ಮನೆ ರಾಜಕೀಯ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಹಿಂಸಾಚಾರ ಹೆಚ್ಚುತ್ತಿದೆ: ಸಿಎಂಗೆ ಗಣ್ಯರ ಬಹಿರಂಗ ಪತ್ರ

ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಹಿಂಸಾಚಾರ ಹೆಚ್ಚುತ್ತಿದೆ: ಸಿಎಂಗೆ ಗಣ್ಯರ ಬಹಿರಂಗ ಪತ್ರ

0

ಬೆಂಗಳೂರು: ಕರ್ನಾಟಕದಲ್ಲಿ ‘ಧಾರ್ಮಿಕ ಅಲ್ಪಸಂಖ್ಯಾತರ ಮೇಲಿನ ನಿರಂತರ ಹಿಂಸಾಚಾರಗಳ’ ಕುರಿತು ಕಳವಳ ವ್ಯಕ್ತಪಡಿಸಿ ರಾಜ್ಯದ ಮೂವತ್ತಕ್ಕೂ ಹೆಚ್ಚು ಪ್ರತಿಷ್ಠಿತ ವ್ಯಕ್ತಿಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬಹಿರಂಗ ಪತ್ರ ಬರೆದಿದ್ದು, ಸಮಾಜಘಾತುಕ ಶಕ್ತಿಗಳನ್ನು ನಿಯಂತ್ರಿಸುವಂತೆ ಮನವಿ ಮಾಡಿದ್ದಾರೆ.

‘ನಮ್ಮದು ಹಿರಿಯ ವಿಜ್ಞಾನಿಗಳು, ಸಾಹಿತಿಗಳು, ಶಿಕ್ಷಣ ತಜ್ಞರು, ಕಲಾವಿದರು ಮತ್ತು ವಕೀಲರ ಗುಂಪಾಗಿದ್ದು, ಕರ್ನಾಟಕದಲ್ಲಿ ಕುಸಿಯುತ್ತಿರುವ ಆಡಳಿತ ವ್ಯವಸ್ಥೆ ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಮೇಲಿನ ನಿರಂತರ ಹಿಂಸೆಗಳ ಬಗ್ಗೆ ಆತಂಕದೊಂದಿಗೆ ಈ ಪತ್ರ ಬರೆಯುತ್ತಿದ್ದೇವೆ’ ಎಂದು ತಿಳಿಸಿದ್ದಾರೆ.
ಸಮಾಜಘಾತುಕ ಶಕ್ತಿಗಳನ್ನು ನಿಯಂತ್ರಿಸಬೇಕು ಮತ್ತು ಬಹುತ್ವದೊಂದಿಗಿನ ಸಾಮಾಜಿಕ ಸೌಹಾರ್ದತೆ ಹೊಂದಿರುವ ಪ್ರಗತಿ ಪರ ರಾಜ್ಯವಾಗಿರುವ ಕರ್ನಾಟಕದ ಸುದೀರ್ಘ ಇತಿಹಾಸವನ್ನು ಎತ್ತಿ ಹಿಡಿಯಬೇಕು ಎಂದು ಮನವಿ ಮಾಡಿದ್ದಾರೆ.

‘ಕಳೆದ ಕೆಲವು ತಿಂಗಳಲ್ಲಿ ರಾಜ್ಯವು ವಿವಿಧ ಜಿಲ್ಲೆಗಳಲ್ಲಿ ಯುವಜನರ ಬರ್ಬರ ಹತ್ಯೆಯನ್ನು ಕಂಡಿದೆ. ಅತಿರೇಕದ ದ್ವೇಷ ಭಾಷಣಗಳು, ಸಾರ್ವಜನಿಕ ಬೆದರಿಕೆಗಳು ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಆರಾಧನೆಗೆ ಅಡ್ಡಿಗಳು, ಮರ್ಯಾದೆಗೇಡು ಹತ್ಯೆ, ನೈತಿಕ ಪೊಲೀಸ್‌ಗಿರಿ, ಜನಪ್ರತಿನಿಧಿಗಳ ಸ್ತ್ರೀದ್ವೇಷದ ಹೇಳಿಕೆಗಳು ಹಾಗೂ ವಿವಿಧ ಧಾರ್ಮಿಕ ಗುಂಪುಗಳ ಮಧ್ಯೆ ಹಗೆತನ ಮತ್ತು ಹಿಂಸಾತ್ಮಕ ಸಂಘರ್ಷದ ಘಟನೆಗಳು ನಡೆಯುತ್ತಿವೆ. ಈ ಬೆಳವಣಿಗೆಗಳು ಶಾಸಕರು ನೀಡುವ ಸಂವೇದನಾರಹಿತ ಮತ್ತು ಅಸಾಂವಿಧಾನಿಕ ಹೇಳಿಕೆಗಳಿಂದ ಮತ್ತು ಕಿಡಿಗೇಡಿ ಸಮಾಜ ವಿದ್ರೋಹಿ ಗುಂಪುಗಳನ್ನು ನಿಯಂತ್ರಿಸುವಲ್ಲಿ ಸರ್ಕಾರದ ವ್ಯವಸ್ಥೆ ವಿಫಲವಾಗಿರುವುದರಿಂದ ಕುಮ್ಮಕ್ಕು ಪಡೆದಿವೆ’ ಎಂದು ಆರೋಪಿಸಿದ್ದಾರೆ.

34 ಮಂದಿ ಪ್ರಗತಿಪರರು ಈ ಪತ್ರ ಬರೆದಿದ್ದಾರೆ. ರಾಮಚಂದ್ರ ಗುಹಾ, ಪ್ರೊಫೆಸರ್ ಜಾನಕಿ ನಾಯರ್, ವಿಜ್ಞಾನಿಗಳಾದ ಪ್ರೊ. ಶರದ್‌ಚಂದ್ರ ಲೆಲೆ, ಪ್ರೊ. ವಿನೋದ್ ಗೌರ್ ಮತ್ತು ಪ್ರೊ. ವಿದ್ಯಾನಂದ ನಂಜುಂಡಯ್ಯ, ಸಮಾಜಶಾಸ್ತ್ರಜ್ಞರಾದ ಎ.ಆರ್ ವಾಸವಿ ಮತ್ತು ಪ್ರೊ. ಸತೀಶ್ ದೇಶಪಾಂಡೆ, ಸಾಹಿತಿ ವಿವೇಕ್ ಶಾನಭಾಗ್, ಪುರುಷೋತ್ತಮ ಬಿಳಿಮಲೆ ಮತ್ತು ಕೆಪಿ ಸುರೇಶ, ಪರಿಸರವಾದಿ ಎಎನ್ ಯೆಲ್ಲಪ್ಪ ರೆಡ್ಡಿ, ಸಾಮಾಜಿಕ ಕಾರ್ಯಕರ್ತ ಬೇಜವಾಡ ವಿಲ್ಸನ್ ಇವರಲ್ಲಿ ಸೇರಿದ್ದಾರೆ.
‘ರಾಜ್ಯದಲ್ಲಿನ ಈ ನಕಾರಾತ್ಮಕ ಬೆಳವಣಿಗೆಯನ್ನು ಗಂಭೀರವಾಗಿ ಪರಾಮರ್ಶಿಸಬೇಕು ಮತ್ತು ಕಾನೂನಿನ ನಿಯಮ, ಸಂವಿಧಾನದ ತತ್ವಗಳು, ಎಲ್ಲ ನಾಗರಿಕರ ಹಕ್ಕುಗಳು ಮತ್ತು ಮಾನವೀಯತೆಯ ಮೂಲ ನೀತಿಗಳು ಉಳಿಯುವಂತೆ ಖಾತರಿವಹಿಸಬೇಕು ಎಂದು ಕೋರುತ್ತೇವೆ. ಮುಂದಿನ ಪೀಳಿಗೆಯು ನಿಮ್ಮನ್ನು ಮೌಲ್ಯಮಾಪನ ಮಾಡುವ ಅಳತೆಗೋಲು ಆಗಿರುವ ಈ ಸವಾಲುಗಳನ್ನು ಎದುರಿಸುವುದು ನಿಮ್ಮ ಸಾಮರ್ಥ್ಯಕ್ಕೆ ಬಿಟ್ಟಿದೆ’ ಎಂದು ಹೇಳಿದ್ದಾರೆ.
ಪತ್ರಕ್ಕೆ ಸಿಎಂ ಪ್ರತಿಕ್ರಿಯೆ
ಈ ಪತ್ರಕ್ಕೆ ಪ್ರತಿಕ್ರಿಯೆ ನೀಡಿರುವ ಬಸವರಾಜ ಬೊಮ್ಮಾಯಿ, ರಾಜ್ಯದಲ್ಲಿ ಎಲ್ಲ ಅಲ್ಪಸಂಖ್ಯಾತರೂ ಸುರಕ್ಷಿತವಾಗಿದ್ದಾರೆ ಮತ್ತು ಸಂವಿಧಾನದಲ್ಲಿ ನೀಡಿರುವ ನಾಗರಿಕರ ಎಲ್ಲ ಹಕ್ಕುಗಳನ್ನೂ ರಕ್ಷಿಸಲಾಗುತ್ತಿದೆ. ಅವುಗಳು ಮಿತಿಮೀರಿದಾಗ ಸರ್ಕಾರ ತಕ್ಷಣದ ಕ್ರಮ ತೆಗೆದುಕೊಂಡಿದೆ. ವಾಸ್ತವವಾಗಿ, ಅಲ್ಪಸಂಖ್ಯಾತರ ಜೀವನೋಪಾಯ ಸುಧಾರಣೆಗೆ ನಾವು ಸಾಕಷ್ಟು ಕ್ರಮಗಳೊಂದಿಗೆ ಬರುತ್ತಿದ್ದೇವೆ. ನಾನು ಮೂರು ‘ಇ’ಗಳಾದ- ಶಿಕ್ಷಣ, ಉದ್ಯೋಗ ಮತ್ತು ಸಬಲೀಕರಣದಲ್ಲಿ ದೃಢವಾಗಿ ನಂಬಿಕೆ ಇರಿಸಿದ್ದೇನೆ. ನನ್ನ ಸರ್ಕಾರ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ.