ಮನೆ ಸುದ್ದಿ ಜಾಲ Miracle: ರಾತ್ರಿ ಮುಚ್ಚಿಟ್ಟ ಪಾದುಕೆ ಬೆಳಗ್ಗೆ ಕೆಸರಾಗೋದು ಹೇಗೆ? ಬಿಳಿಗಿರಿ ರಂಗನಾಥಸ್ವಾಮಿ ಜಾತ್ರೆಯ ಅದ್ಭುತ ರಹಸ್ಯ

Miracle: ರಾತ್ರಿ ಮುಚ್ಚಿಟ್ಟ ಪಾದುಕೆ ಬೆಳಗ್ಗೆ ಕೆಸರಾಗೋದು ಹೇಗೆ? ಬಿಳಿಗಿರಿ ರಂಗನಾಥಸ್ವಾಮಿ ಜಾತ್ರೆಯ ಅದ್ಭುತ ರಹಸ್ಯ

0

ಚಾಮರಾಜನಗರ: ಜಗತ್ತಿನಲ್ಲಿ Scienceಗೂ ಅರ್ಥವಾಗದಂತಹ ಹಲವಾರು ಅಚ್ಚರಿಯ ಘಟನೆಗಳು ಆಗುತ್ತಲೇ ಇವೆ. ಕೆಲವೊಂದು ಸಂಗತಿಗಳು ನಮ್ಮ ಸಾಮಾನ್ಯ ಬುದ್ಧಿಗೆ ಸವಾಲು ಹಾಕುವಂತಿರುತ್ತವೆ. ಅಂತಹದ್ದೇ ಒಂದು ವಿಚಿತ್ರ ಘಟನೆ ಚಾಮರಾಜನಗರ ಜಿಲ್ಲೆಯ ಯಳಂದೂರು ಸಮೀಪದ ಬಿಳಿಗಿರಿ ರಂಗನಾಥ ಬೆಟ್ಟದಲ್ಲಿ ನಡೆಯುತ್ತದೆ.

ಇಲ್ಲಿ ನಡೆಯುವ ಬ್ರಹ್ಮ ರಥೋತ್ಸವದ ಸಂದರ್ಭದಲ್ಲಿ ಕಾಣಿಸಿಕೊಳ್ಳುವ ಪಾದುಕೆಯ ಪವಾಡ ಭಕ್ತರಲ್ಲಿ ಅಪಾರ ಕುತೂಹಲ ಮತ್ತು ಭಕ್ತಿಭಾವ ಮೂಡಿಸುತ್ತದೆ. ಸೋಲಿಗ ಸಮುದಾಯದ ಆರಾಧ್ಯ ದೈವವಾದ ಬಿಳಿಗಿರಿ ರಂಗನಾಥಸ್ವಾಮಿ ಜಾತ್ರೆ ಪ್ರತೀ ವರ್ಷ ಸಂಪ್ರದಾಯಬದ್ಧವಾಗಿ ಹಾಗೂ ವೈಭವದಿಂದ ನಡೆಯುತ್ತದೆ. ಈ ಜಾತ್ರೆಯಲ್ಲಿ ಸಾವಿರಾರು ಭಕ್ತರು ಭಾಗವಹಿಸಿ ದೇವರ ದರ್ಶನ ಪಡೆದು ಪುಣ್ಯ ಸಂಪಾದಿಸುತ್ತಾರೆ.

ಈ ಜಾತ್ರೆಯ ಪ್ರಮುಖ ಆಕರ್ಷಣೆ ಪಾದುಕೆಯ ಸಮರ್ಪಣೆ. ಅಗ್ರಹಾರ ಹಾಗೂ ಬೂದಿ ತಿಟ್ಟು ಗ್ರಾಮದ ಚಮ್ಮಾರರು ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಿ ಒಂದು ತಿಂಗಳ ಕಾಲ ಮಡಿಯಲ್ಲಿ ಇದ್ದು, ಕಾಡಿಗೆ ತೆರಳಿ ಪ್ರಾಣಿ ಚರ್ಮದಿಂದ ಸುಮಾರು ಎರಡು ಅಡಿ ಉದ್ದದ ಪಾದುಕೆಗಳನ್ನು ತಯಾರಿಸುತ್ತಾರೆ. ಈ ಪಾದುಕೆಗಳನ್ನು ಸಂಪ್ರದಾಯಬದ್ಧವಾಗಿ ಮೆರವಣಿಗೆಯ ಮೂಲಕ ದೇವಾಲಯಕ್ಕೆ ತಂದು ಸಮರ್ಪಿಸಲಾಗುತ್ತದೆ.

ಆದರೆ ಈ ಸಂಪ್ರದಾಯದ ವಿಶೇಷತೆ ರಾತ್ರಿ ವೇಳೆ ಕಾಣಿಸಿಕೊಳ್ಳುತ್ತದೆ. ಜಾತ್ರೆಯ ದಿನ ಪಾದುಕೆಗಳನ್ನು ದೇವರ ಸನ್ನಿಧಿಯಲ್ಲಿ ಇಟ್ಟು ದೇವಾಲಯವನ್ನು ಮುಚ್ಚಲಾಗುತ್ತದೆ. ಆ ಬಳಿಕ ಬೆಳಗಿನವರೆಗೆ ದೇವಸ್ಥಾನದ ಸುತ್ತಮುತ್ತ ಯಾರೂ ಇರೋದಿಲ್ಲ. ಆದರೂ ಬೆಳಿಗ್ಗೆ ದೇವಾಲಯ ತೆರೆದಾಗ ಪಾದುಕೆಗಳ ಮೇಲೆ ಮಣ್ಣು, ಕೆಸರು ಮತ್ತು ಮುಳ್ಳುಗಳು ಅಂಟಿಕೊಂಡಿರುವುದು ಕಂಡುಬರುತ್ತದೆ.

ಈ ಬಗ್ಗೆ ಭಕ್ತರ ನಂಬಿಕೆ ಏನೆಂದರೆ, ರಾತ್ರಿ ವೇಳೆ ರಂಗನಾಥಸ್ವಾಮಿ ಬೇಟೆಗೆ ತೆರಳುವಾಗ ಈ ಪಾದುಕೆಗಳನ್ನು ಧರಿಸುತ್ತಾರೆ ಎನ್ನುವುದು. ಕಾಲಕ್ರಮೇಣ ಈ ಪಾದುಕೆಗಳು ಸ್ವಯಂ ಸವೆದು ಹೋಗುತ್ತಿರುವುದನ್ನು ಭಕ್ತರು ಪವಾಡವೆಂದು ನಂಬುತ್ತಾರೆ. ದೇವರ ಜೊತೆಗೆ ಈ ಪಾದುಕೆಗಳಿಗೂ ಪ್ರತಿದಿನ ಪೂಜೆ ನಡೆಯುತ್ತದೆ ಎಂಬುದು ಮತ್ತೊಂದು ವಿಶೇಷ.

ಮೂರು ವರ್ಷಕ್ಕೊಮ್ಮೆ ಪಾದುಕೆಗಳನ್ನು ಬದಲಾಯಿಸುವ ಸಂಪ್ರದಾಯವೂ ಇಲ್ಲಿದೆ. ಜಾತ್ರೆಯ ಸಂದರ್ಭದಲ್ಲಿ ಈ ಪಾದುಕೆಗಳನ್ನು ಭಕ್ತರ ತಲೆಯ ಮೇಲೆ ಇಟ್ಟು ಆಶೀರ್ವಾದ ನೀಡಲಾಗುತ್ತದೆ. ಈ ಆಶೀರ್ವಾದ ಪಡೆಯಲು ಭಕ್ತರು ಅಪಾರ ಸಂಖ್ಯೆಯಲ್ಲಿ ಸಾಲಿನಲ್ಲಿ ನಿಂತಿರುವುದು ಕಂಡುಬರುತ್ತದೆ.

ಇಂದು ನಡೆದ ಬ್ರಹ್ಮ ರಥೋತ್ಸವದಲ್ಲಿ ಉತ್ಸವ ಮೂರ್ತಿಯನ್ನು ಭವ್ಯ ರಥದಲ್ಲಿ ಏರಿಸಿ ಮೆರವಣಿಗೆ ನಡೆಸಲಾಯಿತು. ರಥದ ಸುತ್ತಲೂ ದಾಸರು ಜಾಗಟೆ ನಾದ ಮಾಡುತ್ತಾ ಸಾಗಿದ್ದು ಜಾತ್ರೆಗೆ ವಿಶಿಷ್ಟ ಮೆರುಗು ನೀಡಿತು. ಭಕ್ತರ ಜಯಘೋಷ, ಜಾಗಟೆ ಧ್ವನಿ ಹಾಗೂ ಪೂಜಾ ವಿಧಿವಿಧಾನಗಳ ನಡುವೆ ಜಾತ್ರೆ ಭಕ್ತಿ ಸಂಭ್ರಮದಲ್ಲಿ ನೆರವೇರಿತು.

ಶತಮಾನಗಳ ಸಂಪ್ರದಾಯ, ಜನಪದ ನಂಬಿಕೆ ಮತ್ತು ಭಕ್ತಿಭಾವಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಬಿಳಿಗಿರಿ ರಂಗನಾಥ ಬೆಟ್ಟದ ಈ ಬ್ರಹ್ಮ ರಥೋತ್ಸವ ಭಕ್ತರ ಮನಸ್ಸಿನಲ್ಲಿ ಅಳಿಯದ ಗುರುತು ಮೂಡಿಸಿದೆ.