ಮನೆ ಸುದ್ದಿ ಜಾಲ ಕುಮಾರಸ್ವಾಮಿಗೆ ಒಳ್ಳೆ ಲಾಟರಿ: ಡಿ.ಕೆ. ಶಿವಕುಮಾರ್ ವ್ಯಂಗ್ಯ

ಕುಮಾರಸ್ವಾಮಿಗೆ ಒಳ್ಳೆ ಲಾಟರಿ: ಡಿ.ಕೆ. ಶಿವಕುಮಾರ್ ವ್ಯಂಗ್ಯ

0

ಬೆಂಗಳೂರು: ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ  ಅವರ ಬಗ್ಗೆ ವ್ಯಂಗ್ಯವಾಡಿದ್ದಾರೆ. ಬಿಡದಿ ಟೌನ್ ಶಿಪ್ ಯೋಜನೆಯ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರಿಗೆ ಒಳ್ಳೆ ಲಾಟರಿ ಸಿಗಲಿದೆ ಎಂದು ಹೇಳಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು, ಬಿಡದಿ ಟೌನ್ ಶಿಪ್ ಯೋಜನೆಗೆ ರಾಜ್ಯ ಸಂಪುಟ ಅನುಮೋದನೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಯೋಜನೆಯಿಂದ ಕೆಲವರಿಗೆ ಹೆಚ್ಚಿನ ಲಾಭವಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ಕುಮಾರಸ್ವಾಮಿ ಅವರನ್ನು ಉದ್ದೇಶಿಸಿ ಮಾತನಾಡಿದ ಅವರು, “ಈಗ ಅವರು ದೆಹಲಿಯಲ್ಲಿ ಕುಳಿತುಕೊಂಡು 8 ಸಾವಿರ ಅಡಿ ಕೊಡುತ್ತೇನೆ ಎಂದು ಹೇಳುತ್ತಿದ್ದಾರೆ. ಅವರ ಕ್ಷೇತ್ರವಾಗಿರುವ ಕಾರಣಕ್ಕೆ ಈ ಜಾಗವನ್ನು ಡಿ ನೋಟಿಫೈ ಮಾಡಬೇಕಿತ್ತು. ಅವರದ್ದೇ ಜಮೀನು ಇದ್ದು, ಈಗ ಹಣ ಪಡೆಯುವ ಸಮಯ ಬಂದಿದೆ. ಅವರು ದುಡ್ಡು ಬೇಡ ಎಂದು ಕೊಟ್ಟು ಬಿಡಲಿ ನೋಡೋಣ,” ಎಂದು ಹೇಳಿದರು.

“ಅವರು ಜಮೀನನ್ನು ಎಷ್ಟಕ್ಕೆ ತೆಗೆದುಕೊಂಡಿದ್ದರು ಎಂಬುದನ್ನು ಅವರ ಸೇಲ್ ಡೀಡ್ ನೋಡಿ ತಿಳಿಯಬಹುದು. ಈಗ ಅದೇ ಜಾಗದ ಮೌಲ್ಯ ಹೆಚ್ಚಾಗಿದೆ. ಇದರಿಂದ ಅವರಿಗೆ ಒಳ್ಳೆ ಲಾಭ ಸಿಗಲಿದೆ. ಅದಕ್ಕೇ ನಾನು ಲಾಟರಿ ಎಂದು ಹೇಳಿದ್ದೇನೆ,” ಎಂದು ಸ್ಪಷ್ಟಪಡಿಸಿದರು.

ಇನ್ನಷ್ಟು ಮಾತನಾಡಿದ ಅವರು, “ಯಾರಿಗೋ ಅವರು ಜಿ ಪಿ ಎ ನೀಡಿದ್ದಾರೆ. ಈಗ ನನಗೆ ಹಣ ನೀಡಿ ಎಂದು ಹೇಳುತ್ತಿದ್ದಾರೆ. ಭೂಮಿ ಮಾಲೀಕರು ಈ ಬಗ್ಗೆ ಎಚ್ಚರಿಕೆಯಿಂದಿರಬೇಕು,” ಎಂದು ಹೇಳಿದರು. ಭೂಮಿ ಮಾಲೀಕರಿಗೆ ಭರವಸೆ ನೀಡಿದ ಡಿ.ಕೆ. ಶಿವಕುಮಾರ್ ಅವರು, “ನನ್ನ ಮೇಲೆ ವಿಶ್ವಾಸ ಇಡಿ. ನಿಮ್ಮ ಭೂಮಿ ಉಳಿಸಿಕೊಳ್ಳಿ. ಮುಂದೆ ನಿಮಗೆ ಉತ್ತಮ ಲಾಭ ಸಿಗುತ್ತದೆ,” ಎಂದು ಹೇಳಿದರು.

ರೈತರು ನಡೆಸುತ್ತಿರುವ ಹೋರಾಟ ಹಾಗೂ ವಿರೋಧ ಪಕ್ಷಗಳ ಟೀಕೆ ಕುರಿತು ಪ್ರತಿಕ್ರಿಯಿಸಿದ ಅವರು, “ಟೀಕೆ ಟಿಪ್ಪಣಿ ಸಾಮಾನ್ಯ. ಕೆಲವರು ರಾಜಕೀಯ ಕಾರಣಕ್ಕೆ ವಿಷಯವನ್ನು ಎತ್ತಿಕೊಳ್ಳುತ್ತಾರೆ. ನಾವು ಕೆಲಸದ ಮೂಲಕ ಉತ್ತರ ಕೊಡುತ್ತೇವೆ,” ಎಂದು ಹೇಳಿದರು.