ಬಿಡುವಿಲ್ಲದ ಜೀವನಶೈಲಿ ಮತ್ತು ರಾಸಾಯನಿಕ ಮಿಶ್ರಿತ ಆಹಾರಗಳಿಂದ ವೇಗವಾಗಿ ಹೆಚ್ಚುತ್ತಿರುವ ಕಾಯಿಲೆಗಳಲ್ಲಿ ಹೃದಯಾಘಾತವೂ ಒಂದು. ಹೃದ್ರೋಗಗಳನ್ನು ಸಾಮಾನ್ಯವಾಗಿ ವಯಸ್ಸಾದವರ ಸಮಸ್ಯೆ ಎಂದು ಪರಿಗಣಿಸಲಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನವರು ಸಹ ಈ ಗಂಭೀರ ಕಾಯಿಲೆಗೆ ಹೆಚ್ಹೆಚ್ಚು ಬಲಿಯಾಗುತ್ತಿದ್ದಾರೆ.
ಹೃದಯಾಘಾತ ಯಾಕಾಗುತ್ತದೆ?
ಆರೋಗ್ಯ ತಜ್ಞರ ಪ್ರಕಾರ, ಹೃದಯಕ್ಕೆ ರಕ್ತದ ಹರಿವು ಸ್ಥಗಿತಗೊಂಡಾಗ ಹೃದಯಾಘಾತ ಸಂಭವಿಸುತ್ತದೆ. ರಕ್ತನಾಳಗಳಲ್ಲಿ ಕೊಬ್ಬು, ಕೊಲೆಸ್ಟ್ರಾಲ್ ಶೇಖರಣೆಯಿಂದಲೂ ಹೃದಯದಲ್ಲಿ ರಕ್ತ ಪೂರೈಕೆ ಸ್ಥಗಿತಗೊಳ್ಳುತ್ತದೆ. ನಾವು ತಿಳಿದೋ ತಿಳಿಯದೆಯೋ ಪ್ರತಿನಿತ್ಯ ಮಾಡುತ್ತಿರುವ ಕೆಲವು ಕೆಲಸಗಳಿಂದ ಹೃದಯಾಘಾತದ ಅಪಾಯ ಹೆಚ್ಚುತ್ತದೆ. ಅದನ್ನು ತಿಳಿದುಕೊಂಡು ಅಂತಹ ಅಭ್ಯಾಸಗಳನ್ನು ಸುಧಾರಿಸಿಕೊಳ್ಳುವುದು ಅತ್ಯಂತ ಅವಶ್ಯಕ.
ತೂಕ ನಿಯಂತ್ರಣ : ಬಹುತೇಕರಿಗೆ ಈಗ ಬೊಜ್ಜಿನ ಸಮಸ್ಯೆಯಿದೆ. ತೂಕ ಹೆಚ್ಚಾಗಿದ್ದರೆ ಅದು ಕೂಡ ಹೃದಯಾಘಾತಕ್ಕೆ ಕಾರಣವಾಗಬಲ್ಲದು. ಸ್ಥೂಲಕಾಯತೆಯು ಅಧಿಕ ರಕ್ತದ ಕೊಲೆಸ್ಟ್ರಾಲ್, ಅಧಿಕ ಟ್ರೈಗ್ಲಿಸರೈಡ್, ಅಧಿಕ ರಕ್ತದೊತ್ತಡ ಮತ್ತು ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ. ಇವೆಲ್ಲವೂ ಹೃದಯಾಘಾತಕ್ಕೆ ಕಾರಣವಾಗಬಲ್ಲ ಅಂಶಗಳು. ಹಾಗಾಗಿ ತೂಕ ನಿಯಂತ್ರಣದ ಬಗ್ಗೆ ಗಮನ ಕೊಡಿ.
ಧೂಮಪಾನ ಮತ್ತು ಒತ್ತಡ : ಧೂಮಪಾನ ಮಾಡುವವರು ಮತ್ತು ಹೆಚ್ಚಿನ ಒತ್ತಡದಲ್ಲಿರುವವರು ಹೃದಯಾಘಾತದ ಅಪಾಯವನ್ನು ಹೊಂದಿರುತ್ತಾರೆ ಅನ್ನೋದು ಸಂಶೋಧನೆಯಲ್ಲಿ ದೃಢಪಟ್ಟಿದೆ. ಧೂಮಪಾನವು ಕಾಲಾನಂತರದಲ್ಲಿ ಅಪಧಮನಿಗಳಲ್ಲಿ ಫ್ಲಾಕ್ ಸೃಷ್ಟಿಸುವುದರಿಂದ ಅಪಧಮನಿಗಳು ಕಿರಿದಾಗುತ್ತವೆ. ಇದರಿಂದ ಹೃದಯಕ್ಕೆ ರಕ್ತದ ಹರಿವು ಕಡಿಮೆಯಾಗಿ, ಹೃದಯಾಘಾತಕ್ಕೆ ಕಾರಣವಾಗುತ್ತದೆ. ಅದೇ ರೀತಿ ಒತ್ತಡ ಹೆಚ್ಚಾದರೆ ರಕ್ತದೊತ್ತಡದ ಸಮಸ್ಯೆಯೂ ಹೆಚ್ಚಾಗುತ್ತದೆ. ಅಧಿಕ ರಕ್ತದೊತ್ತಡ ಹೃದಯ ಕಾಯಿಲೆಗಳಿಗೆ ಮೂಲ. ಹಾಗಾಗಿ ಒತ್ತಡಕ್ಕೆ ಒಳಗಾಗದೇ ನಿರಾಳರಾಗಿರುವುದು ಬಹಳ ಮುಖ್ಯ.
ದೈಹಿಕ ನಿಷ್ಕ್ರಿಯತೆ : ನಿಮಗೆ ಆರಾಮಾಗಿ ಕುಳಿತುಕೊಳ್ಳುವುದು, ಮಲಗುವುದೇ ಇಷ್ಟ ಅಂತಾದ್ರೆ ಹೃದಯಾಘಾತದ ಅಪಾಯ ಹೆಚ್ಚು. ದೈಹಿಕ ನಿಷ್ಕ್ರಿಯತೆಯು ಹೃದಯ ಕಾಯಿಲೆಗಳನ್ನು ಜಾಸ್ತಿ ಮಾಡುತ್ತದೆ. ಯಾಕೆಂದರೆ ದೇಹವು ನಿಷ್ಕ್ರಿಯವಾಗಿದ್ದಾಗ, ಕೊಬ್ಬಿನ ಪದಾರ್ಥಗಳು ಅಪಧಮನಿಗಳಲ್ಲಿ ಸಂಗ್ರಹಗೊಳ್ಳಲು ಪ್ರಾರಂಭಿಸುತ್ತವೆ. ನಿಮ್ಮ ಹೃದಯಕ್ಕೆ ರಕ್ತವನ್ನು ಸಾಗಿಸುವ ಅಪಧಮನಿಗಳು ಹಾನಿಗೊಳಗಾಗಿದ್ದರೆ ಅಥವಾ ನಿರ್ಬಂಧಿಸಿದರೆ, ಅದು ಹೃದಯಾಘಾತಕ್ಕೆ ಕಾರಣವಾಗಬಹುದು. ಹಾಗಾಗಿ ಎಲ್ಲರೂ ಪ್ರತಿದಿನ ವ್ಯಾಯಾಮ ಮಾಡಬೇಕು. ಯೋಗ ಮತ್ತು ನಿಯಮಿತ ವ್ಯಾಯಾಮ ಮಾಡುವುದರಿಂದ ಹೃದಯಾಘಾತ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಸಾಕಷ್ಟು ಕಡಿಮೆ ಮಾಡಬಹುದು.
ಹೃದಯಾಘಾತದ ಮುನ್ಸೂಚನೆ ಮತ್ತು ಲಕ್ಷಣಗಳು
– ಎದೆ ನೋವು ಉಲ್ಬಣ
– ಅತಿಯಾದ ಬೆವರು
– ಉಸಿರಾಟದ ತೊಂದರೆ
– ವಾಂತಿ, ವಾಕರಿಕೆ
– ತಲೆತಿರುಗುವಿಕೆ
– ಹಠಾತ್ ಆಯಾಸ
– ಕೆಲವು ನಿಮಿಷಗಳ ಕಾಲ ಎದೆಯ ಮಧ್ಯಭಾಗದಲ್ಲಿ ತೀವ್ರವಾದ ನೋವು, ಭಾರ ಅಥವಾ ಸಂಕೋಚನ
– ಹೃದಯದಿಂದ ಭುಜ, ಕುತ್ತಿಗೆ, ತೋಳು ಮತ್ತು ದವಡೆಯವರೆಗೆ ನೋವು