಳಿ ಮರವನ್ನು ಸುತ್ತುವಂತೆ).

೪. ಈ ಭಂಗಿಯಲ್ಲಿ ದೇಹದ, ಹೊರೆಯನ್ನು ಸಮತೋಲನವಾಗಿ ಹೊರುವ ಹೊಣೆ ಬಲಗಾಲಿಗೆ ಮಾತ್ರವಿದೆ. ಇದನ್ನು ಅಭ್ಯಾಸಮಾಡಿ ಕಲಿಯಲು ಸ್ವಲ್ಪ ಕಾಲಾವಕಾಶ ಬೇಕು.

೫. ಈಗ ಮೊಣಕೈಗಳನ್ನು ಮಡಚಿ, ತೋಳುಗಳೆರಡನ್ನು ಮೇಲೆತ್ತಿ ಎದೆಯ ಮಟ್ಟಕ್ಕೆ ನಿಲ್ಲಿಸಬೇಕು. ಬಳಿಕ ಬಲದ ಮೊಣಕೈಯನ್ನು ಎಡದ ಮೊಣಕೈ ಕೀಲಿನ ಬಳಿ ಬಲದ ಮೇಲ್ದೊಳಿನ ಮುಂಭಾಗಕ್ಕೆ ಒರಗಿಸಿಡಬೇಕು. ಅನಂತರ ಬಲದ ಹಿಂಗೈಯನ್ನು ಬಲಗಡೆಗೂ, ಎಡ ಹಿಂಗೈಯನ್ನು ಎಡಗಡೆಗೂ ತಿರುಗಿಸಿ ಅಂಗೈಗಳ ಎರಡನ್ನು ಜೋಡಿಸಬೇಕು.  ಈಗ ಎಡದೋಳು ಬಲದೊಳನ್ನ ಸುತ್ತುವರಿಸಿದಂತಾಯಿತು.

೬. ತರುವಾಯ ಈ ಭಂಗಿಯಲ್ಲಿ 15-20 ಸೆಕೆಂಡುಗಳ ಕಾಲವಿದ್ದು, ನೀಳವಾಗಿ ಉಸಿರಾಡುತ್ತಿರಬೇಕು. ಇದಾದ ಮೇಲೆ ತೋಳುಗಳನ್ನು ಕಾಲುಗಳನ್ನು ಬೇರ್ಪಡಿಸಿ ʼತಾಡಾಸನʼಕ್ಕೆ ಮತ್ತೆ ಬರಬೇಕು.

೭. ಈಗ ಎಡಗಾಲಿನ ಮೇಲೆ ಹೊಂದಿಸಿ, ನಿಂತು ಬಲಭಾಗವನ್ನು ಮೇಲೆ ವಿವರಿಸಿದ ಕ್ರಮದಲ್ಲಿ ಅದಕ್ಕೆ ಸುತ್ತುವರಿಸಿ, ಅದರಂತೆಯೇ ಬಲದೊಳನ್ನು ಎಡತೋಳಿಗೆ ಸುತ್ತಿಸಿ, ಮೇಲಿನ ಭಂಗಿಯಲ್ಲಿ ಅಭ್ಯಾಸಿಸಬೇಕು. ಎರಡೂ ಪಕ್ಕಗಳಲ್ಲಿಯ ಆಸನ ಭಂಗಿಯ ಕಾಲ ಸಮವಾಗಿರಬೇಕು.

ಪರಿಣಾಮ :-

ಈ ಆಸನಭ್ಯಾಸವು ಹರಡು (ಗಿಣ್ಣು)ಗಳನ್ನ ಚೆನ್ನಾಗಿ ಬೆಳೆಸುವಂತೆ ಮಾಡುವುದಲ್ಲದೆ, ಹೆಗಲಿನಲ್ಲಿ ಪೀಡಿಸುತನವಿದ್ದರೆ ಅದನ್ನು ಹೋಗಲಾಡಿಸುತ್ತದೆ. ಮೀನಖಂಡಗಳಲ್ಲಿ ಸೆಡೆತವು (cramps) ತಲೆದೋರದಂತೆ ಅದನ್ನು ತಡೆದಿಡಲು ಈ ಆಸನಾಭ್ಯಾಸವನ್ನು ಒತ್ತಿ ಹೇಳಿದೆ .

ಕಾಲಿನಲ್ಲಿಯ ಸೆಡೆತವನ್ನು ಮತ್ತು ನೋವನ್ನು ಕಳೆಯಲು ʼಗರುಡಾಸʼನ ಜೊತೆಗೆ ʼವೀರಾಸನʼ ಮತ್ತು ʼಬೇಕಾಸನʼ (ಪರ್ಯಾಯ ನಾಮ “ಮಂಡೂಕಾಸನ”) ಇವುಗಳ ಅಭ್ಯಾಸಗಳು ಪ್ರಯೋಜನಕಾರಿ.

ಹಿಂದಿನ ಲೇಖನಗಂಟು ಭಾರಂಗಿ
ಮುಂದಿನ ಲೇಖನಹಾಸ್ಯ