ಒಮ್ಮೆ ಕೋರ್ಟಿನಲ್ಲಿ ನ್ಯಾಯಾಧೀಶರು ರಾವಣನನ್ನು ಸಾಕ್ಷಿಗಾಗಿ ಕರೆಸಿ “‘ಗೀತಾ’ ಮೇಲೆ ಕೈ ಇಟ್ಟು ಪ್ರಮಾಣ ಮಾಡು” ಎಂದರು. “ಅದೊಂದನ್ನು ಬಿಟ್ಟು ಬೇರೆ ಕೇಳಿ; ನಾನು ಈಗಾಗಲೇ ‘ಸೀತಾ’ ಮೇಲೆ ಕೈ ಇಟ್ಟು ಸುಟ್ಟು ಕೊಂಡಿದ್ದೇನಿ.” ಎಂದ!
***
ದಂಪತಿಗಳಿಬ್ಬರು ದೇವಸ್ಥಾನಕ್ಕೆ ಹೋಗಿ ಗರ್ಭಗುಡಿ ಮುಂದೆ ನಿಂತರು. ಪೂಜಾರಿ ಬಂದು “ಅರ್ಚನೆ ಮಾಡಬೇಕಾ?” ಎಂದು ಕೇಳಿದರು- ‘ಮಾಡಿ’ ಅಂದಾಗ “ಯಾರ ಹೆಸರಲ್ಲಿ ಮಂಗಳಾರತಿ ಮಾಡಲಿ” ಎಂದು ಅರ್ಚಕರು ಕೇಳಿದರು-
ಗಂಡ: “ನನ್ನ ಹೆಸರಲ್ಲಿ ಮಂಗಳಾರತಿ ನಿತ್ಯ ಮನೆಯಲ್ಲಿ ನಡೆಯುತ್ತಲೇ ಇರುತ್ತದೆ. ಇವತ್ತಿಂದಿನ ಇವಳ ಹೆಸರಲ್ಲೇ ಮಾಡಿರಿ”.
***
ಒಂದು ಸಲ ಕೈಲಾಸಂರವರು ಊಟಕ್ಕೆ ಕುಳಿತಾಗ ಮಾಣಿ ಅನ್ನ ಬಡಿಸಿ, ಬಕೆಟ್ ನಿಂದ ಸಾಂಬಾರ್ ಸುರಿದು ನಿಂತ. ಅದರಲ್ಲಿ ತರಕಾರಿಯ ಒಂದು ಹೋಳೂ ಕಾಣಲಿಲ್ಲ. ಹೊಟೆಲ್ ಮಾಲೀಕರನ್ನು ಕರೆದು ಅವರ ಕಿವಿಯಲ್ಲಿ “ಒಂದು ಕೌಪೀನ (ಲಂಗೋಟಿ) ಇದ್ದರೆ ದಯಪಾಲಿಸುತ್ತೀರಾ” ಎಂದರು. ಮಾಲೀಕರು ಕಕ್ಕಾಬಿಕ್ಕಿ ಆಗಿ “ಏಕೆ ತಮಗಾ ಸಾರ್?” ಕೇಳಿದರು. “ಇನ್ನೇನೂ ಇಲ್ಲ, ಈ ಬಕೆಟ್ ನೊಳಗೆ ಮುಳುಗಿ ಒಂದೆರಡು ತರ್ಕಾರಿ ಹೋಳುಗಳೇನಾದರೂ ಸಿಗುತ್ತವೆಯೋ ಎಂದು ನೋಡೋಣ ಅಂತ.” ಆಗ ಮಾಲೀಕ ಅಳಲೂ ಆಗದೆ ನಗಲೂ ಆಗದೆ ಪೆಚ್ಚಾದ!