ಮನೆ ಸುದ್ದಿ ಜಾಲ ಗೂಗಲ್‌ ನಿಂದ ಸೈಲೆಂಟಾಗಿ ಉದ್ಯೋಗಿಗಳ ವಜಾ

ಗೂಗಲ್‌ ನಿಂದ ಸೈಲೆಂಟಾಗಿ ಉದ್ಯೋಗಿಗಳ ವಜಾ

0

ಜಾಗತಿಕ ತಂತ್ರಜ್ಞಾನ ದೈತ್ಯ ಗೂಗಲ್ (Google) ತನ್ನ ಇತ್ತೀಚಿನ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನದ ವಿಸ್ತರಣೆಯ ಭಾಗವಾಗಿ ಮತ್ತೊಂದು ಸುತ್ತಿನ ಭಾರಿ ಉದ್ಯೋಗ ಕಡಿತಕ್ಕೆ ಮುಂದಾಗಿದೆ. ಕಳೆದ ಎರಡು ವಾರಗಳಿಂದ ಗೂಗಲ್‌ನ ಕ್ಲೌಡ್ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುತ್ತಿದ್ದಾರೆ ಎಂದು ‘ಬಿಸಿನೆಸ್ ಇನ್ಸೈಡರ್’ ವರದಿ ಮಾಡಿದೆ. ಗೂಗಲ್‌ನ ಅತ್ಯಂತ ಪ್ರಮುಖ ಸೈಬರ್ ಸೆಕ್ಯೂರಿಟಿ ವಿಭಾಗಗಳಲ್ಲಿ ಒಂದಾದ ‘ಥ್ರೆಟ್ ಇಂಟೆಲಿಜೆನ್ಸ್ ಗ್ರೂಪ್’ ಮೇಲೆ ಈ ಉದ್ಯೋಗ ಕಡಿತದ ನೇರ ಪರಿಣಾಮ ಬೀರಿದೆ. ಜಾಗತಿಕ ಹ್ಯಾಕಿಂಗ್ ಕಾರ್ಯಾಚರಣೆಗಳ ಬಗ್ಗೆ ನಿಯಮಿತವಾಗಿ ಸಂಶೋಧನಾ ವರದಿಗಳನ್ನು ಪ್ರಕಟಿಸುವ ಮೂಲಕ ಜಗತ್ತಿನಾದ್ಯಂತ ಖ್ಯಾತಿ ಗಳಿಸಿದ್ದ ಈ ತಂಡದ ಉದ್ಯೋಗಿಗಳಿಗೆ ಪ್ರಸಕ್ತ ವಾರದಲ್ಲಿ ಪಿಂಕ್ ಸ್ಲಿಪ್ ನೀಡಲಾಗಿದೆ. ಕೆಲಸ ಕಳೆದುಕೊಂಡ ಹಲವು ಉದ್ಯೋಗಿಗಳು ತಮಗಾದ ಕಹಿ ಅನುಭವವನ್ನು ಲಿಂಕ್ಡ್‌ಇನ್ ಮೂಲಕ ಹಂಚಿಕೊಳ್ಳುತ್ತಿದ್ದಾರೆ ಎಂಬುದ್ದಾಗಿದೆ.

ಹಾಗೂ ಇದರ ಕುರಿತು ಕೇವಲ ಗೂಗಲ್ ಕ್ಲೌಡ್ ಮಾತ್ರವಲ್ಲದೆ, ಗೂಗಲ್ ಸಂಸ್ಥೆಯು 2022 ರಲ್ಲಿ ಬರೋಬ್ಬರಿ 5.4 ಬಿಲಿಯನ್ ಡಾಲರ್ (ಸುಮಾರು ₹45,000 ಕೋಟಿಗೂ ಅಧಿಕ) ಭಾರಿ ಮೊತ್ತ ನೀಡಿ ಸ್ವಾಧೀನಪಡಿಸಿಕೊಂಡಿದ್ದ ಪ್ರಖ್ಯಾತ ಸೈಬರ್ ಸೆಕ್ಯೂರಿಟಿ ಸಂಸ್ಥೆ ‘ಮ್ಯಾಂಡಿಯಂಟ್’ ಸಿಬ್ಬಂದಿಯ ಮೇಲೂ ಈ ಲೇಆಫ್ ಭಾರಿ ಪರಿಣಾಮ ಬೀರಿದೆ. ಇದರೊಂದಿಗೆ ಒಟ್ಟಾರೆ ಗೂಗಲ್ ಕ್ಲೌಡ್ ವಿಭಾಗದ ಇತರ ಉಪ-ತಂಡಗಳ ಉದ್ಯೋಗಿಗಳನ್ನು ಸಹ ವಜಾಗೊಳಿಸಲಾಗುತ್ತಿದೆ. ಈ ಲೇಆಫ್‌ನಿಂದಾಗಿ ಎಷ್ಟು ಉದ್ಯೋಗಿಗಳು ನಿರುದ್ಯೋಗಿಗಳಾಗಿದ್ದಾರೆ ಎಂಬ ನಿಖರ ಸಂಖ್ಯೆ ಇನ್ನು ಸ್ಪಷ್ಟವಾಗಿಲ್ಲ. ಆದರೆ, ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದಂತಹ ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರಗಳತ್ತ ಗಮನ ಹರಿಸಲು ಮತ್ತು ಸಂಪನ್ಮೂಲಗಳನ್ನು ಆ ಕಡೆಗೆ ಮರುನಿರ್ದೇಶಿಸಲು ಈ ಕಠಿಣ ಕ್ರಮ ಅನಿವಾರ್ಯವಾಗಿದೆ ಎಂದು ಗೂಗಲ್ ಆಡಳಿತ ಮಂಡಳಿ ಸಮರ್ಥಿಸಿಕೊಂಡಿದೆ. ಗ್ರಾಹಕರು ಮತ್ತು ಉದ್ಯಮದ ಬದಲಾಗುತ್ತಿರುವ ಬೇಡಿಕೆಗಳಿಗೆ ಅನುಗುಣವಾಗಿ ನಾವು ಆಂತರಿಕ ರಚನೆಯನ್ನು ನಿಯಮಿತವಾಗಿ ಮೌಲ್ಯಮಾಪನ ಮಾಡುತ್ತೇವೆ ಎಂದು ಗೂಗಲ್ ವಕ್ತಾರರು ತಿಳಿಸಿದ್ದಾರೆ. ಇಡೀ ತಂತ್ರಜ್ಞಾನ ವಲಯದಲ್ಲಿ ಪ್ರಸ್ತುತ ಉದ್ಯೋಗಿಗಳನ್ನು ಕಡಿತಗೊಳಿಸಿ, ಆ ಹಣವನ್ನು ಎಐ (AI) ತಂತ್ರಜ್ಞಾನದ ಅಭಿವೃದ್ಧಿಗೆ ಬಿಲಿಯನ್ ಗಟ್ಟಲೆ ಸುರಿಯುವ ಹೊಸ ಟ್ರೆಂಡ್ ಆರಂಭವಾಗಿದೆ. ಕಳೆದ ತಿಂಗಳಷ್ಟೇ ಮೆಟಾ (Meta) ಸಂಸ್ಥೆಯು ತನ್ನ ಜಾಗತಿಕ ಸಿಬ್ಬಂದಿಯಲ್ಲಿ ಶೇಕಡಾ 10 ರಷ್ಟನ್ನು ವಜಾಗೊಳಿಸಿತ್ತು.

ಕ್ರಿಪ್ಟೋಕರೆನ್ಸಿ ಎಕ್ಸ್‌ಚೇಂಜ್ ‘ಕಾಯಿನ್‌ಬೇಸ್’ (Coinbase) ಮತ್ತು ಪೇಮೆಂಟ್ಸ್ ಸಂಸ್ಥೆ ‘ಬ್ಲಾಕ್’ (Block) ಕೂಡ ಎಐ ಆಧಾರಿತ ಪುನರ್ರಚನೆಯನ್ನು ಉಲ್ಲೇಖಿಸಿ ಈ ವರ್ಷ ಉದ್ಯೋಗ ಕಡಿತ ಮಾಡಿದ್ದವು. ಸೈಬರ್ ಸೆಕ್ಯೂರಿಟಿ ಸಂಸ್ಥೆ ‘ಕ್ಲೌಡ್‌ಫ್ಲೇರ್’ (Cloudflare) ಕೂಡ ತಾನು “ಏಜೆಂಟಿಕ್ ಎಐ ಯುಗ”ಕ್ಕೆ (Agentic AI Era) ಸಜ್ಜಾಗುತ್ತಿರುವುದಾಗಿ ಹೇಳಿ ಕಳೆದ ತಿಂಗಳು 1,100 ಕ್ಕೂ ಹೆಚ್ಚು ಸಿಬ್ಬಂದಿಯನ್ನು ಮನೆಗೆ ಕಳುಹಿಸಿದೆ. ಗೂಗಲ್ ತನ್ನ ಕ್ಲೌಡ್ ವಿಭಾಗದಲ್ಲಿ ಉದ್ಯೋಗ ಕಡಿತ ಮಾಡುತ್ತಿರುವುದು ಇದೇ ಮೊದಲೇನಲ್ಲ. ಕಳೆದ ವರ್ಷವೂ ಸಹ ಗೂಗಲ್ ಕ್ಲೌಡ್‌ನ ಬಳಕೆದಾರರ ಅನುಭವ ವಿಭಾಗದ ಹಲವಾರು ಹುದ್ದೆಗಳನ್ನು ಕಂಪನಿಯು ಯಾವುದೇ ಸದ್ದಿಲ್ಲದೆ ರದ್ದುಗೊಳಿಸಿತ್ತು. ತಂತ್ರಜ್ಞಾನದ ಅರ್ಥಶಾಸ್ತ್ರವನ್ನು ಎಐ ಸಂಪೂರ್ಣವಾಗಿ ಮರುರೂಪಿಸುತ್ತಿರುವ ಬೆನ್ನಲ್ಲೇ, ಕಂಪನಿಗೆ ಅತ್ಯಂತ ಆಯಕಟ್ಟಿನ ಮತ್ತು ಕಾರ್ಯತಂತ್ರದ ದೃಷ್ಟಿಯಿಂದ ಅತ್ಯಗತ್ಯ ಎನಿಸಿಕೊಂಡಿರುವ ಪ್ರತಿಷ್ಠಿತ ತಂಡಗಳು ಕೂಡ ಈಗ ಅನಿವಾರ್ಯವಾಗಿ ಉದ್ಯೋಗ ಕಡಿತದ ಸುಳಿಗೆ ಸಿಲುಕುತ್ತಿರುವುದು ಇಡೀ ಐಟಿ ಉದ್ಯಮವನ್ನು ಆತಂಕಕ್ಕೆ ತಳ್ಳಿದೆ ಎಂಬುದ್ದಾಗಿದೆ.