ಪತ್ರಿಕಾ ಸಂದರ್ಶನಕಾರ ರಾಷ್ಟ್ರಪತಿ ಪ್ರಶಸ್ತಿ ಗಿಟ್ಟಿಸಿದ ‘ಕುಕ್’ ಒಬ್ಬನನ್ನು ಪ್ರಶ್ನಿಸಿದರು.
ಸಂ: ‘ನೀವು ಇಂದು ಪ್ರಶಸ್ತಿ ವಿಜೇತ ಕುಕ್ ಆಗಿದ್ದೀರಿ ನಿಮ್ಮ ಯಶಸ್ಸಿನ ಹಿಂದೆ ಯಾರು ಇದ್ದಾರೆ?’
ಪ್ರ.ವಿಜೇತ: ‘ಇನ್ಯಾರು? ನನ್ನ ಕೈಹಿಡಿದ ಪತ್ನಿ’
ಸಂ: ‘ಅದು ಹೇಗೆ? ಕೊಂಚ ವಿವರಿಸಿ!’
ಪ್ರ.ವಿಜೇತ: ‘ನಾನು ಲಗ್ನವಾದಾಗಿನಿಂದಲೂ ಮನೆಯಲ್ಲಿ ಸೌಟು ಹಿಡಿದು ಬೇಯಿಸೀ ಹಾಕುತ್ತಾ ಇದ್ದೇನೆ. ನನ್ನ ಅನುಭವದಿಂದಾಗಿ, ಅರ್ಥಾತ್ ನನ್ನ ಹೆಂಡತಿಯಿಂದಾಗಿ ಇಂದು ನನಗೆ ಪ್ರಶಸ್ತಿ ಬಂದಿದೆ!’
***
ಸಂತಾನಿಗೆ ಅವಳಿ-ಜವಳಿ ಮಕ್ಕಳು ಜನಿಸಿದವು. ಸಂತೋಷದಿಂದ ಅವಕ್ಕೆ ಟಿನ್ ಅಂಡ್ ಮಾರ್ಜಿನ್ ಎಂಬ ಹೆಸರುಗಳನ್ನು ಇಟ್ಟನು.
ಎರಡನೆಯ ಬಾರಿಯೂ ಅವಳಿ ಜವಳಿ. ಅವಕ್ಕೆ ಪೀಟರ್ ಅಂಡ್ ರಿಪೀಟರ್ ಎಂದು ಹೆಸರು ಇಟ್ಟ.
ಮೂರನೆಯ ಸಲವೂ ಅವಳಿ ಜವಳಿ. ಅವಕ್ಕೆ ಮಾಕ್ಸ್ ಅಂಡ್ ಕ್ಲೈಮಾಕ್ಸ್ ಎಂಬ ಹೆಸರಿಟ್ಟು ಖುಷಿಪಟ್ಟ.
ನಿರೀಕ್ಷೆಗೂ ಮೀರಿ ನಾಲ್ಕನೆಯ ಬಾರಿಯೂ ಅವಳಿ-ಜವಳಿ ಜನಿಸಬೇಕೆ! ನಿರಾಶನಾಗದೆ ಬಹಳ ಉತ್ಸಾಹದಿಂದ ಆ ಮಕ್ಕಳಿಗೆ ಟೈರ್ಡ್ ಅಂಡ್ ರಿಟೈರ್ಡ್ ಎಂಬ ಹೆಸರಿಟ್ಟು ವಿಶ್ರಾಂತಿಗೆ ಮೊರೆಹೊಕ್ಕ!
***
ಅಕ್ಬರ್ ಮತ್ತು ಅವನ ಹೆಂಡತಿ ಅರಮನೆ ಪಡಸಾಲೆಯಲ್ಲಿ ಕುಳಿತಿದ್ದರು. ಅಕ್ಬರ್ ಮಾವಿನ ಹಣ್ಣನ್ನು ಬುಟ್ಟಿ ತುಂಬಾ ತರಿಸಿಕೊಂಡು ತಿನ್ನುತ್ತಾ ಅದರ ಗೊರಟಿ, ಸಿಪ್ಪೆಯನ್ನು ಹೆಂಡತಿಯ ಮುಂಭಾಗಕ್ಕೆ ಎಸೆದು ಬಿಡುತ್ತಿದ್ದ. ಆ ಸಮಯಕ್ಕೆ ಸರಿಯಗಿ ಅಲ್ಲಿಗೆ ಬೀರ್‌ಬಲ್ ಬಂದ. “ನೋಡು ಬೀರ್ ಬಲ್, ನನ್ನ ಹೆಂಡತಿ ಅಷ್ಟೂ ಮಾವಿನ ಹಣ್ಣುಗಳನ್ನು ಒಬ್ಬಳೇ ತಿಂದು ಸಿಪ್ಪೆಗೊರಟೆಗಳನ್ನು ಹೇಗೆ ಗುಡ್ಡೆ ಹಾಕಿದ್ದಾಳೆ.” ಎಂದು ಛೇಡಿಸಿದ.
“ಜಹಾಪನ. ರಾಣಿಯವರು ಹಣ್ಣುತಿಂದು ಸಿಪ್ಪೆಗೋರಟೆಗಳನ್ನು ಬಿಟ್ಟಿರುವುದು ಸತ್ಯ. ಅದರೆ ತಾವು ಅವುಗಳನ್ನೂ ತಿಂದು ಪೂರೈಸಿದ್ದೀರಲ್ಲಾ!” ಅಂದ.