ಮನೆ ಸುದ್ದಿ ಜಾಲ ಮಲ್ಲೇಶ್ವರಂ: ಕೊರೋನಾ ಪರೀಕ್ಷೆಗೆ ವಿನೂತನ ಡ್ರೈವ್ ಥ್ರೂ/ವಾಕ್ ಇನ್ ವ್ಯವಸ್ಥೆ

ಮಲ್ಲೇಶ್ವರಂ: ಕೊರೋನಾ ಪರೀಕ್ಷೆಗೆ ವಿನೂತನ ಡ್ರೈವ್ ಥ್ರೂ/ವಾಕ್ ಇನ್ ವ್ಯವಸ್ಥೆ

0

ಬೆಂಗಳೂರು: ತಾವು ಪ್ರತಿನಿಧಿಸುತ್ತಿರುವ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ವ್ತಾಪ್ತಿಯಲ್ಲಿ ಮನೆಮನೆಗೂ ಹೋಗಿ, ತ್ವರಿತ ಗತಿಯಲ್ಲಿ ಕೋವಿಡ್/ಓಮೈಕ್ರಾನ್ ಸೋಂಕು ಪರೀಕ್ಷೆ ಮಾಡಲಿರುವ ಮತ್ತು ಸಾರ್ವಜನಿಕರು ತಾವಾಗಿಯೇ ವಾಹನಗಳಲ್ಲಿ ಬಂದು ಸೋಂಕು ಪರೀಕ್ಷೆ ಮಾಡಿಸಿಕೊಳ್ಳುವಂತಹ ವಿನೂತನ ಡ್ರೈವ್ ಥ್ರೂ/ವಾಕ್ ಇನ್ ವ್ಯವಸ್ಥೆಗೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಬುಧವಾರ ಚಾಲನೆ ನೀಡಿದರು.

ಇದರ ಅಂಗವಾಗಿ ಮಲ್ಲೇಶ್ವರಂನ ಮಾರ್ಗೋಸಾ ರಸ್ತೆಯ 18ನೇ ಅಡ್ಡರಸ್ತೆಯಲ್ಲಿರುವ ಬಿಎಂಟಿಸಿ ಬಸ್ ನಿಲ್ದಾಣದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ಕೊರೋನಾ ಮತ್ತು ಓಮೈಕ್ರಾನ್ ಸೋಂಕು ವೇಗವಾಗಿ ಹರಡುತ್ತಿದೆ. ಹೀಗಾಗಿ ಇಂತಹ ಸರಳ, ಸುಲಭ ಮತ್ತು ಸುರಕ್ಷಿತ ತಪಾಸಣಾ ವ್ಯವಸ್ಥೆ ಬೇಕಾಗಿತ್ತು. ಈ ಪರೀಕ್ಷೆಗಳು ಸಂಪೂರ್ಣ ಉಚಿತವಾಗಿವೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ಅದನ್ನು ಕೂಡ ಒದಗಿಸಲಾಗುವುದು’ ಎಂದರು.

`ಸಾರ್ವಜನಿಕರು ದ್ವಿಚಕ್ರ ವಾಹನ, ಆಟೋರಿಕ್ಷಾ, ಕಾರು ಇತ್ಯಾದಿಗಳಲ್ಲಿ ಪರೀಕ್ಷೆ ಮಾಡಿಸಿಕೊಳ್ಳಲು ಬಂದರೆ ವೈದ್ಯಕೀಯ ಸಿಬ್ಬಂದಿ ತಾವೇ ಖುದ್ದಾಗಿ ಗಂಟಲು ದ್ರವವನ್ನು ಸಂಗ್ರಹಿಸಿಕೊಳ್ಳಲಿದ್ದಾರೆ. ಪರೀಕ್ಷೆಯ ಫಲಿತಾಂಶವನ್ನು ಆಯಾ ವ್ಯಕ್ತಿಗಳ ಮೊಬೈಲ್ ಫೋನಿಗೆ ರವಾನಿಸಲಾಗುವುದು. ಈ ಡ್ರೈವ್-ಇನ್/ವಾಕ್ ಥ್ರೂ ಕೇಂದ್ರವು ಬೆಳಿಗ್ಗೆ 8ರಿಂದ ರಾತ್ರಿ 8ರವರೆಗೂ ಕಾರ್ಯ ನಿರ್ವಹಿಸಲಿದ್ದು, ಇದರಲ್ಲಿ ಗಂಟಲು ದ್ರವ ಸಂಗ್ರಾಹಕರು, ಲ್ಯಾಬ್ ಟೆಕ್ನೀಷಿಯನ್ ಮತ್ತು ಡೇಟಾ ಎಂಟ್ರಿ ಆಪರೇಟರುಗಳು ಇರುತ್ತಾರೆ. ಈ ವ್ಯವಸ್ಥೆಯನ್ನು ಮಲ್ಲೇಶ್ವರಂ ಕ್ಷೇತ್ರದ ಉಳಿದ ಭಾಗಗಳಿಗೂ ವಿಸ್ತರಿಸಲಾಗುವುದು. ಇಲ್ಲಿ ಯಾರು ಬೇಕಾದರೂ ಪರೀಕ್ಷೆ ಮಾಡಿಸಿಕೊಳ್ಳಬಹುದು,’ ಎಂದು ಅವರು ಹೇಳಿದರು.

ಇದೇ ಸಂದರ್ಭದಲ್ಲಿ ಸಚಿವರು, ಕ್ಷೇತ್ರದ 7 ವಾರ್ಡುಗಳ ವ್ಯಾಪ್ತಿಯಲ್ಲೂ ಪ್ರತಿಯೊಂದು ಮನೆಗೂ ಹೋಗಿ ಕೋವಿಡ್/ಓಮೈಕ್ರಾನ್ ಸೋಂಕು ಪರೀಕ್ಷೆ ಮಾಡಲಿರುವ ಸಂಚಾರಿ ತಪಾಸಣಾ ವಾಹನಗಳಿಗೆ ಹಸಿರು ನಿಶಾನೆ ತೋರಿಸಿದರು.

ಈ ವಾಹನಗಳಲ್ಲಿ ಕೂಡ ನುರಿತ ವೈದ್ಯಕೀಯ ಸಿಬ್ಬಂದಿಗಳ ತಂಡ ಇರಲಿದ್ದು, ಸ್ಥಳದಲ್ಲೇ ಆರ್.ಎ.ಟಿ. ಪರೀಕ್ಷೆ ನಡೆಸಲಿದೆ. ಜತೆಗೆ, ಆರ್.ಟಿಪಿಸಿಆರ್ ಪರೀಕ್ಷೆ ಅಗತ್ಯವೆನಿಸಿದರೆ ಗಂಟಲುದ್ರವವನ್ನು ಸಂಗ್ರಹಿಸಿಕೊಳ್ಳಲಿದ್ದು, ಫಲಿತಾಂಶವನ್ನು ಸಂಬಂಧಿಸಿದ ವ್ಯಕ್ತಿಗಳ ಮೊಬೈಲಿಗೆ ಕಳಿಸಿ ಕೊಡಲಾಗುವುದು. ಜತೆಗೆ, ಕೋವಿಡ್ ಸೋಂಕಿಗೆ ಸಂಬಂಧಪಟ್ಟಂತೆ ಜಾಗೃತಿ, ಪರೀಕ್ಷೆ, ಟ್ರಯೇಜ್, ಸಿಸಿಸಿ, ಸಹಾಯವಾಣಿ, ವಾರ್ ರೂಮ್ ಕುರಿತು ಅಗತ್ಯ ಮಾಹಿತಿಗಳನ್ನು ಧ್ವನಿವರ್ಧಕದ ಮೂಲಕ ಬಿತ್ತರಿಸಲಾಗುವುದು ಎಂದು ಅಶ್ವತ್ಥನಾರಾಯಣ ತಿಳಿಸಿದರು.

ಇದರ ಜತೆಗೆ, ಸೋಂಕಿತರ ಜತೆ ಪ್ರಾಥಮಿಕ ಮತ್ತು ದ್ವಿತೀಯ ಸ್ತರದ ಸಂಪರ್ಕ ಹೊಂದಿದ್ದವರ ತಪಾಸಣೆಯನ್ನೂ ಉಚಿತವಾಗಿ ನಡೆಸಲಾಗುವುದು. ಆದರೆ, ಇದಕ್ಕಾಗಿ ಯಾರನ್ನೂ ಒತ್ತಾಯ ಪಡಿಸುವುದಿಲ್ಲ ಎಂದು ಅವರು ನುಡಿದರು.

ಕಾರ್ಯಕ್ರಮದಲ್ಲಿ ಬಿಬಿಎಂಪಿ ಪಶ್ಚಿಮ ವಲಯ ಆಯುಕ್ತ ಡಾ.ದೀಪಕ್, ಕೋವಿಡ್ ಉಸ್ತುವಾರಿ ಅಧಿಕಾರಿ ಉಜ್ವಲ್ ಕುಮಾರ್ ಘೋಷ್ ಮತ್ತು ಬಿಬಿಎಂಪಿ ಆರೋಗ್ಯ ವಿಭಾಗದ ಅಧಿಕಾರಿಗಳಾದ ಡಾ.ಮನೋರಂಜನ್ ಹೆಗಡೆ, ಡಾ.ಸುಚೇತಾ, ಡಾ.ಪ್ರಕಾಶ್ ಉಪಸ್ಥಿತರಿದ್ದರು.

ಹಿಂದಿನ ಲೇಖನಮುಕ್ತ ವಿವಿ ಕುಲಪತಿ ಸೇರಿದಂತೆ ಕೆಲವು ಅಧಿಕಾರಿಗಳ ವಿರುದ್ಧ ಎಸಿಬಿಗೆ ದೂರು
ಮುಂದಿನ ಲೇಖನಪ್ರಧಾನಿ ಮೌನದಿಂದ ಚೀನಾದ ಗಡಿ ಆಕ್ರಮಣ ಉತ್ಸಾಹ ಹೆಚ್ಚುತ್ತಿದೆ: ರಾಹುಲ್ ಗಾಂಧಿ