ಕೋಲ್ಕತ್ತಾ : ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸೋತ ಬಳಿಕ ರಾಜ್ಯದಲ್ಲಿ ನಡೆದ ಹಿಂಸಾಚಾರ ಪ್ರಕರಣದ ವಿಚಾರಣೆಗೆ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಲಾಯರ್ ಕೋಟ್ ಧರಿಸಿ ಕಲ್ಕತ್ತಾ ಹೈಕೋರ್ಟ್‌ಗೆ ಹಾಜರಾಗಿ ಗಮನ ಸೆಳೆದಿದ್ದಾರೆ. ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಟಿಎಂಸಿ, ನ್ಯಾಯಾಲಯಕ್ಕೆ ಹಾಜರಾಗುವುದು ಮಮತಾ ಬ್ಯಾನರ್ಜಿಯವರ ನಿರಂತರ ಬದ್ಧತೆಯನ್ನು ಎತ್ತಿ ತೋರಿಸುತ್ತದೆ.
ಅವರು ಬಂಗಾಳದ ಜನರನ್ನು ಅವರ ಅಗತ್ಯದ ಸಮಯದಲ್ಲಿ ಎಂದಿಗೂ ಕೈಬಿಡುವುದಿಲ್ಲ. ಸತ್ಯ, ನ್ಯಾಯ ಮತ್ತು ಸಾಂವಿಧಾನಿಕ ಮೌಲ್ಯಗಳಿಗಾಗಿ ಅವರು ಹೋರಾಟದಲ್ಲಿ ಬದ್ಧರಾಗಿದ್ದಾರೆ. SIR ಅನ್ಯಾಯ, ಬಿಜೆಪಿಯ ಅಶಿಸ್ತಿನ ನಡವಳಿಕೆಯ ವಿರುದ್ಧ ದೃಢವಾಗಿ ನಿಂತಿರುವ ಅವರಂತಹ ನಾಯಕಿ ದೇಶದಲ್ಲಿ ಬೇರೆ ಯಾರೂ ಇಲ್ಲ ಎಂದು ನಿರಂತರವಾಗಿ ಸಾಬೀತುಪಡಿಸುತ್ತಲೇ ಇದ್ದಾರೆ ಎಂದು ಬರೆದುಕೊಂಡಿದೆ.
ಮೇ 4 ರಂದು ಚುನಾವಣಾ ಫಲಿತಾಂಶ ಪ್ರಕಟವಾದಾಗಿನಿಂದ, ರಾಜ್ಯಾದ್ಯಂತ ಅನೇಕ ಜಿಲ್ಲೆಗಳಲ್ಲಿ ಘರ್ಷಣೆಗಳು, ವಿಧ್ವಂಸಕ ಕೃತ್ಯಗಳು, ಬಾಂಬ್ ದಾಳಿಗಳು ನಡೆದಿದ್ದವು. ಈ ದಾಳಿಗೆ ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ ಕಾರಣ ಎಂದು ಎರಡೂ ಪಕ್ಷಗಳು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿವೆ. ಹಿಂಸಾಚಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ಆಪ್ತ ಸಹಾಯಕ ಚಂದ್ರನಾಥ್ ರಥ ಅವರನ್ನು ಮೇ 6 ರಂದು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದರು. ಇದು ರಾಜ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ಹೆಚ್ಚಳಕ್ಕೆ ಕಾರಣವಾಗಿತ್ತು.
ಈ ಹಿಂಸಾಚಾರ ಪ್ರಕರಣದ ವಿರುದ್ಧ ಟಿಎಂಸಿ ನಾಯಕ-ವಕೀಲ ಕಲ್ಯಾಣ್ ಬಂಡೋಪಾಧ್ಯಾಯ ಅವರ ಪುತ್ರ ಶಿರ್ಷಣ್ಯ ಬಂಡೋಪಾಧ್ಯಾಯ ಅವರು ಈ ನ್ಯಾಯಾಲಯದಲ್ಲಿ ಪಿಐಎಲ್ ಅರ್ಜಿ ಸಲ್ಲಿಸಿದ್ದರು. ಚುನಾವಣೋತ್ತರ ಹಿಂಸಾಚಾರದ ಪಿಐಎಲ್ ಅರ್ಜಿಯನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಹೆಚ್.ಸಿ ಸುಜಯ್ ಪಾಲ್ ನೇತೃತ್ವದ ಪೀಠ ವಿಚಾರಣೆ ನಡೆಸುತ್ತಿದೆ. ಪ್ರಕರಣದ ವಿಚಾರಣೆಯ ವೇಳೆ ಹಲವಾರು ಅಂಶಗಳ ಕುರಿತು ಮಮತಾ ಬ್ಯಾನರ್ಜಿ ಪ್ರಶ್ನೆಗಳನ್ನು ಎತ್ತುವ ನಿರೀಕ್ಷೆಯಿದೆ.
















