ಧಾರವಾಡ ಜಿಲ್ಲೆಯ ಕಲಘಟಗಿ ಮೂಲದ ಹರ್ಷಾ ಎಂಟರ್ಪ್ರೈಸಸ್ ಪ್ರೈವೇಟ್ ಲಿಮಿಟೆಡ್ ನಡೆಸಿದ್ದ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಸಾವಿರಾರು ಜನರಿಗೆ ಹಣದ ಆಮಿಷವೊಡ್ಡಿ ಪಂಗನಾಮ ಹಾಕಿದ್ದ ಕಾಸ್ನಿಸ್ ಬ್ರದರ್ಸ್ ಆಸ್ತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡಿದ್ದು, ವಂಚನೆಗೊಳಗಾದವರಿಗೆ ಪರಿಹಾರ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಿದೆ ಎನ್ನಲಾಗಿದೆ.
2016-17ರ ಅವಧಿಯಲ್ಲಿ ಧಾರವಾಡ ಜಿಲ್ಲೆಯ ಕಲಘಟಗಿ ಪಟ್ಟಣವನ್ನು ಕೇಂದ್ರವಾಗಿಸಿಕೊಂಡು ಕಾಸ್ನಿಸ್ ಬ್ರದರ್ಸ್ ಈ ಬೃಹತ್ ವಂಚನೆ ಜಾಲವನ್ನು ನಡೆಸಿದ್ದರು. ‘ಹಣವನ್ನು ದುಪ್ಪಟ್ಟು ಮಾಡಿಕೊಡುತ್ತೇವೆ’ ಎಂದು ಜನರಿಗೆ ಆಮಿಷವೊಡ್ಡಿದ್ದ ಹರ್ಷಾ ಎಂಟರ್ಪ್ರೈಸಸ್, ಜಿಲ್ಲೆಯಾದ್ಯಂತ ಸಾವಿರಾರು ಜನರಿಂದ ಹಣ ಸಂಗ್ರಹಿಸಿತ್ತು. ಜನರಿಂದ ಪಡೆದ ಕೋಟ್ಯಂತರ ರೂಪಾಯಿ ಹಣವನ್ನು ಸಿನಿಮಾ ನಿರ್ಮಾಣಕ್ಕೂ ಬಳಸಲಾಗಿತ್ತು ಎಂಬ ಮಾಹಿತಿ ತನಿಖೆಯಲ್ಲಿ ತಿಳಿದುಬಂದಿದೆ. ಕಂಪನಿಯು ಹಣ ಹಿಂತಿರುಗಿಸದೆ ವಂಚಿಸಿದಾಗ ಆಕ್ರೋಶಗೊಂಡ ಸಾರ್ವಜನಿಕರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಸರ್ಕಾರ ತನಿಖೆಯನ್ನು ಸಿಐಡಿಗೆ ವಹಿಸಿತ್ತು. ಸಿಐಡಿ ಅಧಿಕಾರಿಗಳು ನಡೆಸಿದ ಸುದೀರ್ಘ ತನಿಖೆಯಲ್ಲಿ ಹರ್ಷಾ ಎಂಟರ್ಪ್ರೈಸಸ್ ಸುಮಾರು 77 ಕೋಟಿ ರೂಪಾಯಿಗೂ ಅಧಿಕ ಹಣವನ್ನು ವಂಚಿಸಿರುವ ದಾಖಲೆಗಳು ಲಭ್ಯವಾಗಿವೆ ಎನ್ನಬಹುದು.
ನೂರಾರು ಜನಸಾಮಾನ್ಯರು ತಮ್ಮ ಜೀವಮಾನದ ಉಳಿತಾಯವನ್ನು ಈ ಕಂಪನಿಯಲ್ಲಿ ಹೂಡಿಕೆ ಮಾಡಿ ಕಳೆದುಕೊಂಡಿದ್ದರು. ಸದ್ಯ ಸಿಐಡಿ ವರದಿಯನ್ನಾಧರಿಸಿ ಸರ್ಕಾರವು ಕಾಸ್ನಿಸ್ ಬ್ರದರ್ಸ್ ಅವರ ಸ್ಥಿರಾಸ್ತಿ ಹಾಗೂ ಚರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಆದೇಶಿಸಿದೆ. ಅರ್ಜಿ ಸಲ್ಲಿಸಲು ಜಿಲ್ಲಾಡಳಿತವು ಒಂದು ತಿಂಗಳ ಕಾಲಾವಕಾಶ (ಏ.27ರಿಂದ ಮೇ 26ರವರೆಗೆ) ನೀಡಿದೆ ಎನ್ನಲಾಗುತ್ತಿದೆ.
ಇದರಿಂದ ಪರಿಹಾರದ ನಿರೀಕ್ಷೆಯಲ್ಲಿ ನೂರಾರು ಜನರು ಈಗಾಗಲೇ ಅಗತ್ಯ ದಾಖಲೆಗಳೊಂದಿಗೆ ಜಿಲ್ಲಾಡಳಿತದ ಕಚೇರಿ ಮುಂದೆ ಸಾಲುಗಟ್ಟಿ ನಿಂತು ಅರ್ಜಿ ಸಲ್ಲಿಸುತ್ತಿದ್ದಾರೆ. ದಾಖಲೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿದ ನಂತರ ಅರ್ಹ ಸಂತ್ರಸ್ತರಿಗೆ ಹಂತ ಹಂತವಾಗಿ ಪರಿಹಾರದ ಹಣವನ್ನು ಬಿಡುಗಡೆ ಮಾಡಲಾಗುವುದು ಎಂದು ಸರ್ಕಾರ ತಿಳಿಸಿದೆ. ಹತ್ತು ವರ್ಷಗಳ ಸುದೀರ್ಘ ಹೋರಾಟದ ನಂತರ ವಂಚಿತರಿಗೆ ಈಗ ನ್ಯಾಯ ಸಿಗುವ ಭರವಸೆ ಮೂಡಿದೆ ಎನ್ನಬಹುದು.
















