ಮನೆ Uncategorized ಶ್ರೀನಗರ: ಸದನದ ಬಾವಿಗಿಳಿದು ಪ್ರತಿಭಟನೆ- ಬಿಜೆಪಿ ಸದಸ್ಯರನ್ನು ಹೊರಹಾಕಿದ ಮಾರ್ಷಲ್‌ ಗಳು

ಶ್ರೀನಗರ: ಸದನದ ಬಾವಿಗಿಳಿದು ಪ್ರತಿಭಟನೆ- ಬಿಜೆಪಿ ಸದಸ್ಯರನ್ನು ಹೊರಹಾಕಿದ ಮಾರ್ಷಲ್‌ ಗಳು

0

ಶ್ರೀನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಮರುಸ್ಥಾಪನೆಗೆ ಆಗ್ರಹಿಸಿ ಮಂಡಿಸಿದ್ದ ನಿರ್ಣಯ ವಿರೋಧಿಸಿ ಬಿಜೆಪಿ ಸದಸ್ಯರು ಪ್ರತಿಭಟನೆ ನಡೆಸಿದ್ದರಿಂದ ಸದನದಲ್ಲಿ ಇಂದು (ಗುರುವಾರ) ಭಾರಿ ಗದ್ದಲ, ಕೋಲಾಹಲ ಸೃಷ್ಟಿಯಾಯಿತು.

Join Our Whatsapp Group

ಪರಿಣಾಮ ಸದನದ ಬಾವಿಗಿಳಿದು ಪ್ರತಿಭಟಿಸಿದ್ದ ಬಿಜೆಪಿ ಶಾಸಕರನ್ನು ಹೊರಹಾಕುವಂತೆ ಮಾರ್ಷಲ್‌ ಗಳಿಗೆ ಸ್ಪೀಕರ್‌ ಅಬ್ದುಲ್‌ ರಾಥರ್‌ ಸೂಚಿಸಿರುವ ಪ್ರಸಂಗವು ಘಟಿಸಿತು.

ಇಂದು ಬೆಳಿಗ್ಗೆ ಸದನ ಆರಂಭವಾದ ಬೆನ್ನಲ್ಲೇ ವಿಶೇಷ ಸ್ಥಾನಮಾನ ಮರುಸ್ಥಾಪನೆ ನಿರ್ಣಯದ ವಿರುದ್ದ ಬಿಜೆಪಿ ಸದಸ್ಯರು ಪ್ರತಿಭಟಿಸಿದರು.

ಬಿಜೆಪಿ ಶಾಸಕ, ವಿರೋಧ ಪಕ್ಷದ ನಾಯಕ ಸುನಿಲ್ ಶರ್ಮಾ ವಿಶೇಷ ಸ್ಥಾನಮಾನ ಮರುಸ್ಥಾಪನೆ ನಿರ್ಣಯಕ್ಕೆ ವಿರೋಧ ವ್ಯಕ್ತಪಡಿಸಿ ಮಾತನಾಡುತ್ತಿದ್ದ ವೇಳೆ ಅವಾಮಿ ಇತ್ತೆಹಾದ್ ಪಕ್ಷದ ನಾಯಕ ಶೇಖ್ ಖುರ್ಷೀದ್ ಸದನದ ಬಾವಿಳಿಗಿಳಿದು ಸಂವಿಧಾನದ 370ನೇ ವಿಧಿ ಮರುಸ್ಥಾಪಿಸುವ ಬ್ಯಾನರ್ ಪ್ರದರ್ಶಿಸಿದರು.

ಇದರಿಂದ ಕೆರಳಿದ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಬ್ಯಾನರ್ ಕಿತ್ತು ಹಾಕಿದರು. ಗದ್ದಲದ ನಡುವೆ ಸಭಾಧ್ಯಕ್ಷರು ಕಲಾಪವನ್ನು 15 ನಿಮಿಷಗಳ ಕಾಲ ಮುಂದೂಡಿದರು. ಈ ವೇಳೆಯೂ ಬಿಜೆಪಿ ಸದಸ್ಯರಿಂದ ಧರಣಿ ಮುಂದುವರಿಯಿತು.

ಸದನ ಪುನರಾರಂಭಿಸಿದ ಬಳಿಕವೂ ಬಿಜೆಪಿ ಪ್ರತಿಭಟನೆ ಮುಂದುವರಿಯಿತು. ತಮ್ಮ ಆಸನಗಳಿಗೆ ಮರಳುವಂತೆ ಸ್ಪೀಕರ್ ಮಾಡಿದ ವಿನಂತಿಗಳನ್ನು ಲೆಕ್ಕಿಸದ ಬಿಜೆಪಿ ಸದಸ್ಯರು ಧರಣಿಯಲ್ಲಿ ನಿರತರಾದರು.

ಬಳಿಕ ಬಿಜೆಪಿ ಸದಸ್ಯರಿಗೆ ಸ್ಪೀಕರ್ ಎಚ್ಚರಿಕೆಯನ್ನು ನೀಡಿದರು. ಭಾರಿ ಗದ್ದಲದ ನಡುವೆ ಬಿಜೆಪಿ ಸದಸ್ಯರನ್ನು ಹೊರಹಾಕುವಂತೆ ಸ್ಪೀಕರ್ ಸೂಚಿಸಿದರು. ಇದು ಬಿಜೆಪಿ ಶಾಸಕರು ಹಾಗೂ ಮಾರ್ಷಲ್‌ಗಳ ನಡುವೆ ಗಲಾಟೆಗೆ ಕಾರಣವಾಯಿತು.

ಸ್ಪೀಕರ್ ಸೂಚನೆಯಂತೆ ಬಿಜೆಪಿಯ ಕನಿಷ್ಠ ಮೂವರು ಸದಸ್ಯರನ್ನು ಸದನದಿಂದ ಹೊರಹಾಕಲಾಗಿದೆ. ಬಿಜೆಪಿ ಸದಸ್ಯರು ‘ಭಾರತ್ ಮಾತಾ ಕೀ ಜೈ’ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಸದಸ್ಯರು 370ನೇ ವಿಧಿ ಪರ ಘೋಷಣೆಗಳನ್ನು ಕೂಗಿದರು.

ಬುಧವಾರದಂದು ಬಿಜೆಪಿ ಸದಸ್ಯರ ಪ್ರತಿಭಟನೆ, ಗದ್ದಲದ ನಡುವೆಯೂ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಮತ್ತೆ ನೀಡುವಂತೆ ಆಗ್ರಹಿಸಿ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿತ್ತು.