ಮನೆ ಸುದ್ದಿ ಜಾಲ Mantralayam cylinder blast: ಮಂತ್ರಾಲಯದ ಕಾರ್ಮಿಕರ ಶೆಡ್’ನಲ್ಲಿ ಭೀಕರ ಸ್ಫೋಟ, ತಪ್ಪಿದ ಭಾರೀ ಅನಾಹುತ!

Mantralayam cylinder blast: ಮಂತ್ರಾಲಯದ ಕಾರ್ಮಿಕರ ಶೆಡ್’ನಲ್ಲಿ ಭೀಕರ ಸ್ಫೋಟ, ತಪ್ಪಿದ ಭಾರೀ ಅನಾಹುತ!

0

ರಾಯಚೂರು (ಮೇ.14): ಮಂತ್ರಾಲಯದ ರಾಯರ ಮಠದಲ್ಲಿ ನಡೆಯುತ್ತಿರುವ ಕಟ್ಟಡ ಕಾಮಗಾರಿ ವೇಳೆ ಕಾರ್ಮಿಕರು ವಾಸವಿದ್ದ ತಾತ್ಕಾಲಿಕ ಶೆಡ್’ನಲ್ಲಿ ಭೀಕರ ಗ್ಯಾಸ್ ಸಿಲಿಂಡರ್ ಸ್ಫೋಟ ಸಂಭವಿಸಿದ್ದು, ಐದು ಶೆಡ್ಗಳು ಬೆಂಕಿಗೆ ಆಹುತಿಯಾಗಿವೆ. ಅದೃಷ್ಟವಶಾತ್ ಘಟನೆ ಸಂಭವಿಸಿದ ಸಮಯದಲ್ಲಿ ಕಾರ್ಮಿಕರು ಕೆಲಸಕ್ಕೆ ತೆರಳಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಘಟನೆಯಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಮಂತ್ರಾಲಯದ ರಾಯರ ಮಠದಲ್ಲಿ ನಡೆಯುತ್ತಿರುವ ಕಟ್ಟಡ ಕಾಮಗಾರಿಯಲ್ಲಿ ಟೈಲ್ಸ್ ಅಳವಡಿಕೆ ಕೆಲಸಕ್ಕಾಗಿ ಬಿಹಾರ ರಾಜ್ಯದಿಂದ 25ಕ್ಕೂ ಹೆಚ್ಚು ಕಾರ್ಮಿಕರು ಆಗಮಿಸಿದ್ದರು. ಅವರು ಮಠದ ಸಮೀಪ ನಿರ್ಮಿಸಲಾಗಿದ್ದ ಐದು ತಾತ್ಕಾಲಿಕ ತಗಡಿನ ಶೆಡ್’ಗಳಲ್ಲಿ ವಾಸವಿದ್ದರು. ಬುಧವಾರ ಮಧ್ಯಾಹ್ನ ಎಲ್ಲ ಕಾರ್ಮಿಕರು ಕೆಲಸಕ್ಕೆ ತೆರಳಿದ್ದ ಸಮಯದಲ್ಲಿ ಒಂದು ಶೆಡ್’ನಲ್ಲಿದ್ದ ಗ್ಯಾಸ್ ಸಿಲಿಂಡರ್ ಏಕಾಏಕಿ ಸ್ಫೋಟಗೊಂಡಿದೆ.

ಮೊದಲ ಸಿಲಿಂಡರ್ ಸ್ಫೋಟದ ಬಳಿಕ ಬೆಂಕಿ ವೇಗವಾಗಿ ಇತರ ಶೆಡ್’ಗಳಿಗೂ ವ್ಯಾಪಿಸಿದೆ. ನಂತರ 5 ಕೆಜಿಯ ಮೂರು ಗ್ಯಾಸ್ ಸಿಲಿಂಡರ್ಗಳು ಒಂದರ ಹಿಂದೆ ಒಂದಾಗಿ ಸ್ಫೋಟಗೊಂಡಿದ್ದು, ಸ್ಥಳದಲ್ಲಿ ಭಾರೀ ಆತಂಕ ಉಂಟಾಗಿದೆ. ಸ್ಫೋಟದ ಭಾರೀ ಶಬ್ದ ಕೇಳಿ ಮಂತ್ರಾಲಯಕ್ಕೆ ಆಗಮಿಸಿದ್ದ ಭಕ್ತರು ಹಾಗೂ ಸಾರ್ವಜನಿಕರು ಭಯಭೀತರಾಗಿ ಓಡಿ ದೂರ ಸರಿದಿದ್ದಾರೆ ಎಂದು ತಿಳಿದುಬಂದಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಅಗ್ನಿಶಾಮಕ ಸಿಬ್ಬಂದಿಯ ಸಮಯೋಚಿತ ಕಾರ್ಯಾಚರಣೆಯಿಂದ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದ್ದು, ಇನ್ನಷ್ಟು ಅನಾಹುತ ಸಂಭವಿಸುವುದನ್ನು ತಪ್ಪಿಸಲಾಗಿದೆ. ಅಲ್ಲದೆ, ಉಳಿದಿದ್ದ ಎರಡು ಗ್ಯಾಸ್ ಸಿಲಿಂಡರ್ಗಳನ್ನು ಸುರಕ್ಷಿತವಾಗಿ ಹೊರತೆಗೆದು ಹೆಚ್ಚಿನ ಅಪಾಯ ಸಂಭವಿಸದಂತೆ ಕ್ರಮ ಕೈಗೊಳ್ಳಲಾಗಿದೆ.

ಘಟನಾ ಸ್ಥಳಕ್ಕೆ ರಾಯರ ಮಠದ ಪೀಠಾಧಿಪತಿ ಡಾ. ಸುಬುಧೇಂದ್ರ ತೀರ್ಥರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೆಂಕಿ ಅವಘಡದಿಂದ ಸಂಕಷ್ಟಕ್ಕೆ ಸಿಲುಕಿರುವ ಕಾರ್ಮಿಕರಿಗೆ ಅಗತ್ಯ ನೆರವು ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ. ಐದು ಶೆಡ್ಗಳಲ್ಲಿ ವಾಸವಿದ್ದ 25ಕ್ಕೂ ಹೆಚ್ಚು ಕಾರ್ಮಿಕರಿಗೆ ಪಡಿತರ ಸೇರಿದಂತೆ ಅಗತ್ಯ ವಸ್ತುಗಳನ್ನು ವಿತರಿಸಲಾಗುವುದು ಎಂದು ತಿಳಿಸಿದ್ದಾರೆ.

ಈ ಅವಘಡದಲ್ಲಿ ಕಾರ್ಮಿಕರ ಬಟ್ಟೆ, ಪಡಿತರ ಸಾಮಗ್ರಿ, ಅಡುಗೆ ಸಾಮಗ್ರಿ ಸೇರಿದಂತೆ ಹಲವು ವಸ್ತುಗಳು ಸುಟ್ಟು ಹೋಗಿವೆ. ಸ್ಥಳಕ್ಕೆ ಮಂತ್ರಾಲಯ ಪೊಲೀಸ್ ಠಾಣೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ. ಗ್ಯಾಸ್ ಸಿಲಿಂಡರ್ ಸ್ಫೋಟಕ್ಕೆ ನಿಖರ ಕಾರಣ ಏನು ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.