ಮನೆ ಕಾನೂನು ಕಂಪೆನಿ ಒದಗಿಸುವ ಸುರಕ್ಷತೆಯ ಬಗ್ಗೆ ವಾಟ್ಸಾಪ್ ಗ್ರೂಪ್‌ ನಲ್ಲಿ ಕಳವಳ ವ್ಯಕ್ತಪಡಿಸುವುದು ತಪ್ಪಲ್ಲ: ಕೇರಳ ಹೈಕೋರ್ಟ್

ಕಂಪೆನಿ ಒದಗಿಸುವ ಸುರಕ್ಷತೆಯ ಬಗ್ಗೆ ವಾಟ್ಸಾಪ್ ಗ್ರೂಪ್‌ ನಲ್ಲಿ ಕಳವಳ ವ್ಯಕ್ತಪಡಿಸುವುದು ತಪ್ಪಲ್ಲ: ಕೇರಳ ಹೈಕೋರ್ಟ್

0

ಉದ್ಯೋಗಿಯೊಬ್ಬರು ತಾನು ಕೆಲಸ ಮಾಡುತ್ತಿರುವ ಕಂಪನಿಯಲ್ಲಿನ ಸುರಕ್ಷತೆಯ ಬಗ್ಗೆ ಖಾಸಗಿಯಾಗಿ ವಾಟ್ಸಾಪ್‌ ಗುಂಪಿನಲ್ಲಿ ಸಂದೇಶ ಹಂಚಿಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಕೇರಳ ಹೈಕೋರ್ಟ್ ಇತ್ತೀಚೆಗೆ ಅಭಿಪ್ರಾಯಪಟ್ಟಿದೆ .

Join Our Whatsapp Group

ಹಾಗೆ ಮಾಡಿದ್ದಕ್ಕೆ ಉದ್ಯೋಗದಾತರು ಶಿಸ್ತುಕ್ರಮ ಕೈಗೊಂಡರೆ ಅದು ಸಂವಿಧಾನದ 19 (1) (ಎ) ವಿಧಿಯಡಿ ಉದ್ಯೋಗಿಯ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತದೆ ಎಂದು ಜೂನ್ 18ರ ತೀರ್ಪಿನಲ್ಲಿ, ನ್ಯಾಯಮೂರ್ತಿ ಸತೀಶ್ ನಿನನ್ ಅವರು ಹೇಳಿದ್ದಾರೆ.

ಸರ್ಕಾರ ನಡೆಸುತ್ತಿರುವ ರಸಗೊಬ್ಬರ ಕಂಪನಿಯ ತಂತ್ರಜ್ಞರೊಬ್ಬರ ವಿರುದ್ಧ ಹೊರಿಸಲಾದ ಎರಡು ಅಶಿಸ್ತಿನ ಪ್ರಕರಣಗಳಲ್ಲಿ ಒಂದನ್ನು ರದ್ದುಗೊಳಿಸುವಾಗ ನ್ಯಾಯಾಲಯ ಈ ವಿಚಾರ ತಿಳಿಸಿದೆ.

ಕಂಪನಿಯ ಘಟಕದಲ್ಲಿ ಅಮೋನಿಯಾ ರಾಸಾಯನಿಕದ ನಿರ್ವಹಣೆ ಕುರಿತು ಕಳವಳ ವ್ಯಕ್ತಪಡಿಸಿ ತಂತ್ರಜ್ಞ ಕೆಲ ಸಂದೇಶಗಳನ್ನು ಖಾಸಗಿ ವಾಟ್ಸಾಪ್ ಗುಂಪಿನಲ್ಲಿ ಹಂಚಿಕೊಂಡಿದ್ದರು.

“ವಾಟ್ಸಾಪ್‌ ಗುಂಪು ಕಂಪೆನಿಯ ತಂತ್ರಜ್ಞರೊಳಗೆ ಖಾಸಗಿಯಾದುದಾಗಿತ್ತು. ಸುರಕ್ಷತೆ ಬಗ್ಗೆ ಕಳವಳ ವ್ಯಕ್ತಪಡಿಸಿದ ಮಾತ್ರಕ್ಕೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗದು. (ಹಾಗೆ ಸಂದೇಶ ಹಂಚಿಕೊಳ್ಳುವುದು) ಸಂವಿಧಾನದ 19 (1) (ಎ) ವಿಧಿಯಡಿ ಒದಗಿಸಲಾದ ಮೂಲಭೂತ ಸ್ವಾತಂತ್ರ್ಯದ ಹಕ್ಕು ಎಂದು ಅರ್ಜಿದಾರ ವಾದದ ವೇಳೆ ಪ್ರತಿಪಾದಿಸಿದ್ದಾರೆ. (ಆತನ ವಿರುದ್ಧದ) ಶಿಸ್ತು ಕ್ರಮ ಉಳಿಯದು” ಎಂದು ನ್ಯಾಯಾಲಯ ಹೇಳಿದೆ.

ಅರ್ಜಿದಾರರು ಕ್ಷಮೆ ಕೋರಿದ್ದರೂ ಕಂಪೆನಿ ಔಪಚಾರಿಕವಾಗಿ ಶಿಸ್ತುಕ್ರಮದ ಎಚ್ಚರಿಕೆ ನೀಡಿತ್ತು. ಅಲ್ಲದೆ ಈ ಎಚ್ಚರಿಕೆಯನ್ನು ಸೇವಾ ಪುಸ್ತಕದಲ್ಲಿ ನಮೂದಿಸಿದರೆ ತಮ್ಮ ವೃತ್ತಿಜೀವನದ ಮೇಲೆ ಪರಿಣಾಮ ಬೀರಬಹುದು ಎಂಬ ಕಾರಣಕ್ಕೆ ಅವರು ತಮ್ಮ ಅಮಾನತು ಮತ್ತು ಕಂಪೆನಿ ನೀಡಿದ್ದ ಎಚ್ಚರಿಕೆ ಆದೇಶ ಪ್ರಶ್ನಿಸಿ ಕೇರಳ ಹೈಕೋರ್ಟ್‌ ಮೊರೆ ಹೋಗಿದ್ದರು.

ಅಲ್ಲದೆ ತಮ್ಮ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವ ಮುನ್ನ ಔಪಚಾರಿಕವಾಗಿ ಯಾವುದೇ ವಿಚಾರಣೆ ನಡೆಸಿರಲಿಲ್ಲ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದರು.

ಅರ್ಜಿದಾರರು ಕ್ಷಮೆ ಯಾಚಿಸಿದ್ದು, ವಾಟ್ಸಾಪ್‌ ಸಂದೇಶ ಕಳಿಸಿರುವುದನ್ನು ಒಪ್ಪಿಕೊಂಡಿದ್ದರೂ ಸಂದೇಶ ಆಕ್ಷೇಪಾರ್ಹ ಎಂದು ಅವರು ಒಪ್ಪಿಕೊಂಡಿದ್ದರು ಎಂದರ್ಥವಲ್ಲ. ಅಂತಹ ಸಂದರ್ಭಗಳಲ್ಲಿ, ಶಿಸ್ತುಕ್ರಮಕ್ಕೂ ಮುನ್ನ ತನಿಖೆ ನಡೆಸಬೇಕಿತ್ತು ಎಂದ ನ್ಯಾಯಾಲಯ ಈ ಅಂಶದ ಮೇಲೆ ಮಾಡಲಾಗಿದ್ದ ಅಶಿಸ್ತಿನ ಆರೋಪವನ್ನು ರದ್ದುಗೊಳಿಸಿತು.

ಆದರೆ ಅಮೋನಿಯಾ ನಿರ್ವಹಣೆ ವಿಭಾಗಕ್ಕೆ ಅರ್ಜಿದಾರ ಅನಧಿಕೃತವಾಗಿ ಪ್ರವೇಶಿಸಿದ್ದಕ್ಕಾಗಿ ಕಂಪೆನಿ ನೀಡಿದ್ದ ಎಚ್ಚರಿಕೆ ಆದೇಶದಲ್ಲಿ ಮಧ್ಯಪ್ರವೇಶಿಸಲು ನ್ಯಾಯಾಲಯ ನಿರಾಕರಿಸಿತು. ಹಾಗೆ ಪ್ರವೇಶ ಮಾಡುವುದು ಸುರಕ್ಷತಾ ನಿಯಮದ ಉಲ್ಲಂಘನೆಯಾಗಿದೆ. ಕಂಪೆನಿ ವಿಧಿಸಿರುವ ಶಿಕ್ಷೆಯೂ ನಗಣ್ಯವಾಗಿರುವುದರಿಂದ ಅದರಲ್ಲಿ ತಾನು ಹಸ್ತಕ್ಷೇಪ ಮಾಡುವುದಿಲ್ಲ ಎಂದು  ನ್ಯಾಯಾಲಯ ವಾದಿಸಿತು.

ಅರ್ಜಿದಾರರ ಪರವಾಗಿ ವಕೀಲರಾದ ಕಾಳೀಶ್ವರಂ ರಾಜ್, ತುಳಸಿ ಕೆ ರಾಜ್, ವರುಣ್ ಸಿ ವಿಜಯ್ ಹಾಗೂ ಮೈತ್ರೇಯಿ ಸಚ್ಚಿದಾನಂದ ಹೆಗ್ಡೆ ವಾದ ಮಂಡಿಸಿದ್ದರು.

ವಕೀಲರಾದ ಎಂ ಗೋಪಾಲಕೃಷ್ಣನ್ ನಂಬಿಯಾರ್, ಕೆ ಜಾನ್ ಮಥಾಯ್, ಜೋಸನ್ ಮನವಾಲನ್, ಕುರಿಯನ್ ಥಾಮಸ್, ಪೌಲೋಸ್ ಸಿ ಅಬ್ರಹಾಂ ಹಾಗೂ ರಾಜಾ ಕಣ್ಣನ್ ಅವರು ಕಂಪೆನಿಯನ್ನು ಪ್ರತಿನಿಧಿಸಿದ್ದರು.

ಹಿಂದಿನ ಲೇಖನಆನೆ ಕಾರ್ಯಪಡೆ ಸಿಬ್ಬಂದಿ ಮೇಲೆ ಕಾಡಾನೆ ದಾಳಿ: ಮೂವರಿಗೆ ಗಾಯ
ಮುಂದಿನ ಲೇಖನರೈತರ ಬದುಕು ಮತ್ತು ಬವಣೆಗಳ ಬಗ್ಗೆ ಚೆಲ್ಲಾಟ ಆಡಿದರೆ ಹುಷಾರ್: ಸಿಎಂ ಸಿದ್ದರಾಮಯ್ಯ ಎಚ್ಚರಿಕೆ