ಮೈಸೂರು: ರಾಯಚೂರು ಜಿಲ್ಲಾ ನ್ಯಾಯಾಲಯದಲ್ಲಿ ಗಣರಾಜ್ಯೋತ್ಸವ ದಿನ ಆಚರಣೆ ವೇಳೆ ಅಂಬೇಡ್ಕರ್ ಅವರ ಭಾವಚಿತ್ರವನ್ನು ತೆರವುಗೊಳಿಸಿದ ನ್ಯಾಯಾಧೀಶರಾದ ಮಲ್ಲಿಕಾರ್ಜುನಗೌಡ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿ ಹುದ್ದೆಯಿಂದ ವಜಾಗೊಳಿಸಬೇಕು ಎಂದು ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಅಧ್ಯಕ್ಷ ಕೆ.ಎಸ್.ಶಿವರಾಮು ಒತ್ತಾಯಿಸಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಘಟನೆ ನ್ಯಾಯಾಂಗ ವ್ಯವಸ್ಥೆಗೆ ಒಂದು ಕಪ್ಪುಚುಕ್ಕೆಯಂತಾಗಿದೆ. ಅಲ್ಲದೆ ದೇಶದಲ್ಲಿ ಸಂವಿಧಾನ ಜಾರಿಗೊಂಡ ಬಳಿಕ ಯಾರೊಬ್ಬರು ಸಹಾ ಈ ರೀತಿ ಮಾಡಿರಲಿಲ್ಲ. ಸಂವಿಧಾನದ ಅಡಿಯಲ್ಲಿ ಕೆಲಸ ಮಾಡಿ ಸಂವಿಧಾನ ಶಿಲ್ಪಿಗೆ ಅವಮಾನ ಮಾಡುವುದು ದೇಶದ್ರೋಹ. ಹೀಗಾಗಿ ನ್ಯಾಯಾಧೀಶರಾದ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಮನವಿಮಾಡಿದರು.
ಗಣರಾಜ್ಯೋತ್ಸವದ ದಿನದಂದು ದೇಶದ ಯಾವ ಮಹಾನ್ ನಾಯಕರ ಫೋಟೋ ಇಲ್ಲದಿದ್ದರೂ, ಸಂವಿಧಾನದ ಸಾಂಕೇತಿಕವಾಗಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರ ಇರಲೇಬೇಕು. ಸರ್ವೋಚ್ಛ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯಗಳಲ್ಲಿ ಗಣರಾಜ್ಯೋತ್ಸವದ ದಿನದಂದು ಅಂಬೇಡ್ಕರ್ ಫೋಟೋ ಇಟ್ಟು ಗೌರವ ಸೂಚಿಸುತ್ತಾರೆ. ಈ ಕನಿಷ್ಠ ಜ್ಞಾನವೂ ಮಲ್ಲಿಕಾರ್ಜುನ ಗೌಡ ಅವರಿಗೆ ಇರಲಿಲ್ಲವೇ? ನ್ಯಾಯಾಧೀಶರಾಗಿ ಇರಲಿಲ್ಲವೇ? ಅಥವಾ ಅಂಬೇಡ್ಕರ್ ಅವಮಾನ ಮಾಡುವುದಕ್ಕಾಗಿ ಈ ರೀತಿ ಮಾಡಿರಬಹದಾ? ಅಥವಾ ಬೇರೆ ಯಾರೋ ಹೇಳಿ ಮಾಡಿಸರಬಹುದಾದ ಅನುಮಾನಗಳಿವೆ. ಹೀಗಾಗಿ ಈ ಬಗ್ಗೆ ತನಿಖೆ ನಡೆಸಬೇಕು ಎಂದು ಮನವಿ ಮಾಡಿದರು.
ರಾಯಚೂರಿನ ಘಟನೆ ಖಂಡಿಸಿ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಗೌಡ ಅವರನ್ನು ವಜಾಗೊಳಿಸುವಂತೆ ಮತ್ತು ನ್ಯಾಯಾಧೀಶರ ನೇಮಕದಲ್ಲಿ ಮೀಸಲಾತಿ ತರುವಂತೆ ಆಗ್ರಹಿಸಿ ಹಿಂದುಳಿದ ವರ್ಗಗಳ ವತಿಯಿಂದ ‘ಸಂವಿಧಾನ ಸ್ವಾಭಿಮಾನಿ ನಡಿಗೆ’ ಶೀರ್ಷಿಕೆಯಡಿ ಜ.೨೯ ರ ಶನಿವಾರ ಬೆಳಗ್ಗೆ ೧೧.೩೦ಕ್ಕೆ ನಗರದ ಗಾಂಧೀ ಚೌಕದಲ್ಲಿನ ಗಾಂಧೀ ಪ್ರತಿಮೆ ಕಣ್ಣಿಗೆ ಬಟ್ಟೆ ಕಟ್ಟಿ, ಬಳಿಕ ಸ್ವಾಭಿಮಾನದ ನಡಿಗೆ ಆರಂಭಿಸಿ ಜಿಲ್ಲಾಧಿಕಾರಿ ಕಚೇರಿವರೆಗೆ ತಲುಪಿ ನ್ಯಾಯಾಧೀಶರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಮೂಲಕ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರು ಮತ್ತು ರಾಷ್ಟ್ರಪತಿಗಳಿಗೆ ಮನವಿಪತ್ರ ಸಲ್ಲಿಸಲಾಗುವುದು ಎಂದರು.
ಜಿಲ್ಲಾ ಉಪ್ಪಾರ ಸಂಘದ ಅಧ್ಯಕ್ಷ ೋಂಗೇಶ್ ಉಪ್ಪಾರ್, ಜಿಲ್ಲಾ ಸವಿತ ಸಮಾಜದ ಸಂಘದ ಅಧ್ಯಕ್ಷ ಎನ್.ಆರ್. ನಾಗೇಶ್, ಹಿಂದುಳಿದ ವರ್ಗಗಳ ಸಂಘದ ಅಧ್ಯಕ್ಷ ಹರೀಶ್ ಮೊಗಣ್ಣ, ಕಾಂಗ್ರೆಸ್ ಮುಖಂಡ ರೋಹಿತ್, ಲೋಕೇಶ್ ಕುಮಾರ್ ಎನ್. ಮಾದಾಪುರ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.