ದಾವಣಗೆರೆ : ವಚನಾನಂದ ಶ್ರೀಗಳ ಬದಲು ಪಂಚಮಸಾಲಿ ಪೀಠಕ್ಕೆ ನಾನು ಬರೋದು ಭಕ್ತರು ಹಾಗೂ ಟ್ರಸ್ಟಿಗಳಿಗೆ ಬಿಟ್ಟ ವಿಚಾರ ಎಂದು ಮನಗುಳಿ ಸಂಗನಬಸವ ಸ್ವಾಮೀಜಿ ಹೇಳಿದ್ದಾರೆ. ಹರಿಹರ ಪಂಚಮಸಾಲಿ ಪೀಠದ ವಿವಾದ ಹಿನ್ನೆಲೆ ಅವರು ಹರಿಹರಕ್ಕೆ ಆಗಮಿಸಿದ್ದರು. ಈ ವೇಳೆ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ಹಿಂದೆ ಸಹ ವಚನಾನಂದ ಸ್ವಾಮೀಜಿಗಳ ವಿರುದ್ಧ ಅವರು ಅಸಮಾಧಾನ ಹೊರಹಾಕಿದ್ದರು.
ಹರಜಾತ್ರೆಯಲ್ಲಿ ವಚನಾನಂದ ಸ್ವಾಮೀಜಿ ಗಣ್ಯರಿಗೆ ಅಪಮಾನ ಮಾಡಿದ್ದಾರೆ. ಭಕ್ತರಲ್ಲಿ ಒಡಕು ತರುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಅಲ್ಲದೇ ಈ ಪೀಠಕ್ಕೆ ನಾನು ಬರೋದು ಭಕ್ತರಿಗೆ ಹಾಗೂ ಟ್ರಸ್ಟಿಗಳಿಗೆ ಬಿಟ್ಟ ವಿಚಾರ. ಸಮಾಜ ದೊಡ್ಡದಿದೆ ನನಗೂ ಈ ಭಾಗದಲ್ಲಿ ಅಪಾರ ಭಕ್ತ ಸಮೂಹ ಇದೆ ಎಂದಿದ್ದರು. ಈ ವಾರದ ಒಳಗೆ ವಚನಾನಂದ ಸ್ವಾಮೀಜಿಯನ್ನು ಪೀಠದಿಂದ ಹೊರ ಕಳಿಸಲು ಟ್ರಸ್ಟಿಗಳು ಮುಂದಾಗಿದ್ದಾರೆ.
ಮಠದ ಪ್ರಧಾನ ಧರ್ಮದರ್ಶಿ ಬಿ.ಸಿ ಉಮಾಪತಿ ಸುಧೀರ್ಘವಾಗಿ ಲೆಕ್ಕಪತ್ರ ಮಂಡನೆ ಮಾಡಿದ್ದರು. ಇದರ ಬೆನ್ನಲ್ಲೇ ಸ್ವಾಮೀಜಿಯನ್ನು ಹೊರ ಹಾಕಲು ಚಿಂತನೆ ನಡೆಸಲಾಗಿದೆ. ಇದಕ್ಕಾಗಿ ಕಾನೂನು ಹೋರಾಟಕ್ಕೂ ಟ್ರಸ್ಟಿಗಳು ಮುಂದಾಗಿದ್ದಾರೆ. ವಚನಾನಂದ ಸ್ವಾಮೀಜಿ ನಂತರ ಮನಗುಳಿ ಸಂಗನಬಸವ ಸ್ವಾಮೀಜಿಯವರನ್ನು ಪೀಠಾಧಿಪತಿಯನ್ನಾಗಿ ಟ್ರಸ್ಟಿಗಳು ಮಾಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.














