ಮನೆ ಕಾನೂನು ಲೋಕಾಯುಕ್ತರ ಪುತ್ರನಿಂದ ದಾವೆ: ಖೋಡೆ ಕುಟುಂಬ ಸದಸ್ಯರು, ಮಾಧ್ಯಮದ ವಿರುದ್ಧ ನ್ಯಾಯಾಲಯದಿಂದ ತಾತ್ಕಾಲಿಕ ಪ್ರತಿಬಂಧಕಾದೇಶ

ಲೋಕಾಯುಕ್ತರ ಪುತ್ರನಿಂದ ದಾವೆ: ಖೋಡೆ ಕುಟುಂಬ ಸದಸ್ಯರು, ಮಾಧ್ಯಮದ ವಿರುದ್ಧ ನ್ಯಾಯಾಲಯದಿಂದ ತಾತ್ಕಾಲಿಕ ಪ್ರತಿಬಂಧಕಾದೇಶ

0

ಕರ್ನಾಟಕ ಲೋಕಾಯುಕ್ತ ಬಿ ಎಸ್ ಪಾಟೀಲ್ ಅವರ ಪುತ್ರ ಮತ್ತು ವಕೀಲ ಸೂರಜ್ ಪಾಟೀಲ್ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಯಾವುದೇ ಮಾನಹಾನಿ, ದುರುದ್ದೇಶಪೂರಿತ ಹೇಳಿಕೆ, ಆಡಿಯೊ, ವಿಡಿಯೊ ಬಿಡುಗಡೆ/ಪ್ರಸಾರ ಮಾಡದಂತೆ ಮತ್ತು ಅದನ್ನು ಪ್ರಕಟಿಸದಂತೆ ಖೋಡೆ ಕುಟುಂಬ ಸದಸ್ಯರು ಮತ್ತು ಮಾಧ್ಯಮಗಳ ವಿರುದ್ಧ ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯವು ಈಚೆಗೆ ತಾತ್ಕಾಲಿಕ ಪ್ರತಿಬಂಧಕಾದೇಶ ಮಾಡಿದೆ. ಅಲ್ಲದೇ, ಪ್ರತಿವಾದಿಗಳಿಗೆ ಸಮನ್ಸ್ ಜಾರಿ ಮಾಡಿದೆ.

ಖೋಡೆ ಕುಟುಂಬದ ಚಂದ್ರಪ್ರಭಾ, ಸತ್ಯಪ್ರಭಾ, ಸಾವಿತ್ರಿ, ಸ್ವಾಮಿಪ್ರಭಾ, ಎಂ ಎಂ ಅನಂತಮೂರ್ತಿ, ಕೃಷ್ಣ ಕಬಾಡಿ, ಆನಂದ್ ಮುದ್ದಪ್ಪ ಹಾಗೂ 28 ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳ ವಿರುದ್ಧ ಶಾಶ್ವತ ಪ್ರತಿಬಂಧಕಾದೇಶ ಮಾಡುವಂತೆ ಕೋರಿ ಸೂರಜ್ ಪಾಟೀಲ್ ಅವರು ಸಲ್ಲಿಸಿರುವ ಅಸಲು ದಾವೆಯ ವಿಚಾರಣೆ ನಡೆಸಿದ 59ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯಕ್ ಅವರ ನೇತೃತ್ವದ ಪೀಠವು ಆದೇಶ ಮಾಡಿದೆ.

ಅರ್ಜಿದಾರ ಸೂರಜ್ ಪಾಟೀಲ್ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ 1ರಿಂದ 30ನೇ ಪ್ರತಿವಾದಿಗಳು ಮತ್ತು ಅವರಿಗೆ ಸಂಬಂಧಿಸಿದ ಯಾರೂ ಮಾನಹಾನಿ, ದುರುದ್ದೇಶಪೂರಿತ ಹೇಳಿಕೆ, ಆಡಿಯೊ, ವಿಡಿಯೊ ಕ್ಲಿಪ್ ಅನ್ನು ಮುಂದಿನ ವಿಚಾರಣೆಯ ದಿನಾಂಕದವರೆಗೆ ಪ್ರಸಾರ ಮಾಡದಂತೆ ಅವರ ವಿರುದ್ಧ ಮಧ್ಯಂತರ ಪ್ರತಿಬಂಧಕಾದೇಶ ಮಾಡಲಾಗಿದೆ. ಫಿರ್ಯಾದಿ ನೀಡುವ ಲಿಂಕ್ಗಳನ್ನು ಫೇಸ್ಬುಕ್ ಇಂಡಿಯಾ, ಯೂಟ್ಯೂಬ್, ವಾಟ್ಸಾಪ್-ಫೇಸ್ಬುಕ್ ಇಂಡಿಯಾ ತೆಗೆಯಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ. ವಿಚಾರಣೆಯನ್ನು ಮಾರ್ಚ್ 9ಕ್ಕೆ ಮುಂದೂಡಲಾಗಿದೆ.

ಯಾರೆಲ್ಲಾ ಪ್ರತಿವಾದಿಗಳು

ಖೋಡೆ ಕುಟುಂಬದ ಚಂದ್ರಪ್ರಭಾ, ಸತ್ಯಪ್ರಭಾ, ಸಾವಿತ್ರಿ, ಸ್ವಾಮಿಪ್ರಭಾ, ಎಂ ಎಂ ಅನಂತಮೂರ್ತಿ, ಕೃಷ್ಣ ಕಬಾಡಿ ಮತ್ತು ಆನಂದ್ ಮುದ್ದಪ್ಪ ಅವರನ್ನು ಕ್ರಮವಾಗಿ ಒಂದರಿಂದ 7ನೇ ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. ಪವರ್ ಟಿವಿ, ಬಿಟಿವಿ ನ್ಯೂಸ್, ಉದಯ ಟಿವಿ, ಸಮಯ 24/7, ಹಿಂದೂಸ್ತಾನ್ ಟೈಮ್ಸ್, ಉದಯವಾಣಿ, ಸಂಯುಕ್ತ ಕರ್ನಾಟಕ, ಬೆಂಗಳೂರು ಮಿರರ್, ವಿಜಯ ಕರ್ನಾಟಕ, ನ್ಯೂಸ್ 9, ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್, ಟೈಮ್ಸ್ ಆಫ್ ಇಂಡಿಯಾ, ದಿ ಹಿಂದೂ, ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್, ಕಸ್ತೂರಿ ನ್ಯೂಸ್ 24/7, ಟಿವಿ9 ಕನ್ನಡ, ಜನಶ್ರೀ ನ್ಯೂಸ್, ಪಬ್ಲಿಕ್ ಟಿವಿ, ಈ ಟಿವಿ ಕನ್ನಡ, ರಾಜ್ ಟಿವಿ, ವಿಜಯವಾಣಿ, ಏಷ್ಯಾನೆಟ್ ನ್ಯೂಸ್ ನೆಟ್ವರ್ಕ್ ಪ್ರೈ. ಲಿ. ಹಾಗೂ ಸಾಮಾಜಿಕ ಮಾಧ್ಯಮಗಳಾದ ಫೇಸ್ಬುಕ್ ಇಂಡಿಯಾ, ಯೂಟ್ಯೂಬ್, ವಾಟ್ಸಾಪ್-ಫೇಸ್ಬುಕ್ ಇಂಡಿಯಾಗಳನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.

ಅರ್ಜಿದಾರರ ಕೋರಿಕೆ ಏನು?

2019ರಲ್ಲಿ 1ರಿಂದ 7ನೇ ಪ್ರತಿವಾದಿಗಳು ಸೂರಜ್ ಪಾಟೀಲ್ ಅವರನ್ನು ಸಂಪರ್ಕಿಸಿದ್ದು, 2020ರ ಫೆಬ್ರವರಿಯಲ್ಲಿ ಸೂರಜ್ ಅವರನ್ನು ಭಾವನಾತ್ಮಕವಾಗಿ ಪ್ರಭಾವಿಸುವ ಮೂಲಕ ಖೋಡೆ ಸಮೂಹದ ಆಸ್ತಿಯಲ್ಲಿ ಪಾಲು ಪಡೆಯಲು ಪ್ರಥಮ ಮೇಲ್ಮನವಿ (ಎಂಎಫ್ಎ) ಸಲ್ಲಿಸಲು ಒತ್ತಾಯಿಸಿದ್ದರು. ಈ ನಡುವೆ, 5, 6 ಮತ್ತು 7ನೇ ಪ್ರತಿವಾದಿಗಳು ತನ್ನನ್ನು ಹಲವು ಹೋಟೆಲ್ ಕೊಠಡಿಗಳಿಗೆ ಆಹ್ವಾನಿಸಿ, ಅಮಲೇರುವಂತೆ (ಇನ್’ಟಾಕ್ಸಿಕೇಟ್) ಮಾಡಿ, ತನಗೆ ಬೆದರಿಕೆ ಹಾಕಿ, ಅವರು ಉಲ್ಲೇಖಿಸುತ್ತಿರುವ ವಿಚಾರಗಳನ್ನು ದಾಖಲಿಸಿಕೊಂಡಿದ್ದಾರೆ. ತಮ್ಮ ಚಿತ್ರಗಳನ್ನು ತೆಗೆದು, ಅವುಗಳನ್ನು ಎಡಿಟ್ ಮಾಡಿ, ತಿರುಚಿದ್ದು, ಆಡಿಯೊ ಕ್ಲಿಪ್ಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಎಡಿಟ್ ಮಾಡಿದ್ದಾರೆ. 2022ರ ಡಿಸೆಂಬರ್ ಕೊನೆಯ ವಾರದಲ್ಲಿ 6 ಮತ್ತು 7ನೇ ಪ್ರತಿವಾದಿಗಳು ಲೈಂಗಿಕ ಸಂಬಂಧಿತ ವಿಚಾರಗಳನ್ನು ತನ್ನ ಪತ್ನಿ ಮತ್ತು ಸ್ನೇಹಿತರ ಜೊತೆ ಹಂಚಿಕೊಂಡಿದ್ದಾರೆ. 2023ರ ಫೆಬ್ರವರಿ ಮೊದಲ ವಾರದಲ್ಲಿ ಐದನೇ ಪ್ರತಿವಾದಿಯು ವಾಟ್ಸಾಪ್ ಮತ್ತು ಸಾಮಾಜಿಕ ಜಾಲತಾಣದ ಹಲವರಿಗೆ ತಮ್ಮ ತಿರುಚಿದ ಆಡಿಯೊ ಕ್ಲಿಪ್ಗಳನ್ನು ಹಂಚಿಕೊಂಡಿದ್ದಾರೆ. ಹೀಗಾಗಿ, ಪ್ರತಿವಾದಿಗಳ ವಿರುದ್ಧ ಶಾಶ್ವತ ಪ್ರತಿಬಂಧಕಾದೇಶ ಮಾಡಬೇಕು ಎಂದು ಕೋರಲಾಗಿದೆ.

ಲೋಕಾಯುಕ್ತರಾದ ನಿವೃತ್ತ ನ್ಯಾಯಮೂರ್ತಿ ಬಿ ಎಸ್ ಪಾಟೀಲ್ ಅವರ ಸ್ಥಾನ ದುರ್ಬಳಕೆ ಮಾಡಿಕೊಂಡು ಅವರ ಪತ್ನಿ ವಕೀಲೆ ಶೋಭಾ ಪಾಟೀಲ್, ಪುತ್ರ ಸೂರಜ್ ಮತ್ತು ಪುತ್ರಿ ಮೋನಿಕಾ ಪಾಟೀಲ್ ಅವರು ಬಿಲ್ಡರ್ಗಳು, ಖಾಸಗಿ ಉದ್ಯಮಗಳ ಜೊತೆ ಅಪವಿತ್ರ ಮೈತ್ರಿ ಸಾಧಿಸಿ, ಅಕ್ರಮ ಹಣ ಗಳಿಕೆಯಲ್ಲಿ ತೊಡಗಿದ್ದಾರೆ. ನ್ಯಾಯಾಂಗ ಪ್ರಕ್ರಿಯೆಯನ್ನು ವ್ಯಾಪಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಗುರುತರ ಆರೋಪ ಮಾಡಿ ಖೋಡೆ ಕುಟುಂಬ ಸದಸ್ಯರು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ, ರಾಜ್ಯ ವಕೀಲರ ಪರಿಷತ್’ಗೆ ದೂರು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಹಿಂದಿನ ಲೇಖನದಂಪತಿಗಳ ನಡುವಿನ ನಿದ್ರೆಯ ವಿಚ್ಛೇದನ ಎಂದರೇನು ಗೊತ್ತಾ?
ಮುಂದಿನ ಲೇಖನವ್ಯಕ್ತಿಗೆ ಹೃದಯಾಘಾತ ಕಂಡು ಬರಲು ಮುಖ್ಯ ಕಾರಣ