ಚಿತ್ರದುರ್ಗ : ಚಳ್ಳಕೆರೆ ತಾಲೂಕಿನ ಹೆಗ್ಗೆರೆ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಇಂದು (ಮಂಗಳವಾರ) ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ಸೊಂದು ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಬಸ್ಸಿನಲ್ಲಿದ್ದ 44 ಪ್ರಯಾಣಿಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬಳ್ಳಾರಿಯಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ, ಈ ಸರ್ಕಾರಿ ಬಸ್, ಹೆಗ್ಗೆರೆ ಗ್ರಾಮದ ಸಮೀಪ ಬರುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಮಧ್ಯೆಯೇ ಉರುಳಿ ಬಿದ್ದಿದೆ. ಬಸ್ ಪಲ್ಟಿಯಾದ ಭೀಕರತೆಗೆ ಕ್ಷಣಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಬಸ್ಸಿನಲ್ಲಿ ಒಟ್ಟು 44 ಪ್ರಯಾಣಿಕರಿದ್ದರು. ಬಸ್ ಪಲ್ಟಿಯಾದ ರಭಸಕ್ಕೆ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕೂಡಲೇ ಸ್ಥಳೀಯರ ನೆರವಿನೊಂದಿಗೆ ಗಾಯಾಳುಗಳನ್ನು ಚಳ್ಳಕೆರೆ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಯಿತು. ಪ್ರಾಥಮಿಕ ಚಿಕಿತ್ಸೆಯ ನಂತರ ಗಾಯಾಳುಗಳು ಚೇತರಿಸಿಕೊಂಡು ತಮ್ಮ ಮನೆಗಳಿಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.
ಅಪಘಾತದಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರ ವ್ಯತ್ಯಯವಾಗಿತ್ತು. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಚಳ್ಳಕೆರೆ ಪೊಲೀಸರು, ಕ್ರೇನ್ ಸಹಾಯದಿಂದ ರಸ್ತೆ ಮಧ್ಯೆ ಬಿದ್ದಿದ್ದ ಬಸ್ಸನ್ನು ಪಕ್ಕಕ್ಕೆ ಸರಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಬಸ್ ವೇಗವಾಗಿ ಚಲಿಸುತ್ತಿದ್ದಾಗ ಈ ಅವಘಡ ಸಂಭವಿಸಿದೆ ಶಂಕಿಸಲಾಗಿದ್ದು ಚಳ್ಳಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.














