ಮನೆ ರಾಜಕೀಯ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಹೆಚ್.ಡಿ.ಕುಮಾರಸ್ವಾಮಿ ಅಭ್ಯರ್ಥಿ ಆಗುವುದಿಲ್ಲ: ಸಾ.ರಾ. ಮಹೇಶ್‌

ಚಾಮುಂಡೇಶ್ವರಿ ಕ್ಷೇತ್ರಕ್ಕೆ ಹೆಚ್.ಡಿ.ಕುಮಾರಸ್ವಾಮಿ ಅಭ್ಯರ್ಥಿ ಆಗುವುದಿಲ್ಲ: ಸಾ.ರಾ. ಮಹೇಶ್‌

0

ಮೈಸೂರು: ಚಾಮುಂಡೇಶ್ವರಿ ಕ್ಷೇತ್ರಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಅಭ್ಯರ್ಥಿ ಆಗುವುದಿಲ್ಲ. ರಾಮನಗರ ಬಿಟ್ಟು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಕುಮಾರಸ್ವಾಮಿ ಬರುವುದಿಲ್ಲ ಎಂದು ಶಾಸಕ ಸಾ.ರಾ.ಮಹೇಶ್ ಸ್ಪಷ್ಟಪಡಿಸಿದರು.

ಮೈಸೂರಿನಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,  ಮೈಸೂರು ಮಹಾನಗರ ಪಾಲಿಕೆಯಲ್ಲಿ ಈ ಬಾರಿ ಜೆಡಿಎಸ್‌ನವರು ಮಹಾಪೌರರು ಆಗುತ್ತಾರೆ. ಈ ಬಾರಿಯೂ ಮಹಾಪೌರರ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತೆ. ಯಾವ ಪಕ್ಷದ ಬೆಂಬಲ ಪಡೆಯುತ್ತೆ ಅಂತ ಹೇಳಲ್ಲ. ಆದರೆ, ನೂರಕ್ಕೆ ನೂರು ಜಾ.ದಳದವರು ಮಹಾಪೌರರಾಗಿ ಆಯ್ಕೆಯಾಗಲಿದ್ದಾರೆ ಎಂದು ಮಾಜಿ ಸಚಿವ, ಶಾಸಕ ಸಾ.ರಾ. ಮಹೇಶ್‌ ವಿಶ್ವಾಸ ವ್ಯಕ್ತಪಡಿಸಿದರು.

ಕುಮಾರಸ್ವಾಮಿ ಅವರ ಜೊತೆಯೇ ಚರ್ಚೆ ಮಾಡಿದ ನಂತರವೇ ಈ ಮಾತನ್ನು ನಾನು ಹೇಳುತ್ತಿದ್ದೇನೆ. ಕ್ಷೇತ್ರದ ಕಾರ್ಯಕರ್ತರು ಮತ್ತು ಮುಖಂಡರು ಒತ್ತಾಯ ಮಾಡುತ್ತಿರುವುದು ನಿಜ. ಆದರೆ, ಚಾಮುಂಡೇಶ್ವರಿಯಿಂದ ಕುಮಾರಸ್ವಾಮಿ ಅಭ್ಯರ್ಥಿ ಆಗುವುದಿಲ್ಲ ಎಂಬುದು ಕೂಡ ನಿಜವಾಗಿದೆ ಎಂದು ಹೇಳಿದರು.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಮ್ಮ ಪಕ್ಷದ ಶಾಸಕರೇ ಇದ್ದಾರೆ. ಹೀಗಾಗಿ, ಕುಮಾರಸ್ವಾಮಿ ಬರುವ ಅಗತ್ಯ ಇಲ್ಲ ಎಂದು ಹೇಳಿದರು. ಜಾ.ದಳದ ಕೋರ್ ಕಮಿಟಿಯಲ್ಲಿ ಸ್ಥಾನಮಾನ ಸಿಗದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಾರಾ, ನಾನೇ ಸ್ಥಾನಮಾನ ಬೇಡ ಅಂದಿದ್ದೇ. ನಾನು ಯಾರನ್ನ ಪಕ್ಷಕ್ಕೆ ಕರೆ ತಂದಿದ್ನೋ ಅವರೇ ಇಲ್ಲ ಸಲ್ಲದ ಆರೋಪ ಮಾಡ್ತಿದ್ದಾರೆ. ಇನ್ನು ಪಕ್ಷದಲ್ಲಿ ಸ್ಥಾನಮಾನ ಸಿಕ್ಕರೆ ಅವರಿಗೆ ಸಹಿಸಲು ಆಗಲ್ಲ. ಹೀಗಾಗಿ, ನಾನು ನಿಮ್ಮ ಜೊತೆಯಲ್ಲೇ ಇರುತ್ತೇನೆ ನನಗೆ ಯಾವುದೇ ಸ್ಥಾನಮಾನ ಬೇಡ ಅಂತ ಮನವಿ ಮಾಡಿದ್ದೆ. ಹೀಗಾಗಿ, ನನ್ನನ್ನು ಕೋರ್ ಕಮಿಟಿಗೆ ಸೇರಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಶಾಸಕ ಜಿ.ಟಿ ದೇವೆಗೌಡ ಹಾಗೂ ಎಂಎಲ್‌ಸಿ ಸಿಎನ್ ಮಂಜೇಗೌಡ ನಡುವೆ ಜಟಾಪಟಿ ವಿಚಾರವಾಗಿ ಮಾತನಾಡಿ, ವಿಧಾನ ಪರಿಷತ್ ಸದಸ್ಯರು ಯಾವ ಕ್ಷೇತ್ರವನ್ನು ನೋಡಲ್ ತಾಲ್ಲೂಕು ಎಂದು ಆಯ್ಕೆ ಮಾಡಿಕೊಳ್ಳುತ್ತಾರೋ, ಆ ಕ್ಷೇತ್ರದ ಸಹ ಸದಸ್ಯರಾಗುತ್ತಾರೆ. ಈ ಬಗ್ಗೆ ಇತ್ತೀಚೆಗೆ ಸರ್ಕಾರ ಸುತ್ತೋಲೆಯನ್ನು ಹೊರಡಿಸಿದೆ. ಇದನ್ನು ನಮ್ಮ‌ ಹಿರಿಯ ಶಾಸಕರಿಗೆ‌ ಮನವರಿಕೆ ಮಾಡಿ ಕೊಡುತ್ತೇವೆ. ಅವರು ಪ್ರೀತಿಯಿಂದ ನನ್ನನ್ನು ಮೈಸೂರು ಮಹಾರಾಜ ಎನ್ನುತ್ತಾರೆ. ನಾನು ಮಹಾರಾಜನಲ್ಲ , ಜಿಲ್ಲೆಯ ಜನರ ಸೇವಕನಷ್ಟೇ. ಅವರಿಗೆ ನಮ್ಮನ್ನು ತಿದ್ದಿ ಬುದ್ದಿ ಹೇಳುವ ಎಲ್ಲಾ ಅಧಿಕಾರವನ್ನು ಕೊಟ್ಟಿದ್ದೇವೆ ಎಂದು ಜಿ.ಟಿ ದೇವೇಗೌಡ ಅವರಿಗೆ ಟಾಂಗ್‌ ಕೊಟ್ಟರು.

ಹಿಜಾಬ್ ವಿಚಾರದಲ್ಲಿ ಶಾಲೆಯಂತಹ ದೇಗುಲಗಳು ಸ್ಮಶಾನವಾಗುವುದು ಬೇಡ. ಹಿಂದೂ, ಮುಸ್ಲಿಂ, ಕ್ರೈಸ್ತರು ಎಲ್ಲರೂ ಒಂದೇ. ಮಕ್ಕಳ ಮನಸ್ಸಿನಲ್ಲಿ ಕೋಮು ವೈಮನಸ್ಸು ಬಿತ್ತುವುದು ಬೇಡ. ಅಂತಹ ಕೆಲಸ ಮಾಡುವ ಎಲ್ಲಾ ಕೊಳಕು ಮನಸ್ಸುಗಳಿಗೆ ನನ್ನ ವಿರೋಧವಿದೆ. ಯಾರೇ ಇರಲಿ, ಯಾವ ಪಕ್ಷವೇ ಇರಲಿ ಈ ವಿಚಾರದಲ್ಲಿ ನನ್ನ ವಿರೋಧ ಇದೆ ಎಂದು ಹೇಳಿದರು.

ಹಿಂದಿನ ಲೇಖನಪ್ರೇಮಿಗಳ ದಿನವಾದ ಇಂದಿನ ನಿಮ್ಮ ದಿನ ಭವಿಷ್ಯ
ಮುಂದಿನ ಲೇಖನಹುಲಿ ಸೆರೆಗೆ ಸಾಕಾನೆಗಳ ಸಹಾಯದೊಂದಿಗೆ ಕೂಂಬಿಂಗ್ ಕಾರ್ಯಾಚರಣೆ ಆರಂಭ