ಬೆಂಗಳೂರು : ಮೇ 2ನೇ ವಾರದಲ್ಲಿ ಸಿಹಿ ಸುದ್ದಿ ಕೊಡುವ ಭರವಸೆ ಹೈಕಮಾಂಡ್ ಕೊಟ್ಟಿದೆ ಎಂದು ವಿಧಾನಸಭೆ ಮುಖ್ಯ ಸಚೇತಕ, ಶಾಸಕ ಅಶೋಕ್ ಪಟ್ಟಣ್ ತಿಳಿಸಿದ್ದಾರೆ. ಸಚಿವ ಸಂಪುಟ ಪುನರ್ ರಚನೆ ಬಗ್ಗೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಮೇ ಎರಡನೇ ವಾರದಲ್ಲಿ ನಮಗೆ ಸಿಹಿ ಸುದ್ದಿ ಕೊಡುವ ಭರವಸೆಯನ್ನ ಸುರ್ಜೇವಾಲ ನೀಡಿದ್ದಾರೆ. ಅದರ ನಿರೀಕ್ಷೆಯಲ್ಲಿ ನಾವು ಇದ್ದೇವೆ ಎಂದರು.
ಮೇ 4ರಂದು ಪಂಚ ರಾಜ್ಯಗಳ ಚುನಾವಣೆ ರಿಸಲ್ಟ್ ಬರಲಿದೆ. ಅದಾದ ಬಳಿಕ ನಾವು 40 ಜನ ಶಾಸಕರು ದೆಹಲಿಗೆ ಹೋಗಿ ಮತ್ತೊಮ್ಮೆ ಹೈಕಮಾಂಡ್ ಭೇಟಿ ಮಾಡಿ ಬರುತ್ತೇವೆ. ಡಿಕೆ ಶಿವಕುಮಾರ್ ಅವರಿಗೆ ಬರ್ತ್ಡೇ ಸಿಹಿ ಸುದ್ದಿ ಕೊಡೋದು ಬಿಡೋದು ಹೈಕಮಾಂಡ್‌ಗೆ ಬಿಟ್ಟಿದ್ದು. ಅವರಿಗೆ ಒಳ್ಳೇದಾಗಲಿ ಅಂತ ಹಾರೈಸುತ್ತೇನೆ. ಅವರಿಗೆ ಅಡ್ವಾನ್ಸ್ ಹುಟ್ಟುಹಬ್ಬದ ಶುಭಾಶಯಗಳು. ಸಂಪುಟ ಪುನಾರಚನೆ ಆಗಲೇ ಬೇಕು ಅನ್ನೋದು ನಮ್ಮ ಆಗ್ರಹ ಎಂದು ಸ್ಪಷ್ಟಪಡಿಸಿದರು.
ಸಚಿವ ಡಿ ಸುಧಾಕರ್ ವಿಚಾರದಲ್ಲಿ ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ವೆಂಟಿಲೇಟರ್‌ನಲ್ಲಿ ಅವರಿದ್ದಾರೆ. ಇಂತಹ ಸಮಯದಲ್ಲಿ ಯಾರು ಹೆಬ್ಬೆಟ್ಟು ಹಾಕಿಸಿಕೊಳ್ಳುತ್ತಾರೆ? ಇಂತಹ ಸಂದರ್ಭದಲ್ಲಿ ಮಾನವೀಯತೆ ಮರೆತು ಮಾತನಾಡೋದು ಸರಿಯಲ್ಲ ಎಂದು ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದರು.














