ಮನೆ ಪೌರಾಣಿಕ ಸಾರಂಗಗಳು

ಸಾರಂಗಗಳು

0

ಸಾರಂಗಗಳ ಈ ಕಥೆಯು ವ್ಯಾಸ ಮಹಾಭಾರತದ ಆದಿ ಪರ್ವದ ಖಾಂಡವದಾಹ ಪರ್ವ (ಅಧ್ಯಾಯ ೨೨೦-೨೨೫) ದಲ್ಲಿ ಬರುತ್ತದೆ. ಖಾಂಡವ ದಹನದಲ್ಲಿ ಸುಟ್ಟುಹೋಗದೇ ಉಳಿದ ನಾಲ್ಕು ಸಾರಂಗಗಳ ಕುರಿತು ಜನಮೇಜಯನು ಕೇಳಿದಾಗ ಈ ಕಥೆಯನ್ನು ಮುನಿ ವೈಶಂಪಾಯನನು ಹೇಳಿದನು.

ಮಂದಪಾಲನೆಂದು ಪ್ರಸಿದ್ಧ ಧರ್ಮಜ್ಞರಲ್ಲಿ ಮುಖ್ಯತಮ ಸಂಶಿತವ್ರತ ತಪಸ್ವಿ ಮಹರ್ಷಿಯಿದ್ದನು. ಊರ್ಧ್ವರೇತಸ ಋಷಿಗಳ ಮಾರ್ಗವನ್ನು ಹಿಡಿದಿದ್ದ ಆ ವಿಜಿತೇಂದ್ರಿಯ ತಪಸ್ವಿಯು ಧರ್ಮರತನಾಗಿ ಸ್ವಾಧ್ಯಾಯದಲ್ಲಿ ನಿರತನಾಗಿದ್ದನು. ತಪಸ್ಸಿನ ಪರಾಕಾಷ್ಟೆಯನ್ನು ತಲುಪಿದ ಅವನು ದೇಹವನ್ನು ತೊರೆದು ಪಿತೃಲೋಕವನ್ನು ಸೇರಿದನು. ಆದರೆ ಅಲ್ಲಿ ಅವನಿಗೆ ಫಲವು ದೊರೆಯಲಿಲ್ಲ. ಗಳಿಸಿದ್ದರೂ ತನ್ನ ತಪಸ್ಸಿನಿಂದ ಫಲವು ದೊರೆಯದೇ ಇದ್ದ ಲೋಕಗಳನ್ನು ಕಂಡ ಅವನು ಧರ್ಮರಾಜನ ಸಮೀಪದಲ್ಲಿ ಕುಳಿತಿದ್ದ ದಿವೌಕಸರಿಗೆ ಕೇಳಿದನು: “ನಾನು ತಪಸ್ಸಿನಿಂದ ಗಳಿಸಿದ ಈ ಲೋಕಗಳು ನನಗೆ ಏಕೆ ಮುಚ್ಚಿಹೋಗಿವೆ? ನಾನು ಏನನ್ನು ಮಾಡಿಲ್ಲವೆಂದು ಇದು ನನ್ನ ಕರ್ಮ ಫಲವಾಗಿದೆ? ಯಾವುದರಿಂದಾಗಿ ನನ್ನ ತಪಸ್ಸಿನ ಫಲವು ದೊರೆಯದೇ ಇದೆಯೋ ಅದನ್ನು ಮಾಡುತ್ತೇನೆ. ಹೇಳಿರಿ.”

ದೇವತೆಗಳು ಹೇಳಿದರು: “ಬ್ರಹ್ಮನ್! ಮಾನವರು ಯಾವುದಕ್ಕೆ ಋಣಿಗಳಾಗಿ ಹುಟ್ಟುತ್ತಾರೆ ಎನ್ನುವುದನ್ನು ಕೇಳು: ಕ್ರಿಯೆ, ಬ್ರಹ್ಮಚರ್ಯ ಮತ್ತು ಸಂತಾನ. ಇದರಲ್ಲಿ ಸಂಶಯವಿಲ್ಲ. ಇವೆಲ್ಲವುಗಳನ್ನೂ ಯಜ್ಞ, ತಪಸ್ಸು ಮತ್ತು ಸುತರಿಂದ ತೀರಿಸಬಹುದು. ನೀನು ತಪಸ್ವಿ ಮತ್ತು ಯಜ್ಞಕರ್ತೃವಾಗಿದ್ದೀಯೆ. ಆದರೆ ನಿನಗೆ ಮಕ್ಕಳಿಲ್ಲ. ಪು ಎಂಬ ಹೆಸರಿನ ನರಕದಿಂದ ಪಿತೃಗಳನ್ನು ಪಾರುಮಾಡುವನನ್ನು ಪುತ್ರ ಎಂದು ಕರೆಯುತ್ತಾರೆ. ಆದುದರಿಂದ ಕುಲವನ್ನು ಮುಂದುವರೆಸಿಕೊಂಡು ಹೋಗುವ ಸಂತಾನಕ್ಕೆ ಪ್ರಯತ್ನಿಸು.”

ದಿವೌಕಸರ ಆ ಮಾತುಗಳನ್ನು ಕೇಳಿದ ಮಂದಪಾಲನು ತಾನು ಎಲ್ಲಿ ಶೀಘ್ರವಾಗಿ ಬಹಳ ಮಕ್ಕಳನ್ನು ಪಡೆಯಬಹುದು ಎಂದು ಯೋಚಿಸಿದನು. ಹೀಗೆ ಯೋಚಿಸುತ್ತಿರುವಾಗ ಪಕ್ಷಿಗಳಿಗೆ ಬಹಳ ಮಕ್ಕಳು ಆಗುತ್ತವೆ ಎಂಬ ಯೋಚನೆಯು ಅವನಿಗೆ ಬಂದಿತು. ಅವನು ಶಾಂಗೃಕನಾಗಿ ಜರಿತಾ ಎನ್ನುವ ಶಾಂಗೃಕೆಯೊಡನೆ ಸೇರಿದನು. ಅವಳಲ್ಲಿ ಅವನು ಬ್ರಹ್ಮವಾದಿಗಳಾದ ನಾಲ್ಕು ಪುತ್ರರನ್ನು ಪಡೆದನು. ಇನ್ನೂ ಅಂಡದಲ್ಲಿಯೇ ಇದ್ದ ತನ್ನ ಬಾಲ ಸುತರನ್ನು ತಾಯಿಯೊಡನೆ ವನದಲ್ಲಿಯೇ ಬಿಟ್ಟು ಆ ಮುನಿಯು ಲಪಿತಳ ಕಡೆ ಹೊರಟುಹೋದನು. ಆ ಮಹಾಭಾಗನು ಲಪಿತೆಯ ಕಡೆ ಹೊರಟುಹೋದ ನಂತರ ಜರಿತೆಯು ಮಕ್ಕಳ ಮೇಲಿನ ಪ್ರೀತಿಯಿಂದಾಗಿ ಬಹಳ ಚಿಂತಿಸಿದಳು. ಇನ್ನೂ ಹುಟ್ಟದೇ ಅಂಡದಲ್ಲಿಯೇ ಇದ್ದ ಆ ಪುತ್ರ ಋಷಿಗಳನ್ನು ಖಾಂಡವವನದಲ್ಲಿ ಆರ್ತ ಜರಿತೆಯು ಬಿಟ್ಟು ಹೋಗಲಾರದೇ ಸ್ನೇಹವಿಹ್ವಲಳಾಗಿ ಹುಟ್ಟಿದ ಅವರನ್ನು ಪಾಲಿಸಿದಳು.

ನಂತರ ಅಗ್ನಿಯು ಖಾಂಡವವನ್ನು ಸುಡಲು ಬರುತ್ತಿರುವುದನ್ನು ನೋಡಿದ ಋಷಿ ಮಂದಪಾಲನು ಲಪಿತಳೊಡನೆ ಆ ವನಕ್ಕೆ ಧಾವಿಸಿದನು. ಅವನ ಸಂಕಲ್ಪವನ್ನು ತಿಳಿದು ಮತ್ತು ಪುತ್ರರು ಬಾಲಕರೆಂದು ತಿಳಿದು ಆ ವಿಪ್ರರ್ಷಿ ಬ್ರಾಹ್ಮಣನು ತನ್ನ ಪುತ್ರರ ರಕ್ಷಣೆಗೆ ಭೀತನಾಗಿ ಮಹೌಜಸ ಲೋಕಪಾಲ ಜಾತವೇದಸನನ್ನು ಸ್ತುತಿಸ ತೊಡಗಿದನು: “ಅಗ್ನಿ! ನೀನು ಸರ್ವದೇವತೆಗಳ ಬಾಯಿ! ನೀನು ಹವ್ಯವನ್ನು ಸಾಗಿಸುವವನು! ನೀನು ಸರ್ವಭೂತಗಳ ಅಂತರಾಳದಲ್ಲಿ ಗೂಢವಾಗಿದ್ದೀ! ಕವ್ಯರು ನಿನ್ನನ್ನು ಒಂದೇ ಎಂದು ಕರೆಯುತ್ತಾರೆ ಆದರೆ ಪುನಃ ತ್ರಿವಿಧವೆಂದೂ ಕರೆಯುತ್ತಾರೆ. ನಿನ್ನನ್ನು ಅಷ್ಟಧಾ ಎಂದು ಕಲ್ಪಿಸಿ ಯಜ್ಞವಾಹನನೆಂದೂ ಕಲ್ಪಿಸುತ್ತಾರೆ. ನೀನು ಈ ವಿಶ್ವವನ್ನು ಸೃಷ್ಟಿಸಿದವನು ಎಂದು ಪರಮಋಷಿಗಳು ಹೇಳುತ್ತಾರೆ. ಹುತಾಶನ! ನೀನಿಲ್ಲದೇ ಈ ಜಗತ್ತು ಕ್ಷಣಮಾತ್ರದಲ್ಲಿ ಅದೃಶ್ಯವಾಗಿಬಿಡುತ್ತದೆ! ವಿಪ್ರರು ಪತ್ನಿ ಮತ್ತು ಸುತರ ಸಹಿತ ನಿನ್ನನ್ನು ನಮಸ್ಕರಿಸಿಯೇ ಸ್ವಕರ್ಮಗಳನ್ನು ಮಾಡಲು ಶಾಶ್ವತ ಜಯದ ದಾರಿಯಲ್ಲಿ ನಡೆಯುತ್ತಾರೆ. ನೀನು ತಮ್ಮ ಮಿಂಚುಗಳಿಂದ ಪೂರ್ವದಿಕ್ಕಿನ ಆಕಾಶವನ್ನು ಮುಟ್ಟುವ ಮೋಡಗಳೆಂದು ಹೇಳುತ್ತಾರೆ. ನಿನ್ನ ಮುಖದಿಂದ ಹೊರಬರುವ ಜ್ವಾಲೆಯು ಸರ್ವಭೂತಗಳನ್ನು ಸುಡುತ್ತದೆ. ಮಹಾದ್ಯುತೇ! ಜಾತವೇದ! ಈ ವಿಶ್ವವು ನಿನ್ನದೇ ಸೃಷ್ಟಿ! ಸರ್ವ ಕರ್ಮಗಳೂ ಚರಾಚರ ಭೂತಗಳೂ ನಿನ್ನಿಂದಲೇ ವಿಹಿತವಾಗಿವೆ. ಹಿಂದೆ ನೀರು ನಿನ್ನಿಂದಲೇ ವಿಹಿತವಾಗಿತ್ತು. ಈ ಸರ್ವ ಜಗತ್ತೂ ನಿನ್ನಿಂದಲೇ ವಿಹಿತವಾಗಿದೆ. ಹವ್ಯ ಕವ್ಯಗಳೆಲ್ಲವೂ ಯಥಾವತ್ತಾಗಿ ನಿನ್ನನ್ನೇ ಆಧರಿಸಿವೆ. ಅಗ್ನಿ! ನೀನೇ ಜ್ವಲನ! ನೀನೇ ಧಾತಾ ಮತ್ತು ಬೃಹಸ್ಪತಿ! ನೀನೆ ಅಶ್ವಿನೀ ದೇವತೆಗಳು! ಯಮ, ಮಿತ್ರ, ಸೋಮ ಮತ್ತು ಅನಿಲನೂ ನೀನೇ!”

ಮಂದಪಾಲನ ಈ ಸ್ತುತಿಯಿಂದ ಪಾವಕನು ಆ ಅಮಿತತೇಜಸ ಮುನಿಯಲ್ಲಿ ಸಂತುಷ್ಟನಾದನು. ಪ್ರೀತಾತ್ಮನಾಗಿ ಅವನಲ್ಲಿ “ನಿನಗಿಷ್ಟವಾದ ಏನನ್ನು ಮಾಡಲಿ?” ಎಂದು ಕೇಳಿದನು. ಮಂದಪಾಲನು ಅಂಜಲೀಬದ್ಧನಾಗಿ ಹವ್ಯವಾಹನನಿಗೆ ಹೇಳಿದನು: “ಖಾಂಡವವನವನ್ನು ದಹಿಸುವಾಗ ನನ್ನ ಪುತ್ರರನ್ನು ಬಿಟ್ಟುಬಿಡು!” ಭಗವಾನ್ ಹವ್ಯವಾಹನನು ಹಾಗೆಯೇ ಆಗಲೆಂದು ಉತ್ತರಿಸಿ, ಅದೇ ಸಮಯದಲ್ಲಿ ಖಾಂಡವವನವನ್ನು ಸುಡುವ ಇಚ್ಛೆಯಿಂದ ತನ್ನ ಜ್ವಾಲೆಗಳನ್ನು ಪಸರಿಸಿದನು.

ಅಗ್ನಿಯು ಪ್ರಜ್ವಲಿಸುತ್ತಿರುವಾಗ ಸುದುಃಖಿತ ಶಾಂಗೃಕಗಳು ವ್ಯಥಿತ-ಪರಮೋದ್ವಿಗ್ನರಾಗಿ ವಿಮೋಚನೆಯ ದಾರಿಯನ್ನೇ ಕಾಣದಾದರು. ಬಾಲ ಪುತ್ರರನ್ನು ನೋಡಿ ಅವರ ಮಾತೆ ತಪಸ್ವಿನೀ ಜರಿತೆಯು ದುಃಖಸಂತಪ್ತಳಾಗಿ ವಿಲಪಿಸಿದಳು: “ಈ ಭೀಷಣ ಅಗ್ನಿಯು ಹುಲ್ಲುಗಳನ್ನು ಸುಡುತ್ತಾ, ಜಗತ್ತನೇ ಉರಿಸುತ್ತಾ ಭಯಂಕರನಾಗಿ ಇಲ್ಲಿಗೇ ಬರುತ್ತಿದ್ದಾನೆ ಮತ್ತು ನನ್ನ ದುಃಖವನ್ನು ಹೆಚ್ಚಿಸುತ್ತಿದ್ದಾನೆ. ಕೈಕಾಲುಗಳಿಲ್ಲದ ಆದರೂ ನಮ್ಮ ಪೂರ್ವಜರ ಪರಾಯಣರಾದ ಈ ಮಂದಚೇತಸ ಶಿಶುಗಳು ನನ್ನನ್ನು ಎಳೆಯುತ್ತಿವೆ. ಇಗೋ! ಮರಗಳನ್ನು ನೆಕ್ಕುತ್ತಾ ಈ ಭೀಷಣ ಅಗ್ನಿಯು ಬರುತ್ತಿದೆ! ಅಶಕ್ತರಾದ ನನ್ನ ಈ ಮಕ್ಕಳು ತಪ್ಪಿಸಿಕೊಳ್ಳಲು ಶಕ್ತರಿಲ್ಲ. ನಾನೇ ಈ ಮಕ್ಕಳನ್ನು ಎತ್ತಿಕೊಂಡು ಹೋಗೋಣವೆಂದರೆ ನನಗೂ ದಾರಿಯಿಲ್ಲ! ನಾನು ಇವರನ್ನು ಇಲ್ಲಿಯೇ ಬಿಟ್ಟುಹೋಗಲೂ ಸಾಧ್ಯವಿಲ್ಲ. ನನ್ನ ಹೃದಯವು ಎರಡಾಗಿದೆ. ನನ್ನ ಮಕ್ಕಳಲ್ಲಿ ಯಾರನ್ನು ಬಿಟ್ಟು ಹೋಗಲಿ ಯಾರನ್ನು ಕರೆದುಕೊಂಡು ಹೋಗಲಿ? ನಾನು ಏನುತಾನೆ ಮಾಡಬಲ್ಲೆ? ಪುತ್ರರೇ! ನಿಮ್ಮ ಅಭಿಪ್ರಾಯಗಳೇನು? ನಿಮ್ಮ ವಿಮೋಚನೆಗೆ ಎಷ್ಟು ಚಿಂತಿಸಿದರೂ ನನಗೆ ದಾರಿಯೇ ತೋಚುತ್ತಿಲ್ಲ. ನನ್ನ ದೇಹದಿಂದ ನಿಮ್ಮನ್ನು ಮುಚ್ಚಿ ನಿಮ್ಮೊಂದಿಗೆ ನಾನೂ ಸಾಯುತ್ತೇನೆ. ಜ್ಯೇಷ್ಠ ಜರಿತಾರಿಯ ಮೇಲೆ ಈ ಕುಲವು ನಿಂತಿದೆ. ಸಾರಿಸೃಕ್ವನು ಪುತ್ರರನ್ನು ಪಡೆದು ಪಿತೃಗಳ ಕುಲವನ್ನು ವರ್ಧಿಸುತ್ತಾನೆ. ಸ್ತಂಬಮಿತ್ರನು ತಪಸ್ವಿಯಾಗುತ್ತಾನೆ ಮತ್ತು ದ್ರೋಣನು ಉತ್ತಮ ಬ್ರಹ್ಮವಿದ್ವಾಂಸನಾಗುತ್ತಾನೆ. ಇದೇ ಮಾತುಗಳನ್ನು ಹೇಳಿ ನಿಮ್ಮ ಆ ಕಠೋರ ತಂದೆಯು ಹಿಂದೆ ಹೊರಟುಹೋದನು. ಯಾರನ್ನು ತೆಗೆದುಕೊಂಡು ಓಡಿ ಹೋಗಲಿ? ಯಾರ ಮೇಲೆ ಈ ಅತಿ ದೊಡ್ಡ ಆಪತ್ತು ಬರುತ್ತದೆ?”

ಈ ರೀತಿ ಯಾವುದನ್ನು ಮಾಡುವುದು ಒಳ್ಳೆಯದು ಎಂದು ವಿಹ್ವಲಳಾಗಿ ಅನಲನಿಂದ ತನ್ನ ಸುತರು ಹೇಗೆ ಬಿಡಿಸಿಕೊಳ್ಳಬಹುದು ಎನ್ನುವುದನ್ನು ಕಾಣಲಾರದೇ ಹೋದಳು. ಈ ರೀತಿ ಅವಳು ಹೇಳುತ್ತಿರಲು ಆ ಶಾಂಙೃ ಪಕ್ಷಿಗಳು ತಾಯಿಗೆ ಉತ್ತರಿಸಿದವು: “ಮಾತಾ! ನೀನು ಸ್ನೇಹಭಾವವನ್ನು ತೊರೆದು ಹವ್ಯವಾಹನನು ಇಲ್ಲದೇ ಇರುವ ಸ್ಥಳಕ್ಕೆ ಹೋಗು. ನಾವು ವಿನಷ್ಟರಾದರೂ ನಿನಗೆ ಇನ್ನೂ ಮಕ್ಕಳಾಗುತ್ತವೆ. ಆದರೆ ಮಾತೆಯಾದ ನೀನೇ ವಿನಷ್ಟಳಾದರೆ ಕುಲಸಂತತಿಯು ಇಲ್ಲದಂತಾಗುತ್ತದೆ. ಈ ಎರಡು ಪರಿಣಾಮಗಳ ಕುರಿತು ಯೋಚಿಸಿ ಕುಲದ ಒಳಿತಿಗೆ ಏನನ್ನು ಮಾಡುವುದು ಸರಿಯೆನಿಸುತ್ತದೆಯೋ ಅದನ್ನು ಮಾಡು. ಇದಕ್ಕೆ ಸರಿಯಾದ ಕಾಲವು ಬಂದಿದೆ. ನಿನ್ನ ಸುತರ ಮೇಲಿನ ಸ್ನೇಹದಿಂದ ನಿನ್ನ ಕುಲವಿನಾಶದ ಕಡೆ ಎಳೆದೊಯ್ಯಲ್ಪಡಬೇಡ. ಲೋಕಕಾಮಕ್ಕಾಗಿ ಮಾಡಿದ ಈ ಕಾರ್ಯವು ಎಂದೂ ನಿಷ್ಫಲವಾಗುವುದಿಲ್ಲ.”

ಜರಿತಳು ಹೇಳಿದಳು: “ಈ ವೃಕ್ಷದ ಸಮೀಪದಲ್ಲಿ ಭೂಮಿಯೊಳಗೆ ಒಂದು ಇಲಿಯ ಬಿಲವಿದೆ. ತಕ್ಷಣವೇ ಅದನ್ನು ಪ್ರವೇಶಿಸಿ. ಅಲ್ಲಿ ನಿಮಗೆ ಅಗ್ನಿಯ ಭಯವಿರುವುದಿಲ್ಲ. ಮಕ್ಕಳೇ! ಆಗ ನಾನು ಮಣ್ಣಿನಿಂದ ಬಿಲದ ಬಾಯಿಯನ್ನು ಮುಚ್ಚುತ್ತೇನೆ. ಹೀಗೆ ಜ್ವಲಿಸುತ್ತಿರುವ ಕೃಷ್ಣವರ್ತ್ಮನನಿಂದ ತಪ್ಪಿಸಿಕೊಳ್ಳಬಹುದು. ಅಗ್ನಿಯು ಆರಿಹೋದ ನಂತರ ಮಣ್ಣಿನ ರಾಶಿಯನ್ನು ತೆಗೆಯಲು ನಾನು ಹಿಂದಿರುಗಿ ಬರುತ್ತೇನೆ. ಹುತಾಶನನಿಂದ ತಪ್ಪಿಸಿಕೊಳ್ಳಲು ಈ ಉಪಾಯವನ್ನು ನೀವು ಒಪ್ಪಿಕೊಳ್ಳುತ್ತೀರಾ?”

ಶಾಂಙೃಕಗಳು ಹೇಳಿದವು: “ರೆಕ್ಕೆಗಳೇ ಇಲ್ಲದ ಮಾಂಸದ ಮುದ್ದೆಗಳು ನಾವು. ಮಾಂಸಾಹಾರಿ ಇಲಿಯು ನಮ್ಮನು ವಿನಾಶಗೊಳಿಸುತ್ತದೆ. ಈ ಭಯವನ್ನು ಕಂಡರೆ ಅಲ್ಲಿ ನಾವು ಉಳಿಯಲು ಸಾಧ್ಯವಿಲ್ಲ. ಅಗ್ನಿಯು ನಮ್ಮನ್ನು ಹೇಗೆ ಸುಡದೇ ಇರುತ್ತಾನೆ ಅಥವಾ ಹೇಗೆ ಇಲಿಯು ನಮ್ಮನ್ನು ಭಕ್ಷಿಸದೇ ಇರುತ್ತದೆ? ತಂದೆಗೆ ಸೋಲಲ್ಲದೇ ಇನ್ನೇನಾದರೂ ಆಗುವುದು ಹೇಗೆ? ತಾಯಿಯು ಉಳಿಯುವುದಾದರೂ ಹೇಗೆ? ಪಕ್ಷಿಗಳು ಬೆಂಕಿಯಲ್ಲಿ ಅಥವಾ ಬಿಲದಲ್ಲಿ ಇಲಿಯಿಂದ ಸಾವನ್ನು ಕಾಣುತ್ತವೆ. ಇವೆರಡನ್ನೂ ನೋಡಿದರೆ ಸುಟ್ಟುಹೋಗುವುದು ತಿನ್ನಲ್ಪಡುವುದಕ್ಕಿಂತ ಒಳ್ಳೆಯದು. ಬಿಲದಲ್ಲಿ ಇಲಿಯಿಂದ ತಿನ್ನಲ್ಪಟ್ಟು ಸತ್ತರೆ ಅದು ಹೀನ ಮರಣವಾಗುತ್ತದೆ. ಆದರೆ ಹುತಾಶನನಲ್ಲಿ ಶರೀರ ಪರಿತ್ಯಾಗವನ್ನು ಶಿಷ್ಟರು ಒಳ್ಳೆಯದೆಂದು ಹೇಳುತ್ತಾರೆ.”

ಜರಿತಳು ಹೇಳಿದಳು: “ಇಲಿಯು ಈ ಬಿಲದಿಂದ ಹೊರಬಂದಿತು ಮತ್ತು ಒಂದು ಗಿಡುಗವು ತನ್ನ ಪಂಜಗಳಿಂದ ಅದನ್ನು ಎತ್ತಿಕೊಂಡು ಹಾರಿಹೋಯಿತು. ನೀವು ಇನ್ನು ಭಯಪಡಬೇಕಾದುದು ಏನೂ ಇಲ್ಲ.”

ಶಾಂಙೃಕಗಳು ಹೇಳಿದವು: “ಗಿಡುಗವು ಇಲಿಯನ್ನು ಎತ್ತಿಕೊಂಡು ಹೋಯಿತು ಎನ್ನುವುದು ನಮಗೆ ತಿಳಿಯಲೇ ಇಲ್ಲ. ಈ ಬಿಲದಲ್ಲಿ ಇನ್ನೂ ಇತರ ಇಲಿಗಳು ಇರಬಹುದು. ನಮಗೆ ಅವುಗಳ ಭಯವಾಗುತ್ತದೆ. ಗಾಳಿಯು ಹಿಂದಿರುಗಿದ ಹಾಗೆ ಕಾಣುತ್ತದೆ. ಅಗ್ನಿಯು ಇಲ್ಲಿಗೆ ಬರುತ್ತಿದ್ದಾನೆ ಎನ್ನುವುದರಲ್ಲಿ ಸಂಶಯವಿಲ್ಲ. ಮಾತಾ! ಬಿಲದಲ್ಲಿ ವಾಸಿಸುವವರಿಂದ ನಮಗೆ ಮೃತ್ಯು ಆಗುತ್ತದೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಸಂಶಯವಿದ್ದವರನ್ನು ಸಾವು ಗೆಲ್ಲುತ್ತದೆ ಎನ್ನುವುದು ನಿಃಸಂಶಯ. ಈಗ ನೀನು ಆಕಾಶಕ್ಕೆ ಹಾರು. ನಮಗಿಂತಲೂ ಸುಂದರ ಪುತ್ರರನ್ನು ಪಡೆಯುವೆ.”

ಜರಿತಳು ಹೇಳಿದಳು: “ಆ ಬಲಶಾಲಿ ಗಿಡುಗವು ಬಿಲದ ಹತ್ತಿರ ಬಂದಿದ್ದುದನ್ನು, ಹತ್ತಿರ ಸುಳಿದಾಡಿದ್ದುದನ್ನು, ಮತ್ತು ಇಲಿಯನ್ನು ಹಿಡಿದು ಬಿಲದಿಂದ ಎತ್ತಿಕೊಂಡು ಹಾರಿ ಹೋಗಿದ್ದುದನ್ನು ನಾನೇ ನೋಡಿದ್ದೇನೆ. ಅದು ಹಾರಿದ ತಕ್ಷಣವೇ ಆ ಗಿಡುಗದ ಹಿಂದೆ ನಾನೂ ಹಾರಿಹೋದೆ ಮತ್ತು ಆ ಬಿಲದಿಂದ ಇಲಿಯನ್ನು ತೆಗೆದುಕೊಂಡು ಹೋಗಿದ್ದುದಕ್ಕೆ ನಾನು ಅದಕ್ಕೆ ಆಶೀರ್ವದಿಸಿದೆ. ನಮ್ಮ ವೈರಿಯನ್ನು ಎತ್ತಿಕೊಂಡು ಹಾರಿ ಹೋಗುತ್ತಿರುವ ಶ್ವೇನರಾಜನೇ! ನೀನು ನಿರಮಿತ್ರ ಹಿರಣ್ಮಯ ದಿವವನ್ನು ಹೊಂದು! ಹಸಿವೆಯಿಂದಿದ್ದ ಆ ಪಕ್ಷಿಯು ಅದನ್ನು ತಿಂದ ಬಳಿಕ ಅದರ ಅನುಜ್ಞೆಯನ್ನು ಪಡೆದು ನನ್ನ ಮನೆಗೆ ಹಿಂದಿರುಗಿದೆನು. ಪುತ್ರರೇ! ವಿಶ್ವಾಸದಿಂದ ಬಿಲವನ್ನು ಪ್ರವೇಶಿಸಿ. ಭಯಪಡಬೇಕಾದದ್ದು ಏನೂ ಇಲ್ಲ. ಗಿಡುಗವು ಇಲಿಯನ್ನು ಎತ್ತಿಕೊಂಡು ಹೋಗಿದ್ದುದನ್ನು ನಾನು ನೋಡಿದ್ದೇನೆ. ಅದರಲ್ಲಿ ಸಂಶಯವೇ ಇಲ್ಲ.”

ಶಾಂಙೃಕಗಳು ಹೇಳಿದವು: “ಮಾತಾ! ಇಲಿಯನ್ನು ಎತ್ತಿಕೊಂಡು ಹೋಗಿದ್ದುದು ನಮಗೆ ತಿಳಿದಿಲ್ಲ. ಅದನ್ನು ತಿಳಿಯದೇ ನಾವು ಬಿಲವನ್ನು ಪ್ರವೇಶಿಸುವುದು ಅಶಖ್ಯ.”

ಜರಿತಾಳು ಹೇಳಿದಳು: “ಆದರೆ ಗಿಡುಗವು ಇಲಿಯನ್ನು ಎತ್ತಿಕೊಂಡು ಹೋಯಿತು ಎಂದು ನನಗೆ ಸಂಪೂರ್ಣ ತಿಳಿದಿದೆ. ಆದುದರಿಂದ ಭಯಪಡಬೇಕಾಗಿದ್ದುದು ಇಲ್ಲ. ನಾನು ಹೇಳಿದಂತೆ ಮಾಡಿರಿ.”

ಶಾಂಙೃಕಗಳು ಹೇಳಿದವು: “ಮಿಥ್ಯೋಪಚಾರದಿಂದ ನೀನು ನಮ್ಮ ಈ ಮಹಾಭಯವನ್ನು ಹೋಗಲಾಡಿಸಲಾರೆ. ಒಂದೇ ಕುಲದ ಬಾಂಧವರೊಡನೆ ಬುದ್ಧಿವಂತಿಕೆಯನ್ನು ತೋರಿಸಬೇಡ. ನಾವು ನಿನಗೆ ಉಪಕಾರವೇನನ್ನೂ ಮಾಡಿಲ್ಲ. ನೀನು ನಮ್ಮನ್ನು ಸರಿಯಾಗಿ ತಿಳಿದೂ ಇಲ್ಲ. ಪೀಡಿತರಾದ ನಮ್ಮನ್ನು ನೋಡಿಕೊಳ್ಳುತ್ತಿರುವ ಸತೀ ನೀನು ಯಾರು? ತರುಣಿಯಾಗಿದ್ದೀಯೆ, ಸುಂದರಿಯಾಗಿದ್ದೀಯೆ ಮತ್ತು ಭರ್ತುವಿನ ಅರ್ಹಳಾಗಿರುವೆ. ನಿನ್ನ ಪತಿಯ ಹಿಂದೆ ಹೋಗು. ಸುಂದರ ಪುತ್ರರನ್ನು ಪಡೆಯುವೆ. ನಾವು ಅಗ್ನಿಯನ್ನು ಪ್ರವೇಶಿಸಿ ಶುಭಲೋಕಗಳನ್ನು ಪಡೆಯುತ್ತೇವೆ. ಅಥವಾ ಒಂದುವೇಳೆ ಅಗ್ನಿಯು ನಮ್ಮನ್ನು ಸುಡದಿದ್ದರೆ ನೀನು ಪುನಃ ನಮ್ಮಲ್ಲಿಗೆ ಹಿಂದಿರುಗಿ ಬರಬಹುದು.”

ಈ ಮಾತುಗಳನ್ನು ಕೇಳಿದ ಆ ಶಾಂಗ್ರಿಯು ಪುತ್ರರನ್ನು ಖಾಂಡವದಲ್ಲಿಯೇ ಬಿಟ್ಟು ಅಗ್ನಿಯಿಲ್ಲದ ಸುರಕ್ಷಿತ ಸ್ಥಳಕ್ಕೆ ಹಾರಿ ಹೋದಳು. ನಂತರ ತೀಕ್ಷ್ಣ ಜ್ವಾಲೆಗಳಿಂದ ಉರಿಯುತ್ತಿರುವ ಹವ್ಯವಾಹನನು ಮಂದಪಾಲನ ಪುತ್ರರಾದ ಶಾಂಗೃಗಳು ಇರುವಲ್ಲಿಗೆ ಬಂದನು. ತನ್ನ ತೇಜಸ್ಸಿನಿಂದ ಜ್ವಲಿಸುತ್ತಿರುವ ಜ್ವಲನನನ್ನು ನೋಡಿ ಶಾಂಗೃ ಜರಿತಾರನು ಪಾವಕನಿಗೆ ಕೇಳುವಹಾಗೆ ಈ ಮಾತುಗಳನ್ನಾಡಿದನು.

ಜರಿತಾರಿಯು ಹೇಳಿದನು: “ಕಷ್ಟಕಾಲವು ಬರುವ ಮೊದಲೇ ಧೀಮಂತ ಪುರುಷನು ಎಚ್ಚೆತ್ತಿರುತ್ತಾನೆ. ಅವನು ಎಂದೂ ಕಷ್ಟಕಾಲ ಬಂದೊದಗಿದಾಗ ವ್ಯಥಿಸುವುದಿಲ್ಲ. ಕಷ್ಟಕಾಲ ಬಂದಾಗ ಎಚ್ಚೆತ್ತಿರದ ದಡ್ಡನು ಕಷ್ಟಕಾಲವು ಬಂದಾಗ ವ್ಯಥಿತನಾಗುತ್ತಾನೆ ಮತ್ತು ಅವನಿಗೆ ಏನೂ ತಿಳಿಯುವುದಿಲ್ಲ.”

ಸಾರಿಸೃಕ್ವನು ಹೇಳಿದನು: “ನೀನು ಧೀರನೂ ಮೇಧಾವಿಯೂ ಆಗಿರುವೆ. ಈಗ ನಮ್ಮ ಪ್ರಾಣವೇ ಕಷ್ಟದಲ್ಲಿದೆ. ಬಹುಜನರಲ್ಲಿ ಒಬ್ಬನೇ ಶೂರ ಮತ್ತು ಪ್ರಾಜ್ಞ ಎನ್ನುವುದರಲ್ಲಿ ಸಂಶಯವಿಲ್ಲ.”

ಸ್ತಂಬಮಿತ್ರನು ಹೇಳಿದನು: “ಹಿರಿಯವನು ಉಳಿಸುವವನಾಗುತ್ತಾನೆ. ಹಿರಿಯವನೇ ಕಷ್ಟದಿಂದ ಬಿಡುಗಡೆ ನೀಡುತ್ತಾನೆ. ಹಿರಿಯವನಿಗೆ ಏನುಮಾಡಬೇಕೆಂದು ತಿಳಿಯದಿದ್ದರೆ ಕಿರಿಯವಾದರೂ ಏನು ಮಾಡಿಯಾರು?”

ದ್ರೋಣನು ಹೇಳಿದನು: “ಜ್ವಲಿಸುತ್ತಿರುವ ಹಿರಣ್ಯರೇತನು ನಮ್ಮ ಮನೆಯ ಹತ್ತಿರ ಬರುತ್ತಿದ್ದಾನೆ. ಅನಲನು ತನ್ನ ಏಳು ನಾಲಗೆಗಳಿಂದ ನೆಕ್ಕುತ್ತಾ ನಮ್ಮಲ್ಲಿಗೆ ಹರಿದು ಬರುತ್ತಿದ್ದಾನೆ.”

ಭ್ರಾತನ ಈ ಮಾತುಗಳನ್ನು ಕೇಳಿದ ಜರಿತಾರಿಯು ತನ್ನ ನೆತ್ತಿಯ ಮೇಲೆ ಕೈಗಳನ್ನು ಮುಗಿದು ವಿಭಾವಸುವನ್ನು ಸ್ತುತಿಸಿದನು: “ನೀನು ವಾಯುವಿನ ಆತ್ಮ! ಪಾವನ! ನೀನು ಔಷಧ ಮೂಲಿಕೆಗಳ ಶರೀರ. ನೀರು ನಿನ್ನ ಮೂಲ. ನೀನು ಶುಕ್ರನ ಮೂಲ. ಮತ್ತು ನೀನು ನೀರಿನ ಮೂಲವೂ ಹೌದು. ಮಹಾವೀರ! ಸೂರ್ಯನ ರಷ್ಮಿಗಳಂತೆ ನಿನ್ನ ಜ್ವಾಲೆಗಳು ಮೇಲೆ, ಕೆಳಗೆ, ಪಕ್ಕದಲ್ಲಿ ಹರಡುತ್ತವೆ.”

ಸಾರಿಸೃಕ್ವನು ಹೇಳಿದನು: “ಮಾತೆಯು ತೊರೆದಿದ್ದಾಳೆ. ತಂದೆಯನ್ನು ತಿಳಿದಿಲ್ಲ. ಮೋಡಗಳಂತ ಹೊಗೆಯುಳ್ಳವನೇ! ನಮ್ಮ ರೆಕ್ಕೆಗಳು ಇನ್ನೂ ಬೆಳೆದಿಲ್ಲ. ಅಗ್ನಿ! ನಿನ್ನನ್ನು ಬಿಟ್ಟು ಬೇರೆ ಯಾವ ತ್ರಾತರನ್ನೂ ನಾವು ಬಲ್ಲೆವು. ಆದುದರಿಂದ ಏಕೈಕವೀರ! ನಮ್ಮನ್ನು ಪರಿರಕ್ಷಿಸು. ಅಗ್ನಿ! ನಿನ್ನ ಶಿವರೂಪದಿಂದ ಮತ್ತು ನಿನ್ನ ಏಳು ಜ್ವಾಲೆಗಳಿಂದ ನಿನ್ನ ಶರಣುಬಂದಿರುವ ನಮ್ಮನ್ನು ಕಷ್ಟದಿಂದ ಪರಿರಕ್ಷಿಸು. ನೀನೇ ಏಕೈಕ ತಪಸ್ವಿ. ಜಾತವೇದ! ದೇವ! ನಿನ್ನಷ್ಟು ಉರಿಯುಳ್ಳವರು ಲೋಕದಲ್ಲಿಯೇ ಬೇರೆ ಇಲ್ಲ. ಬಾಲಕ ಋಷಿಗಳಾದ ನಮ್ಮನ್ನು ಪಾಲಿಸು. ಹವ್ಯವಾಹ! ನಮ್ಮನ್ನು ದಾಟಿ ಹೋಗು.”

ಸ್ತಂಬಮಿತ್ರನು ಹೇಳಿದನು: “ಅಗ್ನಿ! ಸರ್ವವೂ ನೀನೇ! ಈ ಸರ್ವ ಜಗತ್ತೂ ನಿನ್ನಲ್ಲಿಯೇ ಇದೆ. ನಿನ್ನ ಮೇಲೆ ವಿಶ್ವವೇ ನಿಂತಿದೆ. ನೀನು ಇರುವ ಎಲ್ಲವುಗಳನ್ನೂ ಪೋಷಿಸುತ್ತೀಯೆ. ಅಗ್ನಿ! ನೀನು ಹವ್ಯವಾಹನ! ನೀನೇ ಪರಮ ಹವಿಸ್ಸು. ಮನುಷ್ಯರು ನಿನ್ನಲ್ಲಿ ಯಜಿಸುತ್ತಾರೆ. ಹವ್ಯವಾಹನ! ಈ ಮೂರೂ ಲೋಕಗಳನ್ನು ರಚಿಸಿದವನೂ ನೀನೇ! ಕಾಲ ಬಂದಾಗ ಪುನಃ ಅವುಗಳನ್ನು ಸಮಿದ್ಧಗಳಂತೆ ಸುಡುತ್ತೀಯೆ. ಅಗ್ನಿ! ಈ ಸರ್ವ ಭುವನಗಳ ಪ್ರಸೂತಿಯು ನೀನೇ ಮತ್ತು ಪುನಃ ಅವು ನಿನ್ನಲ್ಲಿಗೇ ಹಿಂದಿರುಗುತ್ತವೆ. ಜಗತ್ಪತೇ! ನೀನು ಪ್ರಾಣಿಗಳು ತಿಂದ ಆಹಾರವನ್ನು ಜೀರ್ಣಿಸುತ್ತೀಯೆ. ನಿತ್ಯವೂ ಪ್ರಬುದ್ಧನಾದ ನಿನ್ನ ಮೇಲೆ ಸರ್ವವೂ ಪ್ರತಿಷ್ಠಿತವಾಗಿದೆ.”

ದ್ರೋಣನು ಹೇಳಿದನು: “ಜಾತವೇದ! ಸೂರ್ಯನಾಗಿ ನೀನು ನಿನ್ನ ರಷ್ಮಿಗಳ ಮೂಲಕ ಭೂಮಿಯ ನೀರು ಮತ್ತು ರಸಗಳನ್ನು ಎಳೆದುಕೊಳ್ಳುತ್ತೀಯೆ. ಶುಕ್ರ! ಅವೆಲ್ಲವನ್ನೂ ಹೀರಿಕೊಂಡು ಪುನಃ ಉತ್ಸರ್ಗಕಾಲದಲ್ಲಿ ಮಳೆಯನ್ನಾಗಿ ಸೃಷ್ಟಿಸಿ ಸುರಿಸುತ್ತೀಯೆ! ಶುಕ್ರ! ನಿನ್ನಿಂದ ಪುನಃ ಔಷಧ ಹಸಿರುಗಳು, ಪುಷ್ಕರಣಿಗಳು ಮತ್ತು ಮಹೋದಧಿ ಸಮುದ್ರಗಳು ಜೀವತಾಳುತ್ತವೆ. ತಿಗ್ಮಾಂಶು! ನಿನ್ನ ಈ ಪೀಠವು ವರುಣನ ಪರಾಯಣ! ನೀನು ಶಿವಸ್ರಾತ! ಆದುದರಿಂದ ನಮ್ಮನ್ನು ಇಂದು ವಿನಾಶಮಾಡಬೇಡ! ಪಿಂಗಾಕ್ಷ! ಲೋಹಿತಗ್ರೀವ! ಕೃಷ್ಣವರ್ತ್ಮನ್! ಹುತಾಶನ! ನಮ್ಮನ್ನು ದಾಟಿಹೋಗಿ ಸಾಗರಗೃಹವನ್ನು ಬಿಟ್ಟುಬಿಡುವಂತೆ ನಮ್ಮನ್ನು ಬಿಟ್ಟುಬಿಡು.”

ಅಕ್ಲಿಷ್ಟಕರ್ಮಿ ದ್ರೋಣನು ಈ ರೀತಿ ಜಾತವೇದನನ್ನು ಸ್ತುತಿಸಲಾಗಿ ಪ್ರೀತಾತ್ಮ ಅಗ್ನಿಯು ಮಂದಾಪಾಲನಿಗೆ ತಾನು ಮಾಡಿದ್ದ ಪ್ರತಿಜ್ಞೆಯಂತೆ ದ್ರೋಣನಿಗೆ ಹೇಳಿದನು: “ದ್ರೋಣ! ನೀನು ಓರ್ವ ಋಷಿ. ನೀನು ಹೇಳಿದ್ದುದೇ ಬ್ರಹ್ಮ. ನಿನ್ನ ಈಪ್ಸಿತವನ್ನು ಪೂರೈಸುತ್ತೇನೆ, ನಿನ್ನಲ್ಲಿ ಯಾವುದೇ ಭಯವೂ ಇಲ್ಲದಿರಲಿ. ಇದರ ಹಿಂದೆಯೇ ಮಂದಪಾಲನು ನಿಮ್ಮೆಲ್ಲರ ಕುರಿತು ಹೇಳಿದ್ದನು. ವನವನ್ನು ದಹಿಸುವಾಗ ನನ್ನ ಪುತ್ರಕರನ್ನು ಬಿಟ್ಟುಬಿಡು ಎಂದು ಹೇಳಿದ್ದನು. ಅವನ ಮಾತುಗಳು ಮತ್ತು ನೀನು ಈಗತಾನೆ ಹೇಳಿದ್ದುದು ಇವೆರಡೂ ನನಗೆ ಮಹತ್ವದ್ದು. ಆದುದರಿಂದ ಹೇಳು. ನಾನು ನಿನಗೆ ಏನು ಮಾಡಬೇಕು? ನಿನ್ನ ಈ ಸ್ತುತಿಯಿಂದ ನಾನು ಅತ್ಯಂತ ಪ್ರೀತನಾಗಿದ್ದೇನೆ. ನಿನಗೆ ಮಂಗಳವಾಗಲಿ.”

ದ್ರೋಣನು ಹೇಳಿದನು: “ಶುಕ್ರ! ಈ ಬೆಕ್ಕು ನಮ್ಮನ್ನು ನಿತ್ಯವೂ ಕಾಡಿಸುತ್ತಿದೆ. ಹವ್ಯವಾಹ! ಬಂಧುಗಳೊಂದಿಗೆ ಇದನ್ನು ಕಬಳಿಸು!” ಹಾಗೆಯೇ ಮಾಡಿದ ವಹ್ನಿಯು ಶಾಂಗೃಕಗಳನ್ನು ಕಳುಹಿಸಿಕೊಟ್ಟನು ಮತ್ತು ಖಾಂಡವವನ್ನು ಸಮಿತ್ತದಂತೆ ಸುಟ್ಟುಹಾಕಿದನು.

ಮಂದಪಾಲನು ತನ್ನ ಮಕ್ಕಳ ಕುರಿತು ಚಿಂತಿಸತೊಡಗಿದನು. ಶೀತಾಂಶುವೊಂದಿಗೆ ಅವನು ಮಾತನಾಡಿದ್ದರೂ ಅವನು ಉದ್ವಿಗ್ನನಾಗಿದ್ದನು. ಅವನ ಪುತ್ರರ ಮೇಲಿದ್ದ ಚಿಂತೆಯಿಂದ ಅವನು ಲಪಿತಳಲ್ಲಿ ಹೇಳಿದನು: “ಲಪಿತ! ನನ್ನ ಆ ಸಣ್ಣ ಮಕ್ಕಳು ತಪ್ಪಿಸಿಕೊಂಡು ಹೋಗಲು ಅಶಕ್ತರು. ಬೆಂಕಿಯು ಹೆಚ್ಚಾಗಿ ಉರಿಯುತ್ತಿದ್ದಾಗ, ಮತ್ತು ಗಾಳಿಯು ಜೋರಾಗಿ ಬೀಸುತ್ತಿರುವಾಗ ನನ್ನ ಮಕ್ಕಳು ಅಲ್ಲಿಂದ ತಪ್ಪಿಸಿಕೊಂಡು ಹೋಗಲು ಅಸಮರ್ಥರಾಗುತ್ತಾರೆ. ಅವರ ತಪಸ್ವಿನಿ ತಾಯಿಯೂ ಕೂಡ ಅವರನ್ನು ಉಳಿಸಲು ಅಶಕ್ತಳಾಗುತ್ತಾಳೆ. ಪುತ್ರರನ್ನು ಉಳಿಸಲು ಸಾಧ್ಯವಾಗಲಿಲ್ಲವೆಂದು ಅವಳು ತುಂಬಾ ದುಃಖಿಯಾಗಿರಬಹುದು. ನನ್ನ ಪುತ್ರರಿಗಾಗಿ ಚಡಪಡಿಸುತ್ತಾ, ಓಡಲಿಕ್ಕೂ ಆಗದೇ, ಹಾರಿಹೋಗಲಿಕ್ಕೂ ಆಗದೇ ತಪಿಸುತ್ತಾ ಅಲ್ಲಿಯೇ ಕಿರುಚುತ್ತಾ ಹಾರಾಡುತ್ತಾ ಇರಬಹುದು! ಪುತ್ರ ಜರಿತಾರಿಯು ಹೇಗಿರಬಹುದು? ನನ್ನ ಸಾರಿಸೃಕ್ವನು ಹೇಗಿರಬಹುದು? ಸ್ತಂಬಮಿತ್ರನು ಹೇಗಿರಬಹುದು? ಮತ್ತು ಆ ತಪಸ್ವಿನೀ ದ್ರೋಣನು ಹೇಗಿರಬಹುದು?”

ಈ ರೀತಿ ವನದಲ್ಲಿ ಋಷಿ ಮಂದಪಾಲನು ವಿಲಪಿಸುತ್ತಿರಲು ಲಪಿತಾಳು ಅಸೂಯೆಯಿಂದ ಅವನಿಗೆ ಹೇಳಿದಳು: “ನೀನು ನಿನ್ನ ಸುತರ ರಕ್ಷಣೆಮಾಡುತ್ತಿಲ್ಲ! ಅವರು ತೇಜಸ್ವಿ, ವೀರ್ಯವಂತ ಋಷಿಗಳೆಂದೂ ಅವರಿಗೆ ಅಗ್ನಿಯ ಭಯವಿಲ್ಲ ಎಂದು ನೀನೇ ಹೇಳಿದ್ದೆ. ಹಾಗೆಯೇ ನನ್ನ ಸನ್ನಿಧಿಯಲ್ಲಿಯೇ ನೀನು ಅವರನ್ನು ಅಗ್ನಿಗೆ ರಕ್ಷಣೆಯಲ್ಲಿ ಇಟ್ಟಿದ್ದೆ ಮತ್ತು ಆ ಮಹಾತ್ಮನು ಭರವಸೆಯನ್ನು ನೀಡಿದ್ದನು. ಲೋಕಪಾಲಕರು ಎಂದೂ ಸುಳ್ಳನ್ನು ಹೇಳುವುದಿಲ್ಲ. ಮತ್ತು ಅವರು ಸಮರ್ಥ ವಾಗ್ಮಿಗಳು. ಇಲ್ಲ. ಅವರ ಮೇಲೆ ನಿನ್ನ ಮನಸ್ಸಿಲ್ಲ. ನೀನು ನನ್ನ ಸವತಿಯ ಕುರಿತು ಚಿಂತಿಸಿ ಪರಿತಪಿಸುತ್ತಿದ್ದೀಯೆ! ಹಿಂದೆ ನೀನು ಅವಳನ್ನು ಎಷ್ಟು ಪ್ರೀತಿಸುತ್ತಿದ್ದೆಯೋ ಅಷ್ಟು ನನ್ನನ್ನು ಪ್ರೀತಿಸುತ್ತಿಲ್ಲ ಎನ್ನುವುದು ಸತ್ಯ. ಸುಹೃಜ್ಜನರಲ್ಲಿ ನಿಃಸ್ನೇಹದಿಂದ ಎಂದೂ ನ್ಯಾಯ ಮತ್ತು ಪಕ್ಷಪಾತವನ್ನು ಮಾಡಬಾರದು. ಚಡಪಡಿಸುತ್ತಿರುವವನನ್ನು ನೋಡಲು ನನಗೆ ಎಂದೂ ಶಕ್ಯವಿಲ್ಲ. ನೀನು ಯಾರ ಕುರಿತು ಪರಿತಪಿಸುತ್ತಿದ್ದೀಯೋ ಆ ನಿನ್ನ ಜರಿತಾಳ ಬಳಿ ಹೋಗು. ನಾನು ಕಾಪುರುಷನೊಂದಿಗಿರುವವಳಂತೆ ಏಕಾಂಗಿಯಾಗಿ ಅಲೆಯುತ್ತಿರುತ್ತೇನೆ.”

ಮಂದಪಾಲನು ಹೇಳಿದನು: “ನೀನು ಕಲ್ಪಿಸಿದ ಕಾರಣಕ್ಕಾಗಿ ನಾನು ಲೋಕದಲ್ಲಿ ಸಂಚರಿಸುತ್ತಿದ್ದೇನೆ ಎಂದು ತಿಳಿಯಬೇಡ! ನಾನು ಸಂತಾನಕ್ಕೆಂದು ಈ ಲೋಕದಲ್ಲಿ ಸಂಚರಿಸುತ್ತಿದ್ದೇನೆ ಮತ್ತು ಈ ಸಮಯದಲ್ಲಿ ನನ್ನ ಮಕ್ಕಳು ಕಷ್ಟದಲ್ಲಿದ್ದಾರೆ. ಇರುವುದನ್ನು ತೊರೆದು ಭವಿಷ್ಯದಲ್ಲಿ ಆಗಬಹುದಾದುದನ್ನು ಅವಲಂಬಿಸಿರುವವನು ಮೂಢ. ಅಂಥವವನ್ನು ಲೋಕವು ಕೀಳಾಗಿ ಕಾಣುತ್ತದೆ. ನಿನಗೆ ಇಷ್ಟಬಂದಹಾಗೆ ಮಾಡು. ಈ ಜ್ವಲಿಸುತ್ತಿರುವ ಮಹಾ ವೃಕ್ಷಗಳನ್ನು ನೆಕ್ಕುತ್ತಾ ಕೆಟ್ಟದನ್ನು ತರುವ ಈ ಅಗ್ನಿಯು ನನ್ನ ಹೃದಯದಲ್ಲಿ ಅಶುಭ ಸಂತಾಪವನ್ನು ಹುಟ್ಟಿಸುತ್ತಿದ್ದಾನೆ.”

ಅಗ್ನಿಯು ತನ್ನ ಪುತ್ರರಿರುವ ಆ ಸ್ಥಳವನ್ನು ದಾಟಿ ಹೋದನಂತರ ತಕ್ಷಣವೇ ಪುತ್ರರ ಮೇಲಿನ ಪ್ರೀತಿಯಿಂದ ಜರಿತಾಳು ಅಲ್ಲಿಗೆ ಬಂದಳು. ದುಃಖದಿಂದ ರೋದಿಸುತ್ತಿರುವ ಅವಳು ಆ ವನದಲ್ಲಿ ಜಾತವೇದಸ ಅಗ್ನಿಯಿಂದ ಮುಕ್ತರಾಗಿ ಕುಶಲರಾಗಿದ್ದ ತನ್ನ ಸುತರನ್ನು ಕಂಡಳು. ನೋಡಲಿಕ್ಕೆ ಅದೊಂದು ಅದ್ಭುತ ದೃಶ್ಯವಾಗಿತ್ತು. ಪುನಃ ಪುನಃ ಅವಳು ಆ ಪುತ್ರರನ್ನು ಒಬ್ಬೊಬ್ಬರನ್ನಾಗಿಯೇ ಅಪ್ಪಿಕೊಂಡು ರೋದಿಸಿದಳು. ಆಗ ತಕ್ಷಣವೇ ಅಲ್ಲಿಗೆ ಮಂದಪಾಲನೂ ಬಂದನು. ಆದರೆ ಅವನ ಮಕ್ಕಳೆಲ್ಲರಲ್ಲಿ ಯಾರೊಬ್ಬನೂ ಅವನನ್ನು ಅಭಿನಂದಿಸಲಿಲ್ಲ. ಅವನು ಪುನಃ ಪುನಃ ಒಬ್ಬೊಬ್ಬರಲ್ಲಿಯೂ ಜರಿತಾಳಲ್ಲಿಯೂ ಮಾತನ್ನಾಡುತ್ತಿರಲು ಅವರು ಯಾರೂ ಆ ಋಷಿಯನ್ನು ಕುರಿತು ಒಳ್ಳೆಯ ಅಥವಾ ಕೆಟ್ಟ ಮಾತುಗಳನ್ನು ಆಡಲಿಲ್ಲ.

ಮಂದಪಾಲನು ಹೇಳಿದನು: “ನಿಮ್ಮಲ್ಲಿ ಯಾರು ನನ್ನ ಜ್ಯೇಷ್ಠ ಪುತ್ರ? ಯಾರು ಅವನ ನಂತರದವನು? ನಿಮ್ಮಲ್ಲಿ ಯಾರು ಮಧ್ಯಮ ಪುತ್ರ ಮತ್ತು ಕನಿಷ್ಠನು ಯಾರು? ಹೀಗೆ ದುಃಖಾರ್ತನಾಗಿ ಮಾತನಾಡುತ್ತಿರುವ ನನ್ನಲ್ಲಿ ನೀವು ಯಾಕೆ ಪ್ರತಿಯಾಗಿ ಮಾತನಾಡುತ್ತಿಲ್ಲ? ಹವ್ಯವಾಹನನಿಗೆ ನಿಮ್ಮನ್ನು ಒಪ್ಪಿಸಿ ಹೋಗಿದ್ದರೂ ನನಗೆ ಶಾಂತಿಯೇ ದೊರೆಯಲಿಲ್ಲ.”

ಜರಿತಾಳು ಹೇಳಿದಳು: “ನಿನ್ನ ಜ್ಯೇಷ್ಠ ಸುತ ಯಾರಾದರೆ ನಿನಗೇನು? ಅನಂತರದವನು ಯಾರಾದರೆ ನಿನಗೇನು? ನಿನ್ನ ಮಧ್ಯಮನಲ್ಲಿ ನಿನಗೇನು ಕೆಲಸ ಮತ್ತು ತಪಸ್ವಿನಿ ಕನಿಷ್ಠನಲ್ಲಿ ಏನು ಕೆಲಸ? ಹಿಂದೆ ನನ್ನನ್ನು ಸಂಪೂರ್ಣವಾಗಿ ತೊರೆದು ನೀನು ಹೊರಟುಹೋದೆ. ನಿನ್ನ ಆ ತರುಣಿ ಚಾರುಹಾಸಿನಿ ಲಪಿತಾಳ ಬಳಿ ಹೋಗು.”

ಮಂದಪಾಲನು ಹೇಳಿದನು: “ಇನ್ನೊಬ್ಬ ಪುರುಷನನ್ನು ಬಿಟ್ಟು ಬೇರೆ ಯಾವುದೂ ಒಬ್ಬ ಸ್ತ್ರೀಗೆ ಸವತಿಯ ಜೊತೆಗಿರುವ ಪೈಪೋಟಿಯಷ್ಟು ಮಾರಕವಲ್ಲ. ಯಾಕೆಂದರೆ ಸುವ್ರತ, ಕಲ್ಯಾಣಿ, ಸರ್ವಲೋಕಪರಿಶ್ರುತ ಅರುಂಧತಿಯೂ ಕೂಡ ಋಷಿಸತ್ತಮ ವಸಿಷ್ಠನನ್ನು ಶಂಕಿಸಿದಳು. ಸಪ್ತರ್ಷಿಮಧ್ಯಗ ಅವನು ಸದಾ ಅತ್ಯಂತ ವಿಶುದ್ಧಭಾವದಿಂದ ಅವಳ ಪ್ರಿಯಹಿತರತನಾಗಿದ್ದನು. ಆದರೂ ಅವಳು ಆ ಮುನಿಯನ್ನು ಹೀಯಾಳಿಸಿದಳು. ಈ ರೀತಿ ಅಸಡ್ಡೆತನ ತೋರಿಸಿದ್ದುದಕ್ಕಾಗಿ ಅವಳು ಧೂಮದಿಂದ ಆವೃತ ಅರುಣನ ಸಮಪ್ರಭೆಯಾಗಿ, ಅಷ್ಟೊಂದು ಸುಂದರವಾಗಿ ಕಾಣದೇ, ಒಮ್ಮೆ ಕಾಣಿಸಿಕೊಳ್ಳುತ್ತಾ ಇನ್ನೊಮ್ಮೆ ಕಾಣಿಸಿಕೊಳ್ಳದೆಯೇ, ನಿಮಿತ್ತದಂತೆ ತೋರಿಸಿಕೊಳ್ಳುತ್ತಾಳೆ. ನೀನೂ ಕೂಡ ಸಂತಾನಕ್ಕೆಂದೇ ನನ್ನನು ಕೂಡಿದೆ ಮತ್ತು ನಿನ್ನಗಿಷ್ಟವಾದವನನ್ನು ತೊರೆದೆ. ಈಗ ನೀನು ಅವಳಂತೆಯೇ ವರ್ತಿಸುತ್ತಿದ್ದೀಯೆ. ಪುರುಷನು ಎಂದೂ ತನ್ನ ಭಾರ್ಯೆಯಲ್ಲಿ ಹೆಂಡತಿಯೆಂದು ವಿಶ್ವಾಸವನ್ನು ಇಡುವ ಕೆಲಸ ಮಾಡಬಾರದು. ಯಾಕೆಂದರೆ ಪುತ್ರವತಿಯಾದ ಸತಿಯು ತನ್ನ ಕೆಲಸವನ್ನು ಅನುಸರಿಸುವುದಿಲ್ಲ.”

ಅದರ ನಂತರ ಅವನ ಪುತ್ರರೆಲ್ಲರೂ ಅವನನ್ನು ಸರಿಯಾಗಿ ಉಪಾಸಿಸಿದರು ಮತ್ತು ಅವನೂ ತನ್ನ ಮಕ್ಕಳಿಗೆ ಅಶ್ವಾಸನೆಯನ್ನಿತ್ತು ಪಾಲಿಸಿದನು.

ಮಂದಪಾಲನು ಹೇಳಿದನು: “ನಿಮ್ಮನ್ನು ಪರಿರಕ್ಷಿಸಲು ನಾನು ಅಗ್ನಿಯಲ್ಲಿ ವಿಜ್ಞಾಪಿಸಿದ್ದೇನೆ. ಹಾಗೆಯೇ ಆಗಲೆಂದು ಈ ಹಿಂದೆಯೇ ಅಗ್ನಿಯು ಉತ್ತರಿಸಿದ್ದನು. ಅಗ್ನಿಯ ವಚನವನ್ನು ನಿನಪಿನಲ್ಲಿಟ್ಟುಕೊಂಡು, ನಿಮ್ಮ ತಾಯಿಯ ಧರ್ಮವೃತ್ತಿಯನ್ನು ತಿಳಿದು ಮತ್ತು ನಿಮ್ಮದೇ ಪರಮ ವೀರ್ಯವನ್ನು ತಿಳಿದು ನಾನು ಇಲ್ಲಿಗೆ ಈ ಮೊದಲೇ ಬರಲಿಲ್ಲ. ಪುತ್ರರೇ! ಮರಣದ ಕುರಿತು ನೀವು ಸಂತಾಪ ಪಾಡಬೇಕಾಗಿಲ್ಲ. ನೀವು ವೇದ ಮತ್ತು ಬ್ರಹ್ಮವನ್ನು ತಿಳಿದಿರುವ ಋಷಿಗಳು ಎಂದು ಅಗ್ನಿಯೂ ತಿಳಿದಿದ್ದಾನೆ.”

ಈ ರೀತಿ ತನ್ನ ಮಕ್ಕಳಿಗೆ ಆಶ್ವಾಸನೆಯನ್ನಿತ್ತು ಮಂದಪಾಲನು ಅವರು ಮತ್ತು ತನ್ನ ಪತ್ನಿಯೊಡನೆ ಆ ದೇಶವನ್ನು ತೊರೆದು ಇನ್ನೊಂದು ದೇಶಕ್ಕೆ ಹೋದನು.

ಹಿಂದಿನ ಲೇಖನಸಿದ್ದು ನಿಜ ಕನಸು ಕೃತಿ ಬಿಡುಗಡೆಗೆ ತಡೆಯಾಜ್ಞೆ
ಮುಂದಿನ ಲೇಖನವಿವಿಧ ಅಭಿವೃದ್ಧಿ ಕಾಮಗಾರಿ ಕ್ರಿಯಾ ಯೋಜನೆಗೆ ಅನುಮೋದನೆ: ಮುಡಾ ಅಧ್ಯಕ್ಷ ಯಶಸ್ವಿನಿ ಸೋಮಶೇಖರ್