ನವದೆಹಲಿ: ಪರಿಸರ ಸ್ನೇಹಿ ಇಂಧನ ಬಳಕೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಇಥನಾಲ್ ಮಿಶ್ರಿತ ಪೆಟ್ರೋಲ್ ನ ಕೆಲವು ವಿಧಗಳ ಮೇಲಿನ ಅಬಕಾರಿ ಸುಂಕವನ್ನು ಸಂಪೂರ್ಣವಾಗಿ ರದ್ದುಗೊಳಿಸಿದೆ. ಈ ತೀರ್ಮಾನದಿಂದ ಜೈವಿಕ ಇಂಧನ ಬಳಕೆಗೆ ಮತ್ತಷ್ಟು ಉತ್ತೇಜನ ದೊರೆಯುವ ಸಾಧ್ಯತೆ ಇದ್ದು, ವಿದೇಶಿ ಕಚ್ಚಾ ತೈಲದ ಮೇಲಿನ ದೇಶದ ಅವಲಂಬನೆಯನ್ನು ತಗ್ಗಿಸುವ ಕೇಂದ್ರದ ಪ್ರಯತ್ನಕ್ಕೆ ಮತ್ತಷ್ಟು ಬಲ ಸಿಗಲಿದೆ.
ಹಣಕಾಸು ಸಚಿವಾಲಯ ಬಿಡುಗಡೆ ಮಾಡಿರುವ ಅಧಿಸೂಚನೆ ಅನ್ವಯ, E22, E25, E27 ಮತ್ತು E30 ಮಾದರಿಯ ಇಥನಾಲ್ ಮಿಶ್ರಿತ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಸಂಪೂರ್ಣವಾಗಿ ಶೂನ್ಯಕ್ಕೆ ಇಳಿಸಲಾಗಿದೆ. ಅಂದರೆ, ಶೇ.22, ಶೇ.25, ಶೇ.27 ಹಾಗೂ ಶೇ.30 ಇಥನಾಲ್ ಅಂಶ ಹೊಂದಿರುವ ಪೆಟ್ರೋಲ್ ಮೇಲೆ ಇನ್ನು ಮುಂದೆ ಅಬಕಾರಿ ಸುಂಕ ವಿಧಿಸಲಾಗುವುದಿಲ್ಲ.

ಕಳೆದ ಕೆಲವು ವರ್ಷಗಳಿಂದ ಕೇಂದ್ರ ಸರ್ಕಾರ ಇಥನಾಲ್ ಮಿಶ್ರಿತ ಇಂಧನ ಬಳಕೆಗೆ ಹೆಚ್ಚಿನ ಮಹತ್ವ ನೀಡುತ್ತಿದೆ. ಪೆಟ್ರೋಲ್ ನಲ್ಲಿ ಇಥನಾಲ್ ಮಿಶ್ರಣ ಮಾಡುವುದರಿಂದ ವಿದೇಶಗಳಿಂದ ಆಮದು ಮಾಡಿಕೊಳ್ಳುವ ಕಚ್ಚಾ ತೈಲದ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ. ಜೊತೆಗೆ ಇಂಧನ ವೆಚ್ಚ ನಿಯಂತ್ರಣಕ್ಕೆ ಸಹಕಾರಿಯಾಗುವುದರೊಂದಿಗೆ ಪರಿಸರ ಮಾಲಿನ್ಯ ತಗ್ಗಿಸಲು ಸಹ ಇದು ನೆರವಾಗುತ್ತದೆ.
ಇಥನಾಲ್ ಅನ್ನು ಮುಖ್ಯವಾಗಿ ಕಬ್ಬು, ಜೋಳ ಸೇರಿದಂತೆ ವಿವಿಧ ಕೃಷಿ ಉತ್ಪನ್ನಗಳಿಂದ ತಯಾರಿಸಲಾಗುತ್ತದೆ. ಹೀಗಾಗಿ ಈ ಕ್ರಮದಿಂದ ರೈತ ಸಮುದಾಯಕ್ಕೂ ಪರೋಕ್ಷವಾಗಿ ಲಾಭವಾಗುವ ನಿರೀಕ್ಷೆ ಇದೆ.
ಇಥನಾಲ್ ಉತ್ಪಾದನೆ ಹೆಚ್ಚಿದಂತೆ ಕೃಷಿ ಕ್ಷೇತ್ರಕ್ಕೆ ಹೊಸ ಮಾರುಕಟ್ಟೆ ಅವಕಾಶಗಳು ಸಿಗಲಿದ್ದು, ರೈತರ ಆದಾಯ ಹೆಚ್ಚಳಕ್ಕೂ ಇದು ನೆರವಾಗಲಿದೆ.

ಇತ್ತೀಚಿನ ದಿನಗಳಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳಲ್ಲಿ ನಿರಂತರ ಏರಿಳಿತ ಕಂಡುಬರುತ್ತಿದೆ. ಇದರ ಪರಿಣಾಮವಾಗಿ ದೇಶದಲ್ಲಿಯೂ ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಹೆಚ್ಚಳ ದಾಖಲಾಗಿದೆ.
ಮೇ ತಿಂಗಳ ಎರಡನೇ ಭಾಗದಲ್ಲಿ ಇಂಧನ ದರಗಳು ಲೀಟರ್ ಗೆ ಸುಮಾರು 7.50 ರೂಪಾಯಿವರೆಗೆ ಏರಿಕೆಯಾಗಿದ್ದವು. ಈ ಹಿನ್ನೆಲೆಯಲ್ಲಿ ಗ್ರಾಹಕರ ಮೇಲಿನ ಆರ್ಥಿಕ ಹೊರೆ ಕಡಿಮೆ ಮಾಡುವುದರ ಜೊತೆಗೆ ಪರ್ಯಾಯ ಇಂಧನ ಬಳಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ಮಧ್ಯಪ್ರಾಚ್ಯ ಪ್ರದೇಶದಲ್ಲಿನ ಉದ್ವಿಗ್ನ ಪರಿಸ್ಥಿತಿಯಿಂದ ಜಾಗತಿಕ ಕಚ್ಚಾ ತೈಲದ ಬೆಲೆ ಏರಿಕೆಯಾಗಿದ್ದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಈ ಹಿಂದೆ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್ ಗೆ 10 ರೂಪಾಯಿ ಕಡಿತಗೊಳಿಸಿತ್ತು.
ಆ ತೀರ್ಮಾನದಿಂದ ಸರ್ಕಾರಕ್ಕೆ ವಾರ್ಷಿಕವಾಗಿ 1 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಆದಾಯ ನಷ್ಟವಾಗಿದ್ದರೂ, ಗ್ರಾಹಕರ ಹಿತವನ್ನು ಗಮನದಲ್ಲಿಟ್ಟುಕೊಂಡು ಆ ಕ್ರಮ ಜಾರಿಗೆ ತರಲಾಗಿತ್ತು.
ಈಗ ಇಥನಾಲ್ ಮಿಶ್ರಿತ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಸಂಪೂರ್ಣವಾಗಿ ಮನ್ನಾ ಮಾಡುವ ಮೂಲಕ ಸ್ವಚ್ಛ ಇಂಧನ ಬಳಕೆ, ಇಂಧನ ಭದ್ರತೆ, ರೈತರ ಆದಾಯ ವೃದ್ಧಿ ಹಾಗೂ ಪರಿಸರ ಸಂರಕ್ಷಣೆ ಎಂಬ ನಾಲ್ಕು ಪ್ರಮುಖ ಉದ್ದೇಶಗಳನ್ನು ಒಂದೇ ಸಮಯದಲ್ಲಿ ಸಾಧಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಇಂಧನ ಕ್ಷೇತ್ರದಲ್ಲಿ ಆತ್ಮನಿರ್ಭರ ಭಾರತ ನಿರ್ಮಾಣದ ದಿಸೆಯಲ್ಲಿ ಇದನ್ನು ಮತ್ತೊಂದು ಪ್ರಮುಖ ಹೆಜ್ಜೆಯಾಗಿ ಪರಿಗಣಿಸಲಾಗಿದೆ.















