ಬೆಂಗಳೂರು: ರಾಜ್ಯ ಸರ್ಕಾರವು ಇತ್ತೀಚೆಗೆ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಯೋಜನೆ ಘೋಷಿಸಿರುವ ಹಿನ್ನೆಲೆಯಲ್ಲಿ, ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಕೂಡ ವಿದ್ಯಾರ್ಥಿಗಳಿಗೆ ಉಚಿತ ಮೆಟ್ರೋ ಪಾಸ್ ಸೌಲಭ್ಯ ಕಲ್ಪಿಸಬೇಕು ಎಂದು ಬೆಂಗಳೂರು ಮೆಟ್ರೋ ಪ್ರಯಾಣಿಕರ ಸಂಘ (BMCA) ಒತ್ತಾಯಿಸಿದೆ.
ಶಿಕ್ಷಣ ಪಡೆಯಲು ಸಾರಿಗೆ ವೆಚ್ಚ ಯಾವುದೇ ಕಾರಣಕ್ಕೂ ಅಡ್ಡಿಯಾಗಬಾರದು. ಆರ್ಥಿಕವಾಗಿ ಹಿಂದುಳಿದ ಹಿನ್ನೆಲೆಯ ವಿದ್ಯಾರ್ಥಿಗಳು ನಗರದ ವಿವಿಧ ಭಾಗಗಳಲ್ಲಿರುವ ಶಾಲೆಗಳು, ಕಾಲೇಜುಗಳು ಹಾಗೂ ಗ್ರಂಥಾಲಯಗಳಿಗೆ ಸುರಕ್ಷಿತವಾಗಿ ಮತ್ತು ಸಮಯಕ್ಕೆ ಸರಿಯಾಗಿ ತಲುಪಲು ಉಚಿತ ಪ್ರಯಾಣ ವ್ಯವಸ್ಥೆ ನೆರವಾಗುತ್ತದೆ. ಜೊತೆಗೆ ಅವರ ಕುಟುಂಬಗಳ ಮೇಲಿನ ಆರ್ಥಿಕ ಭಾರವೂ ಕಡಿಮೆಯಾಗುತ್ತದೆ ಎಂದು ಸಂಘ ತಿಳಿಸಿದೆ.

ಜಗತ್ತಿನ ಅನೇಕ ಸುಸ್ಥಿರ ನಗರಗಳು ಬಲಿಷ್ಠ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಆಧಾರದ ಮೇಲೆ ಅಭಿವೃದ್ಧಿಯಾಗಿವೆ. ವಿದ್ಯಾರ್ಥಿಗಳಿಗೆ ನಮ್ಮ ಮೆಟ್ರೋ ಸೇವೆಯನ್ನು ಸುಲಭವಾಗಿ ಲಭ್ಯವಾಗುವಂತೆ ಮಾಡಿದರೆ, ಸಾರ್ವಜನಿಕ ಸಾರಿಗೆಯನ್ನು ಪ್ರಮುಖ ಮತ್ತು ಮೊದಲ ಆಯ್ಕೆಯ ಪ್ರಯಾಣ ಮಾಧ್ಯಮವಾಗಿ ಪರಿಗಣಿಸುವ ಹೊಸ ಪೀಳಿಗೆಯನ್ನು ರೂಪಿಸಬಹುದು. ಇದರಿಂದ ದೀರ್ಘಾವಧಿಯಲ್ಲಿ ಖಾಸಗಿ ವಾಹನಗಳ ಬಳಕೆ ಮೇಲಿನ ಅವಲಂಬನೆ ಕೂಡ ಕಡಿಮೆಯಾಗಲಿದೆ ಎಂದು ಅಭಿಪ್ರಾಯಪಟ್ಟಿದೆ.

ಸಾರ್ವಜನಿಕ ಸಾರಿಗೆ ಬಳಕೆಯಿಂದ ಪ್ರಯಾಣಿಕರ ಆರೋಗ್ಯದ ಮೇಲೂ ಸಕಾರಾತ್ಮಕ ಪರಿಣಾಮ ಉಂಟಾಗುತ್ತದೆ. ಭಾರತೀಯ ವಿಜ್ಞಾನ ಸಂಸ್ಥೆ (IISc) ಯ ಸುಸ್ಥಿರ ಸಾರಿಗೆ ಪ್ರಯೋಗಾಲಯವು ಹಳದಿ ಮಾರ್ಗದಲ್ಲಿ ನಡೆಸಿದ ಅಧ್ಯಯನದಲ್ಲಿಯೂ ಈ ಅಂಶ ದೃಢಪಟ್ಟಿದೆ ಎಂದು ಬಿಎಂಸಿಎ ಪ್ರಕಟಣೆಯಲ್ಲಿ ತಿಳಿಸಿದೆ.
















