ಮನೆ ಕ್ರೀಡೆ ಅಂತಾರಾಷ್ಟ್ರೀಯ ಫುಟ್’ಬಾಲ್​’ಗೆ ವಿದಾಯ ಹೇಳಿದ ಸುನಿಲ್ ಛೆಟ್ರಿ

ಅಂತಾರಾಷ್ಟ್ರೀಯ ಫುಟ್’ಬಾಲ್​’ಗೆ ವಿದಾಯ ಹೇಳಿದ ಸುನಿಲ್ ಛೆಟ್ರಿ

0

ಭಾರತೀಯ ಫುಟ್ ​ಬಾಲ್ ದಂತಕಥೆ ಸುನಿಲ್ ಛೆಟ್ರಿ ಅಂತಾರಾಷ್ಟ್ರೀಯ ಫುಟ್ ​ಬಾಲ್​ ನಿಂದ ನಿವೃತ್ತಿ ಘೋಷಿಸಿದ್ದು, ಜೂನ್ 6 ರಂದು ಕೊಲ್ಕತ್ತಾದ ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ ನಡೆಯಲಿರುವ ಕುವೈತ್ ವಿರುದ್ಧದ ಪಂದ್ಯದ ಮೂಲಕ ಇಂಟರ್​ ನ್ಯಾಷನಲ್​ ಫುಟ್​ ಬಾಲ್ ​ಗೆ ವಿದಾಯ ಹೇಳುವುದಾಗಿ ಛೆಟ್ರಿ ತಿಳಿಸಿದ್ದಾರೆ.

Join Our Whatsapp Group

 39 ವರ್ಷ ವಯಸ್ಸಿನ ಸುನಿಲ್, ಭಾರತದ ಪರ ಈವರೆಗೆ 150 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 94 ಗೋಲುಗಳನ್ನು ಗಳಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಇದೀಗ ಕುವೈತ್ ವಿರುದ್ಧದ ವಿಶ್ವಕಪ್ ಅರ್ಹತಾ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕೆರಿಯರ್ ಅಂತ್ಯಗೊಳಿಸಲು ಸುನಿಲ್ ಛೆಟ್ರಿ ನಿರ್ಧರಿಸಿದ್ದಾರೆ.

ಈ ಬಗ್ಗೆ ಎಕ್ಸ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿರುವ ಸುನಿಲ್ ಛೆಟ್ರಿ, ನಾನು ಎಂದಿಗೂ ಮರೆಯದ ಮತ್ತು ಆಗಾಗ್ಗೆ ನೆನಪಿಸಿಕೊಳ್ಳುವ ಒಂದು ದಿನವಿದೆ. ಅದು ನನ್ನ ದೇಶಕ್ಕಾಗಿ ಆಡಿದ ಮೊದಲ ಪಂದ್ಯದ ದಿನ. ಅದು ನಂಬಲಸಾಧ್ಯವಾಗಿತ್ತು. ಅಂದು ಬೆಳಿಗ್ಗೆ ರಾಷ್ಟ್ರೀಯ ತಂಡದ ಕೋಚ್ ಸುಖಿ ಸರ್, ನನ್ನ ಬಳಿಗೆ ಬಂದು ನೀವು ಆಡುತ್ತೀರಿ ಎಂದರು. ಆ ಅನುಭವವನ್ನು ಹೇಳಲಾಸಾಧ್ಯ. ನಾನು ನನ್ನಜೆರ್ಸಿಯನ್ನು ತೆಗೆದುಕೊಂಡೆ. ಅಲ್ಲದೆ ಅದರ ಮೇಲೆ ಸ್ವಲ್ಪ ಸುಗಂಧ ದ್ರವ್ಯವನ್ನು ಸಿಂಪಡಿಸಿದೆ. ಏಕೆ ಎಂಬುದು ನಿಜಕ್ಕೂ ನನಗೆ ತಿಳಿದಿಲ್ಲ.

ಆ ದಿನ, ನನ್ನ ಚೊಚ್ಚಲ ಪಂದ್ಯದಲ್ಲಿ ನನ್ನ ಮೊದಲ ಗೋಲು… ಬಹುಶಃ ನಾನು ಎಂದಿಗೂ ಮರೆಯುವುದಿಲ್ಲ. ಅಲ್ಲದೆ ನನ್ನ ರಾಷ್ಟ್ರೀಯ ತಂಡದ ಪ್ರಯಾಣದ ಅತ್ಯುತ್ತಮ ದಿನಗಳನ್ನು ಸಹ ಮರೆಯಲಾರೆ ಎಂದು ಸುನಿಲ್ ಛೆಟ್ರಿ ಹೇಳಿದ್ದಾರೆ.

ಕಳೆದ 19 ವರ್ಷಗಳಲ್ಲಿ ನಾನು ನೆನಪಿಸಿಕೊಳ್ಳುವ ಭಾವನೆಯು ಕರ್ತವ್ಯದ ಒತ್ತಡ ಮತ್ತು ಅಪಾರ ಸಂತೋಷದ ನಡುವಿನ ಉತ್ತಮ ಸಂಯೋಜನೆಯಾಗಿದೆ. ನಾನು ವೈಯಕ್ತಿಕವಾಗಿ ಎಂದಿಗೂ ಯೋಚಿಸಲಿಲ್ಲ. ನಾನು ದೇಶಕ್ಕಾಗಿ ಹಲವು ಪಂದ್ಯಗಳನ್ನಾಡಿದ್ದೇನೆ. ಕೆಲವೊಮ್ಮೆ ಉತ್ತಮ ಅಥವಾ ಕೆಟ್ಟ ಫಲಿತಾಂಶ ನೋಡಿದ್ದೇನೆ. ಇದಾಗ್ಯೂ ಕಳೆದ ಒಂದೂವರೆ, ಎರಡು ತಿಂಗಳು ನನಗೆ ತುಂಬಾ ವಿಚಿತ್ರವಾಗಿತ್ತು.

ಹೀಗಾಗಿಯೇ ನಾನು ಇದುವೇ ನನ್ನ ಕೊನೆಯ ಆಟ ಎಂದು ಭಾವಿಸಲು ಪ್ರಾರಂಭಿಸಿದೆ. ಇದು ತುಂಬಾ ವಿಚಿತ್ರವಾಗಿತ್ತು. ಈ ತರಬೇತುದಾರ, ಆ ತರಬೇತುದಾರ, ಆ ತಂಡ, ಆ ಸದಸ್ಯ, ಆ ಮೈದಾನ, ಆ ವಿದೇಶಿ ಪಂದ್ಯ, ಈ ಉತ್ತಮ ಆಟ, ಆ ಕೆಟ್ಟ ಆಟ, ನನ್ನ ವೈಯಕ್ತಿಕ ಪ್ರದರ್ಶನಗಳು, ಎಲ್ಲವೂ ಕಣ್ಮುಂದೆ ಬಂದವು. ಎಲ್ಲವನ್ನೂ ಯೋಚಿಸಲು ಪ್ರಾರಂಭಿಸಿದೆ. ಹೀಗಾಗಿ ನಿವೃತ್ತಿಗೆ ಇದುವೇ ಸಕಾಲ ಎಂದು ಭಾವಿಸಿದೆ.

ಆದರೆ ಅದಕ್ಕೂ ಮುನ್ನ ಭಾರತಕ್ಕಾಗಿ ಪಂದ್ಯ ಗೆಲ್ಲಿಸಿಕೊಡಬೇಕಿದೆ. ಮುಂದಿನ ಸುತ್ತಿಗೆ ಅರ್ಹತೆ ಪಡೆಯಲು ನಮಗೆ ಮೂರು ಅಂಕಗಳ ಅಗತ್ಯವಿದೆ. ಇದು ನಮಗೆ ಬಹಳ ಮುಖ್ಯವಾಗಿದೆ. ಕುವೈತ್ ವಿರುದ್ಧದ ಪಂದ್ಯದ ಈ ಪಂದ್ಯದೊಂದಿಗೆ ವಿದಾಯ ಹೇಳುತ್ತಿದ್ದೇನೆ ಎಂದು  ಸುನಿಲ್ ಛೆಟ್ರಿ ತಿಳಿಸಿದ್ದಾರೆ.

ಚೇತ್ರಿ ಅವರು ಕಳೆದ ಮಾರ್ಚ್‌ನಲ್ಲಿ ಭಾರತಕ್ಕಾಗಿ ತಮ್ಮ 150 ನೇ ಪಂದ್ಯವನ್ನು ಆಡಿದರು. ಗುವಾಹಟಿಯಲ್ಲಿ ಅಫ್ಘಾನಿಸ್ತಾನದ ವಿರುದ್ಧದ ನಡೆದ ಈ ಪಂದ್ಯದಲ್ಲಿ ಅವರು ಗೋಲು ಗಳಿಸಿದ್ದರು. ಆದರೆ ಆ ಪಂದ್ಯದಲ್ಲಿ ಭಾರತ 1-2 ಅಂತರದಲ್ಲಿ ಸೋಲನುಭವಿಸಿತ್ತು.

2005ರಲ್ಲಿ ಪದಾರ್ಪಣೆ ಮಾಡಿದ್ದ ಚೇತ್ರಿ ದೇಶಕ್ಕಾಗಿ 94 ಗೋಲು ಗಳಿಸಿದ್ದಾರೆ. ಅವರು ಭಾರತದ ಸಾರ್ವಕಾಲಿಕ ಟಾಪ್ ಸ್ಕೋರರ್ ಮತ್ತು ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರನಾಗಿದ್ದಾರೆ. ಕ್ರಿಸ್ಟಿಯಾನೋ ರೊನಾಲ್ಡೊ ಮತ್ತು ಲಿಯೋನೆಲ್ ಮೆಸ್ಸಿಯ ನಂತರ ಸಕ್ರಿಯ ಆಟಗಾರರ ಪೈಕಿ ಅತೀ ಹೆಚ್ಚು ಗೋಲು ಗಳಿಸಿದವರ ಪಟ್ಟಿಯಲ್ಲಿ ಅವರು ಮೂರನೇ ಸ್ಥಾನದಲ್ಲಿದ್ದಾರೆ.