ಶಿವಮೊಗ್ಗ : ಪ್ರಯಾಣಿಕರಿಂದ ನಿತ್ಯ ಉತ್ತಮ ಪ್ರತಿಕ್ರಿಯೆ ಬರುತ್ತಿದ್ದರೂ, ಹಲವು ಕಾರಣಗಳನ್ನು ನೀಡಿ ಇಂಡಿಗೋ ವಿಮಾನಯಾನ ಸಂಸ್ಥೆ ಶಿವಮೊಗ್ಗ – ಬೆಂಗಳೂರು ನಡುವಿನ ಸೇವೆಯನ್ನು ಸ್ಥಗಿತಗೊಳಿಸಿದೆ. ಏ.30ರ ಮಧ್ಯಾಹ್ನ 2:30ಕ್ಕೆ ವಿಮಾನ ಕೊನೆ ಹಾರಾಟ ಮಾಡಿತು. ಈ ಮೂಲಕ ಕೇವಲ 33 ತಿಂಗಳಲ್ಲೇ ಇಂಡಿಗೋ ಸಂಸ್ಥೆ ಪ್ರಯಾಣ ಸ್ಥಗಿತಗೊಳಿಸಿದಂತಾಗಿದೆ.
2023ರ ಆಗಸ್ಟ್ 11 ರಂದು ಇಂಡಿಗೋ ತನ್ನ ಮೊದಲ ಸೇವೆ ಆರಂಭಿಸಿತ್ತು. ಇದರಿಂದ ಮಲೆನಾಡು ಮತ್ತು ಮಧ್ಯ ಕರ್ನಾಟಕಕ್ಕೆ ಅನುಕೂಲವಾಗಿತ್ತು. 33 ತಿಂಗಳ ಅವಧಿಯಲ್ಲಿ 1 ಲಕ್ಷಕ್ಕೂ ಹೆಚ್ಚು ಜನರಿಗೆ ಸಂಸ್ಥೆ ಸೇವೆ ಒದಗಿಸಿತ್ತು. ತನ್ನ ವೆಬ್‍ಸೈಟ್‍ನಲ್ಲಿ ಇಂದಿನಿಂದ ಬೆಂಗಳೂರು – ಶಿವಮೊಗ್ಗ ನಡುವಿನ ಟಿಕೆಟ್ ಬುಕ್ಕಿಂಗ್ ಸ್ಥಗಿತಗೊಳಿಸಿದೆ.
ಹಾರಾಟ ಸ್ಥಗಿತಕ್ಕೆ ಕಾರಣಗಳೇನು? – ಉಡಾನ್ ಯೋಜನೆಯಡಿ ರಾಜಧಾನಿಗೆ ಸಂಚಾರ ಸಾಧ್ಯವಿಲ್ಲ. ಅಲ್ಲದೇ ಡಿಜಿಸಿಎ ವಿಧಿಸಿದ ಹೊಸ ನಿಯಮಗಳಿಂದ ಪೈಲಟ್ ಹಾಗೂ ಸಿಬ್ಬಂದಿ ಕೊರತೆ ಕಂಡು ಬರುತ್ತಿದೆ.
ಈ ಹಿಂದೆ ಶಿವಮೊಗ್ಗ – ಬೆಂಗಳೂರು ನಡುವೆ ಸಂಚಾರಕ್ಕೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಒಪ್ಪಂದದಂತೆ ರಾಜ್ಯ ಸರ್ಕಾರ ಪ್ರತಿ ಟಿಕೆಟ್‌ಗೆ 500 ರೂ. ಸಹಾಯಧನ ನೀಡುತ್ತಿತ್ತು. 2025ರ ಆಗಸ್ಟ್‌ಗೆ ಒಪ್ಪಂದ ಅಂತ್ಯವಾಗಿತ್ತು. ಆದರೂ ಇಂಡಿಗೋ ಇಷ್ಟು ದಿನ ಸೇವೆ ನೀಡಿತ್ತು. ಇದೀಗ ಒಪ್ಪಂದ ನವೀಕರಣಕ್ಕೆ ರಾಜ್ಯ ಸರ್ಕಾರ ವಿಳಂಬ ಮಾಡುತ್ತಿದೆ. ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ವ್ಯವಸ್ಥೆ ಪೂರ್ಣಗೊಂಡಿಲ್ಲ. ಮಳೆಗಾಲದ ಅವಧಿಯಲ್ಲಿ ವಿಮಾನ ರದ್ದು, ಲ್ಯಾಂಡಿಂಗ್ ಸಮಸ್ಯೆ ಉದ್ಭವಿಸಬಹುದು. ಹೀಗೆ ಹಲವು ಕಾರಣಗಳನ್ನು ಮುಂದಿಟ್ಟುಕೊಂಡು ಹಾರಾಟ ಸ್ಥಗಿತಗೊಳಿಸಲಾಗಿದೆ.















