ಬೆಂಗಳೂರು, ಜೂನ್ 11: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್ ಹಾಗೂ ಸಹ ಆರೋಪಿ ಪವಿತ್ರಾ ಗೌಡ ಅವರ ಜೈಲು ಜೀವನದ ಕುರಿತು ಕುತೂಹಲಕಾರಿ ಮಾಹಿತಿ ಹೊರಬಿದ್ದಿದೆ. ಸುಪ್ರೀಂ ಕೋರ್ಟ್ ನಲ್ಲಿ ಜಾಮೀನು ಅರ್ಜಿ ತಿರಸ್ಕೃತವಾದ ಬಳಿಕ ನಟ ದರ್ಶನ್ ಜೈಲಿನಲ್ಲಿ ಮೌನ ವಹಿಸಿದ್ದು, ಪವಿತ್ರಾ ಗೌಡ ತಮ್ಮ ಆತ್ಮಚರಿತ್ರೆ ಬರೆಯುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ ಎನ್ನಲಾಗಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಯಲ್ಲಿ ಸಾಕ್ಷಿಗಳ ಪರೀಕ್ಷೆ ವಿಳಂಬವಾಗುತ್ತಿದೆ ಎಂದು ಆರೋಪಿಸಿ ದರ್ಶನ್ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಆದರೆ, ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿತ್ತು. ಪ್ರಮುಖ ಸಾಕ್ಷಿಗಳ ವಿಚಾರಣೆಯನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸುವಂತೆ ಕೆಳ ನ್ಯಾಯಾಲಯಕ್ಕೆ ಸೂಚನೆ ನೀಡಿದ್ದು, ಆ ಅವಧಿಯಲ್ಲಿ ವಿಚಾರಣೆ ಪೂರ್ಣಗೊಳ್ಳದಿದ್ದರೆ ಬಳಿಕ ಜಾಮೀನು ಕೋರಿ ಅರ್ಜಿ ಸಲ್ಲಿಸಬಹುದೆಂದು ತಿಳಿಸಿತ್ತು.
ಜಾಮೀನು ದೊರೆಯದ ಹಿನ್ನೆಲೆಯಲ್ಲಿ ದರ್ಶನ್ ತೀವ್ರ ನಿರಾಸೆಯಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಕನಿಷ್ಠ ಇನ್ನೂ ಒಂದು ವರ್ಷ ಜಾಮೀನು ಸಿಗುವ ಸಾಧ್ಯತೆ ಕಡಿಮೆ ಎಂಬ ಮಾಹಿತಿ ತಿಳಿದ ನಂತರ ಅವರು ಹೆಚ್ಚು ಮಾತುಕತೆ ನಡೆಸದೆ ಮೌನವಾಗಿದ್ದಾರೆ ಎನ್ನಲಾಗಿದೆ. ಜೈಲಾಡಳಿತ ವಾರಕ್ಕೊಮ್ಮೆ ನೀಡುವ ಪುಸ್ತಕಗಳನ್ನು ಓದುತ್ತಾ ಅವರು ಸಮಯ ಕಳೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆತ್ಮಚರಿತ್ರೆ ಬರೆಯುತ್ತಿರುವ ಪವಿತ್ರಾ ಗೌಡ
ಇನ್ನೊಂದೆಡೆ, ಪವಿತ್ರಾ ಗೌಡ ಜೈಲಿನಲ್ಲಿರುವ ಸಮಯವನ್ನು ವಿಭಿನ್ನ ರೀತಿಯಲ್ಲಿ ಬಳಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಕಳೆದ ಒಂದು ತಿಂಗಳಿನಿಂದ ಅವರು ಬಿಳಿ ಹಾಳೆ ಹಾಗೂ ಪೆನ್ಸಿಲ್ ಪಡೆದು ತಮ್ಮ ಜೀವನ ಕಥೆಯನ್ನು ಬರೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.

ತಮ್ಮ ಜೀವನ ಪಯಣ, ವೈಯಕ್ತಿಕ ಅನುಭವಗಳು ಹಾಗೂ ಬದುಕಿನ ವಿವಿಧ ಹಂತಗಳ ಕುರಿತು ಅವರು ಆತ್ಮಚರಿತ್ರೆ ರೂಪಿಸುತ್ತಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ನಡೆದ ಯೋಗ ದಿನಾಚರಣೆ ಅಭ್ಯಾಸ ಕಾರ್ಯಕ್ರಮದಲ್ಲಿಯೂ ಭಾಗವಹಿಸದೇ, ಜೈಲು ಕೋಣೆಯಲ್ಲೇ ಕುಳಿತು ಬರವಣಿಗೆಯಲ್ಲಿ ನಿರತರಾಗಿದ್ದರು ಎಂದು ವರದಿಯಾಗಿದೆ.
ಈ ಮೂಲಕ ದರ್ಶನ್ ಮತ್ತು ಪವಿತ್ರಾ ಗೌಡ ಅವರ ಜೈಲು ದಿನಚರಿ ಸಂಪೂರ್ಣ ವಿಭಿನ್ನ ಸ್ವರೂಪ ಪಡೆದುಕೊಂಡಿದ್ದು, ಒಬ್ಬರು ಮೌನ ಹಾಗೂ ಓದಿನತ್ತ ಗಮನ ಹರಿಸಿದ್ದರೆ, ಮತ್ತೊಬ್ಬರು ಬರವಣಿಗೆಯ ಮೂಲಕ ಸಮಯ ಕಳೆಯುತ್ತಿದ್ದಾರೆ ಎನ್ನಲಾಗಿದೆ.
















