ಮನೆ ಸುದ್ದಿ ಜಾಲ ಹವಾಮಾನ ಇಲಾಖೆಯಿಂದ ಅರಬ್ಬೀ ಸಮುದ್ರದಲ್ಲಿ ಮೀನುಗಾರರಿಗೆ ಎಚ್ಚರಿಕೆ ಸಂದೇಶ : ಉಡುಪಿ

ಹವಾಮಾನ ಇಲಾಖೆಯಿಂದ ಅರಬ್ಬೀ ಸಮುದ್ರದಲ್ಲಿ ಮೀನುಗಾರರಿಗೆ ಎಚ್ಚರಿಕೆ ಸಂದೇಶ : ಉಡುಪಿ

0

ಉಡುಪಿ: ರಾಜ್ಯ ಕರಾವಳಿಯಲ್ಲಿ ಪೂರ್ವ ಮುಂಗಾರು ಆರಂಭದ ಲಕ್ಷಣಗಳು ಕಾಣಿಸಿಕೊಂಡಿವೆ. ಬಂಗಾಳಕೊಲ್ಲಿ ಹಾಗೂ ಅರಬ್ಬಿ ಸಮುದ್ರದ ವಿವಿಧ ಭಾಗಗಳಲ್ಲಿ ವಾತಾವರಣ ಅಸ್ಥಿರಗೊಂಡಿದ್ದು, ಕರಾವಳಿ ಮೀನುಗಾರರಿಗೆ ಹವಾಮಾನ ಇಲಾಖೆ ಬಿರುಗಾಳಿಯ ಮುನ್ನೆಚ್ಚರಿಕೆ ನೀಡಿದೆ. ಕಡಲಿಗೆ ಇಳಿದಿರುವ ಯಾಂತ್ರೀಕೃತ ಬೋಟುಗಳು ಜಾಗರೂಕತೆ ವಹಿಸಬೇಕು ಅಥವಾ ತಕ್ಷಣ ತೀರ ಪ್ರದೇಶ ಸೇರುವಂತೆ ಸೂಚನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಮಲ್ಪೆ ಸೇರಿದಂತೆ ಕರಾವಳಿ ಭಾಗಗಳಲ್ಲಿ ಮೀನುಗಾರಿಕೆ ದೋಣಿಗಳು ಆತಂಕದ ನಡುವೆ ವಾಪಸ್ ಆಗುತ್ತಿದ್ದು ಬಂಗಾಳಕೊಲ್ಲಿ ಹಾಗೂ ಅರಬ್ಬಿ ಸಮುದ್ರದ ವಿವಿಧ ಭಾಗಗಳಲ್ಲಿ ವಾತಾವರಣ ಅಸ್ಥಿರಗೊಂಡಿದ್ದು, ಬಿರುಗಾಳಿಯ ಮುನ್ನೆಚ್ಚರಿಕೆ ನೀಡಲಾಗಿದೆ. ಮೇ 19 ರಿಂದ ಮೇ.23ರವರೆಗೆ ಕರಾವಳಿ ಪ್ರದೇಶಗಳಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ ಎನ್ನಲಾಗುತ್ತಿದೆ.

ಈ ಕುರಿತು ಗಂಟೆಗೆ 40 ರಿಂದ 50 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದ್ದು, ಕೆಲವೆಡೆ ಇದು 60 ಕಿಲೋಮೀಟರ್ ವೇಗ ತಲುಪುವ ಸಾಧ್ಯತೆಯೂ ಇದೆ. ಈ ಹಿನ್ನೆಲೆಯಲ್ಲಿ ಮೀನುಗಾರರು ಕಡಲಿಗೆ ಇಳಿಯಬಾರದು ಎಂದು ಇಲಾಖೆ ಸೂಚಿಸಿದೆ. ಈಗಾಗಲೇ ಸಮುದ್ರಕ್ಕೆ ತೆರಳಿರುವ ಯಾಂತ್ರಿಕೃತ ಬೋಟುಗಳು ತಕ್ಷಣ ತೀರ ಪ್ರದೇಶ ಸೇರಬೇಕೆಂದು ಎಚ್ಚರಿಕೆ ನೀಡಲಾಗಿದೆ. ಉಡುಪಿ ಜಿಲ್ಲೆಯ ಮಲ್ಪೆ ಬಂದರು ಹಾಗೂ ಹಿನ್ನೀರು ಪ್ರದೇಶಗಳಲ್ಲಿ ಮೀನುಗಾರಿಕಾ ಬೋಟುಗಳು ವಾಪಸ್ ಬರುತ್ತಿರುವ ದೃಶ್ಯಗಳು ಕಂಡುಬಂದಿವೆ. ಬಿರುಗಾಳಿಯ ಮುನ್ನೆಚ್ಚರಿಕೆಯಿಂದ ಮೀನುಗಾರಿಕೆ ಚಟುವಟಿಕೆಗಳು ಅವಧಿಗೂ ಮುನ್ನ ಸ್ಥಗಿತಗೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ. ಕೇರಳ–ಲಕ್ಷದ್ವೀಪ ಪ್ರದೇಶ ಹಾಗೂ ಕನ್ಯಾಕುಮಾರಿ ಸಮೀಪ ಗಾಳಿ ವೇಗ ಪಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಕರಾವಳಿ ಜಿಲ್ಲೆಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಅವಧಿಗೂ ಮುನ್ನ ಮುಂಗಾರು ಕರಾವಳಿಗೆ ಅಪ್ಪಳಿಸಿದರೂ ಆಶ್ಚರ್ಯವಿಲ್ಲ ಎನ್ನುವ ಅಭಿಪ್ರಾಯಗಳು ಕೇಳಿಬರುತ್ತಿವೆ. ಅದೂ ಅಲ್ಲದೇ ಯಾಂತ್ರೀಕೃತ ಮತ್ತು ಆಳಸಮುದ್ರ ಮೀನುಗಾರಿಕೆಗೆ ಮಳೆಗಾಲದಲ್ಲಿ ರಜೆ ಇದೆ. ಮಳೆಗಾಲದ ಎರಡೂವರೆ ತಿಂಗಳು ಮೀನುಗಾರಿಕೆಗೆ ನಿಷೇಧ ಇದೆ. ಈ ಹಿನ್ನೆಲೆಯಲ್ಲಿ ಆಳಸಮುದ್ರ ಬೋಟುಗಳು ಮಲ್ಪೆಯತ್ತ ವಾಪಸಾಗುತ್ತಿವೆ. ಮೀನುಗಾರಿಕೆ ಉಪ ನಿರ್ದೇಶಕ ಕುಮಾರಸ್ವಾಮಿ ಮಾತನಾಡಿ, ನೈಋತ್ಯ ಮಾನ್ಸೂನ್ ಮೇ.26ನೇ ತಾರೀಕಿನಿಂದ ಶುರುವಾಗುತ್ತೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ ಎನ್ನಲಾಗುತ್ತಿದೆ.