ಮನೆ ಕಾನೂನು ವೈದ್ಯಕೀಯ ಮಂಡಳಿಯು ಅಭ್ಯರ್ಥಿ ಅಂಗವೈಕಲ್ಯ ನಿರ್ಧರಿಸಬಹುದೇ ವಿನಾ ಕೋರ್ಸ್‌ ಗೆ ಸೇರಲು ಇರುವ ಅರ್ಹತೆಯನ್ನಲ್ಲ: ಹೈಕೋರ್ಟ್‌

ವೈದ್ಯಕೀಯ ಮಂಡಳಿಯು ಅಭ್ಯರ್ಥಿ ಅಂಗವೈಕಲ್ಯ ನಿರ್ಧರಿಸಬಹುದೇ ವಿನಾ ಕೋರ್ಸ್‌ ಗೆ ಸೇರಲು ಇರುವ ಅರ್ಹತೆಯನ್ನಲ್ಲ: ಹೈಕೋರ್ಟ್‌

0

ವೈದ್ಯಕೀಯ ಮಂಡಳಿಯು ವಿಶೇಷ ಚೇತನ ಅಭ್ಯರ್ಥಿಯ ಅಂಗವೈಕಲ್ಯ ಪ್ರಮಾಣವನ್ನು ನಿರ್ಧರಿಸಬೇಕಿದ್ದು, ವೈದ್ಯಕೀಯ ಪದವಿ ಪ್ರವೇಶಕ್ಕೆ ಅರ್ಹರಾಗಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಆದೇಶಿಸಿದೆ.

ಶೇ.50ರಷ್ಟು ಅಂಗವೈಕಲ್ಯ ಹೊಂದಿರುವ ನೀಟ್ ಅಭ್ಯರ್ಥಿಯಾದ ಚಿಕ್ಕಮಗಳೂರಿನ ಸಾದರಹಳ್ಳಿಯ ಡಾ. ಎಸ್ ಎನ್ ಪೂಜಾ ಅವರು ಸ್ನಾತಕೋತ್ತರ ವೈದ್ಯಕೀಯ ಪದವಿ ಪ್ರವೇಶಕ್ಕೆ ಅರ್ಹರಾಗಿಲ್ಲ ಎಂಬುದಾಗಿ ನಿರ್ಧರಿಸಿ ಪ್ರಮಾಣ ಪತ್ರ ನೀಡಿದ್ದ ವೈದ್ಯಕೀಯ ಮಂಡಳಿಯ ಕ್ರಮವನ್ನು ನ್ಯಾಯಮೂರ್ತಿಗಳಾದ ಜಿ ನರೇಂದರ್ ಮತ್ತು ವಿಜಯಕುಮಾರ್‌ ಎ. ಪಾಟೀಲ್‌ ಅವರ ನೇತೃತ್ವದ ವಿಭಾಗೀಯ ಪೀಠ ಅಸಿಂಧುಗೊಳಿಸಿದೆ.

“ವೈದ್ಯಕೀಯ ಮಂಡಳಿಯು ಕೇವಲ ಅಂಗವೈಕಲ್ಯ ಪ್ರಮಾಣ ಪರಿಶೀಲಿಸಿ ನಿರ್ಣಯಿಸಬಹದಷ್ಟೇ. ಅದನ್ನು ಹೊರತುಪಡಿಸಿ ಅಭ್ಯರ್ಥಿಯು ವೈದ್ಯಕೀಯ ಪದವಿ ಅಧ್ಯಯನ ಮಾಡಲು, ಪ್ರವೇಶ ಪಡೆಯಲು ಅರ್ಹತೆ ಹೊಂದಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಲು ಸಾಧ್ಯವಿಲ್ಲ. ಅದರಂತೆ ಪ್ರಕರಣದಲ್ಲಿ ವೈದ್ಯಕೀಯ ಮಂಡಳಿಯು ವಿದ್ಯಾರ್ಥಿನಿ ವೈದ್ಯಕೀಯ ಪದವಿ ಕೋರ್ಸ್ ಅಧ್ಯಯನ ಮಾಡಲು ಅರ್ಹರಾಗಿಲ್ಲ ಎಂದು ನಿರ್ಧಾರ ಮಾಡಿರುವುದು ಸಂಪೂರ್ಣವಾಗಿ ಅಸಮರ್ಥನೀಯ ಮತ್ತು ಅಕ್ರಮ” ಎಂದು ಪೀಠ ಹೇಳಿದೆ.

“ವೈದ್ಯಕೀಯ ಮಂಡಳಿಯು ಆಯ್ಕೆ ಪ್ರಾಧಿಕಾರವಲ್ಲ. ಹೀಗಾಗಿ, ಅಭ್ಯರ್ಥಿಯ ಪ್ರವೇಶಾತಿಯ ಅರ್ಹತೆಯ ಬಗ್ಗೆ ಪ್ರಮಾಣ ಪತ್ರ ನೀಡುವಂತಿಲ್ಲ. ಪ್ರವೇಶದ ಅರ್ಹತೆಯ ಬಗ್ಗೆ ಸಕ್ಷಮ ಪ್ರಾಧಿಕಾರ ಅಂದರೆ ಆಯ್ಕೆ ಪ್ರಾಧಿಕಾರ ನಿರ್ಧರಿಸುವ ಅಗತ್ಯವಿದೆ. ವೈದ್ಯಕೀಯ ಮಂಡಳಿಯ ತನ್ನ ವ್ಯಾಪ್ತಿ ಮೀರಿ ನಡೆದುಕೊಂಡಿದೆ. ಈ ರೀತಿ ನಡೆದುಕೊಳ್ಳಲು ಅವಕಾಶ ಇಲ್ಲ. ಅಂಗವೈಕಲ್ಯದ ಪ್ರಮಾಣ ಆಧರಿಸಿ ಅಂಗವಿಕಲರು ಕಾನೂನು ಪ್ರಕಾರ ಪಡೆಯಬೇಕಾದ ಸೌಲಭ್ಯ ಪಡೆದುಕೊಳ್ಳಲು ಅರ್ಹರಿರುತ್ತಾರೆ” ಎಂದು ಪೀಠ ಕಟುವಾಗಿ ನುಡಿದಿದೆ.

“ಅಂತಿಮವಾಗಿ ಅರ್ಜಿದಾರು ಶೇ.೫೦ರಷ್ಟು ಅಂಗವೈಕಲ್ಯ ಹೊಂದಿರುವುದರಿಂದ ಸಹಜ ಮತ್ತು ಕಾನೂನುಬದ್ಧವಾಗಿ ವೈದ್ಯಕೀಯ ಪದವಿ ಆಯ್ಕೆ ಪ್ರಕ್ರಿಯೆಯಲ್ಲಿ ಪರಿಗಣಿಸಲ್ಪಡಲು ಅರ್ಹರಿದ್ದಾರೆ. ಅದರಂತೆ ಪೂಜಾ ಅವರು ವೈದ್ಯಕೀಯ ಕೋರ್ಸ್‌ ಗೆ ಅಂಗವಿಕಲ ಕೋಟಾದಡಿ ಪ್ರವೇಶ ಪಡೆಯುವ ಅರ್ಹತೆ ಬಗ್ಗೆ ರಾಷ್ಟ್ರೀಯ ವೈದ್ಯಕೀಯ ಆಯೋಗ ಮತ್ತು ನವದೆಹಲಿಯ ವೈದ್ಯಕೀಯ ಪರಿಷತ್ತು ಸಮಿತಿ ಪರಿಶೀಲಿಸಬೇಕು ಹಾಗೂ ಪರಿಗಣಿಸಬೇಕು. ಆ ವೇಳೆ ಅಂಗವಿಕಲತೆ ಪ್ರಮಾಣದ ಮೇಲೆ ಅರ್ಜಿದಾರರು ವೈದ್ಯಕೀಯ ಕೋರ್ಸ್ ಅಧ್ಯಯನ ಮಾಡಲು ಅರ್ಹರಾಗಿಲ್ಲ ಎಂಬ ವೈದ್ಯಕೀಯ ಮಂಡಳಿ ನಿರ್ಧಾರವನ್ನು ಪರಿಗಣಿಸಬಾರದು. ಅಂಗವಿಕಲ ಕೋಟಾದಡಿ ಪ್ರವೇಶ ಪಡೆಯಲು ಅರ್ಜಿದಾರರು ಅರ್ಹರಾಗಿದ್ದರೆ, ಮುಂದಿನ ಪ್ರಕ್ರಿಯೆ ಪೂರ್ಣಗೊಳಿಸಬೇಕು” ಎಂದು ಹೈಕೋರ್ಟ್ ನಿರ್ದೇಶಿಸಿದೆ.

ಪ್ರಕರಣದ ಹಿನ್ನೆಲೆ: ಅಂಗವಿಕಲರಾದ ಪೂಜಾ ಅವರು ನೀಟ್ ಮೂಲಕ ಸ್ನಾತಕೋತ್ತರ ವೈದ್ಯಕೀಯ ಪದವಿ ಪ್ರವೇಶಕ್ಕೆ ಅಂಗವಿಕಲ ಕೋಟಾದಡಿ ಅರ್ಜಿ ಸಲ್ಲಿಸಿದ್ದರು. ವೈದ್ಯಕೀಯ ಪರಿಷತ್ತು ಸಮಿತಿ (ಎನ್‌ ಎಂಸಿ) ಸೂಚನೆ ಮೇರೆಗೆ ಚೆನ್ನೈನ ಮದ್ರಾಸ್ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಗಾಗಿದ್ದರು. ಪರೀಕ್ಷೆ ನಡೆಸಿದ್ದ ವೈದ್ಯಕೀಯ ಮಂಡಳಿ ಅಭ್ಯರ್ಥಿಯು ಶೇ. 50ರಷ್ಟು ಅಂಗವೈಕಲ್ಯ ಹೊಂದಿದ್ದು, ಎನ್‌ ಎಂಸಿ ನಿಯಮಗಳ ಪ್ರಕಾರ ವೈದ್ಯಕೀಯ ಕೋರ್ಸ್ ಅಧ್ಯಯನ ಮಾಡಲು ಅರ್ಹರಾಗಿಲ್ಲ ಎಂದು ನಿರ್ಧರಿಸಿ ಪ್ರಮಾಣ ಪತ್ರ ನೀಡಿತ್ತು. ಅದನ್ನು ಪ್ರಶ್ನಿಸಿ ವಿದ್ಯಾರ್ಥಿನಿ ಪೂಜಾ ಹೈಕೋರ್ಟ್‌ ಗೆ ಅರ್ಜಿ ಸಲ್ಲಿಸಿದ್ದರು.

ಹಿಂದಿನ ಲೇಖನಕಾಂಗ್ರೆಸ್ ಸರ್ಕಾರ ನೂರು ದಿನಗಳಲ್ಲಿ ಎಡವಿದ್ದೇ ಹೆಚ್ಚು: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಟೀಕೆ
ಮುಂದಿನ ಲೇಖನರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಯುವಕರನ್ನು  ಆಸ್ಪತ್ರೆಗೆ ಸಾಗಿಸಲು ವ್ಯವಸ್ಥೆ: ಮಾನವೀಯತೆ ಮೆರೆದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್