ಮನೆ ಕಾನೂನು ಅಧಿಕಾರ ವಹಿಸಿಕೊಂಡ ನಂತರ ನ್ಯಾಯಾಧೀಶರು ವಿಕಸನಗೊಳ್ಳಬೇಕು, ಪೂರ್ವಾಗ್ರಹಗಳಿಂದ ಹೊರಬರಬೇಕು: ನ್ಯಾ. ಎಸ್‌ ಮುರಳೀಧರ್

ಅಧಿಕಾರ ವಹಿಸಿಕೊಂಡ ನಂತರ ನ್ಯಾಯಾಧೀಶರು ವಿಕಸನಗೊಳ್ಳಬೇಕು, ಪೂರ್ವಾಗ್ರಹಗಳಿಂದ ಹೊರಬರಬೇಕು: ನ್ಯಾ. ಎಸ್‌ ಮುರಳೀಧರ್

0

ನ್ಯಾಯಾಧೀಶರು ಅಧಿಕಾರ ವಹಿಸಿಕೊಂಡ ನಂತರ ವಿಕಸನಗೊಳ್ಳಬೇಕು, ತಮ್ಮ ಪೂರ್ವಾಗ್ರಹಗಳನ್ನು ತ್ಯಜಿಸಿ ಸಾಧ್ಯವಾದಷ್ಟು ನೈತಿಕ ರೀತಿಯಲ್ಲಿ ವರ್ತಿಸಬೇಕು ಎಂದು ಒರಿಸ್ಸಾ ಹೈಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ಹಾಗೂ ಹಿರಿಯ ನ್ಯಾಯವಾದಿ ಎಸ್ ಮುರಳೀಧರ್ ಶನಿವಾರ ಹೇಳಿದ್ದಾರೆ.

ಅಖಿಲ ಭಾರತ ವಕೀಲರ ಸಂಘದ ಚೆನ್ನೈ ಜಿಲ್ಲಾ ಸಮಿತಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ‘ನ್ಯಾಯಾಂಗ ಉತ್ತರದಾಯಿತ್ವ- ನ್ಯಾಯಾಂಗದ ಪಾರದರ್ಶಕತೆ ಮತ್ತು ಸಮಗ್ರತೆಯ ಖಾತರಿ’ ಎಂಬ ವಿಷಯದ ಕುರಿತು ನ್ಯಾ. ಮುರಳೀಧರ್ ಮಾತನಾಡಿದರು.

ನ್ಯಾಯಾಧೀಶರು ಹೇಗೆ ವರ್ತಿಸಬೇಕು ಎಂಬುದನ್ನು ಕಡ್ಡಾಯಗೊಳಿಸುವ ಯಾವುದೇ ಮಾರ್ಗಸೂಚಿಗಳು ಭಾರತದಲ್ಲಿ ಇಲ್ಲದಿದ್ದರೂ, ನ್ಯಾಯಾಂಗದ ಮೇಲೆ ಜನರು ಇರಿಸಿರುವ ನಂಬಿಕೆಯನ್ನು ಎತ್ತಿಹಿಡಿಯಲು ನ್ಯಾಯಾಧೀಶರು ಉತ್ತರದಾಯಿತ್ವ ಮತ್ತು ಪಾರದರ್ಶಕತೆ ಕಾಪಾಡಿಕೊಳ್ಳಬೇಕು ಎಂದು ಅವರು ಹೇಳಿದರು.

“ನ್ಯಾಯಾಧೀಶರ ಹುದ್ದೆ ವಹಿಸಿಕೊಂಡವರು ನಂತರ, ತಮ್ಮನ್ನು ತಾವು ಪರಿವರ್ತಿಸಿಕೊಳ್ಳಬೇಕು, ತಮ್ಮ ಪೂರ್ವಾಗ್ರಹಗಳನ್ನು ಬದಿಗಿಡಬೇಕು ಎಂದು ನಿರೀಕ್ಷಿಸಲಾಗುತ್ತದೆ. ರಾತ್ರೋರಾತ್ರಿ ಅಲ್ಲ, ಕ್ರಮೇಣ ಅವರು ವಿಕಸನಗೊಳ್ಳಬೇಕು. ತಮ್ಮ ಎಲ್ಲಾ ಪೂರ್ವಾಗ್ರಹಗಳಿಂದ ಹೊರಬರಬೇಕು” ಎಂದು ನ್ಯಾ. ಮುರಳೀಧರ್ ಹೇಳಿದರು.

ತನ್ನ ನ್ಯಾಯಾಧೀಶರೊಬ್ಬರು ಹಗರಣದಲ್ಲಿ ಸಿಲುಕಿಕೊಂಡಾಗ ಅಮೆರಿಕದ ಸುಪ್ರೀಂ ಕೋರ್ಟ್‌ ನ್ಯಾಯಾಧೀಶರಿಗಾಗಿ ನೀತಿ ಸಂಹಿತೆಯನ್ನು ಜಾರಿಗೆ ತಂದಿತ್ತು ಎಂದು ನೆನೆದ ಅವರು ಭಾರತದಲ್ಲಿ ʼನ್ಯಾಯಾಂಗ ನಡೆಯ ಬೆಂಗಳೂರು ತತ್ವಗಳುʼ ಎಂಬುದು ಮಾದರಿಯಾಗಿದೆ ಎಂದು ವಿವರಿಸಿದರು.

“ನಾನು ಇದನ್ನು ಏಕೆ ಉಲ್ಲೇಖಿಸಿದ್ದೇನೆ ಎಂದರೆ, ಭಾರತದಲ್ಲಿ ನಾವು ಸ್ವಾಭಾವಿಕವಾದ ಸಂವಿಧಾನವನ್ನು ಹೊಂದಿರುವುದರಿಂದ ನ್ಯಾಯಾಂಗ ಮಾನದಂಡಗಳ ಕುರಿತಂತೆ ಪಶ್ಚಿಮದತ್ತ ನೋಡುತ್ತೇವೆ. ಭಾರತದಲ್ಲಿ ನಾವು ಈ ಸಮಸ್ಯೆಗಳನ್ನು (ನ್ಯಾಯಾಧೀಶರ ನಡೆ) ಸ್ವಲ್ಪ ಸಮಯದಿಂದ ಎದುರಿಸುತ್ತಿದ್ದೇವೆ. ಸ್ವಂತ ಅನುಭವದಿಂದ ಹೇಳುವುದಾದರೆ ಯಾಧೀಶರ ನೇಮಕಾತಿಯಲ್ಲಿ ಮಾತ್ರವಲ್ಲ, ನ್ಯಾಯಾಧೀಶರು ವೈಯಕ್ತಿಕವಾಗಿ ತಮ್ಮನ್ನು ತಾವು ನಡೆಸಿಕೊಳ್ಳುವ ರೀತಿಯಲ್ಲೂ ಸಹ ಕಳೆದ 75 ವರ್ಷಗಳಲ್ಲಿ ನ್ಯಾಯಾಧೀಶರಿಂದ ಸ್ವಯಂ ನಿಯಂತ್ರಣ ನಿರೀಕ್ಷಿಸುವ ವಿಚಾರದಲ್ಲಿ ಅನೇಕ ಸಮಸ್ಯೆಗಳಿವೆ ಎಂದು ತೋರಿಸುತ್ತದೆ ” ಎಂದು ನ್ಯಾ. ಮುರಳೀಧರ್ ಹೇಳಿದರು.

“ನ್ಯಾಯಾಧೀಶರು ತಮ್ಮ ಸಿಬ್ಬಂದಿ ಹೇಗೆ ಕೆಲಸ ಮಾಡುತ್ತಾರೆ, ಅವರ ಸಂಖ್ಯೆ ಇತ್ಯಾದಿಗಳ ಬಗ್ಗೆ ಜಾಗರೂಕರಾಗಿರಬೇಕು. ಇವೆಲ್ಲವೂ ಅಭ್ಯಾಸದಿಂದ ಬರುತ್ತವೆ. ಜಾಗರೂಕತೆಯೂ ಇರಬೇಕು. ರೋಸ್ಟರ್ ನಲ್ಲಿ ಏನಾಗುತ್ತಿದೆ ಎಂದು ತಿಳಿದುಕೊಳ್ಳಬೇಕು. ವಕೀಲ ಸಮುದಾಯ ಹೇಗೆ ಕಾರ್ಯನಿರ್ವಹಿಸುತ್ತದೆ, ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ ಎಂಬುದರ ಬಗ್ಗೆ ಜಾಗೃತರಾಗಿರಬೇಕು. ಅಲ್ಲದೆ, ನ್ಯಾಯಾಧೀಶರು ತಮ್ಮ ನ್ಯಾಯಾಂಗ ಅಧಿಕಾರ ಎಣೆಯಿಲ್ಲದಂಥದ್ದು ಎಂದು ಭಾವಿಸಬಾರದು. ಆಡಳಿತಾತ್ಮಕ ದೃಷ್ಟಿಯಿಂದ, ಪಕ್ಷಪಾತ, ಸ್ವಜನಪಕ್ಷಪಾತ ಇತ್ಯಾದಿ ಘಟನೆಗಳಿರುತ್ತವೆ. ಪ್ರಬಲ ನ್ಯಾಯಾಧೀಶರು ಇದರ ವಿರುದ್ಧ ನಿಲುವು ತಳೆದು ನ್ಯಾಯಾಂಗದ ಉತ್ತರದಾಯಿತ್ವ ಮತ್ತು ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ನ್ಯಾಯಾಂಗದ ಮೇಲಿನ ನಂಬಿಕೆಯನ್ನು ಎತ್ತಿಹಿಡಿಯಬೇಕು” ಎಂದು ಹೇಳಿದರು.

ಹಿಂದಿನ ಲೇಖನಮೈಸೂರು: ಅಂಚೆ ತರಬೇತಿ ಕೇಂದ್ರದ ಮಹಿಳಾ ವಸತಿನಿಲಯ ‘ಹಂಸ’ ಕಟ್ಟಡ ಸಂಕೀರ್ಣ ಉದ್ಘಾಟಿಸಿದ ಸಂಸದ ಪ್ರತಾಪ ಸಿಂಹ
ಮುಂದಿನ ಲೇಖನ“ಕ್ರೀಂ’ ಸಿನಿಮಾ ವಿಮರ್ಶೆ