ಮನೆ ಕಾನೂನು ಹೃದಯ ಚಿಕಿತ್ಸೆಗೆ ಬೆಂಗಳೂರಿಗೆ ತೆರಳಲು ಮುರುಘಾ ಶ್ರೀ ಕೋರಿಕೆ: ಆದೇಶ ಕಾಯ್ದಿರಿಸಿದ ನ್ಯಾಯಾಲಯ

ಹೃದಯ ಚಿಕಿತ್ಸೆಗೆ ಬೆಂಗಳೂರಿಗೆ ತೆರಳಲು ಮುರುಘಾ ಶ್ರೀ ಕೋರಿಕೆ: ಆದೇಶ ಕಾಯ್ದಿರಿಸಿದ ನ್ಯಾಯಾಲಯ

0

ಪೊಕ್ಸೊ ಪ್ರಕರಣದಲ್ಲಿ ಬಂಧಿತರಾಗಿರುವ ಡಾ. ಶಿವಮೂರ್ತಿ ಮುರುಘಾ ಶರಣರು ಚಿತ್ರದುರ್ಗದ ಮುರುಘಾ ಮಠಕ್ಕೆ ಸಂಬಂಧಿಸಿದ ಚೆಕ್ಗಳಿಗೆ ಸಹಿ ಹಾಕುವುದಕ್ಕೆ ಅವಕಾಶ ಮಾಡಿಕೊಡಲು ವಿನಂತಿಸಿ ಹಾಗೂ ಹೃದಯ ಸಂಬಂಧಿ ಸಮಸ್ಯೆಗೆ ಚಿಕಿತ್ಸೆ ಪಡೆಯಲು ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಗೆ ತೆರಳಲು ಕೋರಿ ಸಲ್ಲಿಕೆಯಾಗಿದ್ದ ಅರ್ಜಿ ಕುರಿತು ವಾದ ಶುಕ್ರವಾರ ಪೂರ್ಣಗೊಂಡಿದ್ದು, ವಿಶೇಷ ನ್ಯಾಯಾಲಯವು ಸೆಪ್ಟೆಂಬರ್ 19ಕ್ಕೆ ಆದೇಶ ಕಾಯ್ದಿರಿಸಿದೆ.

ಆರೋಪಿ ಸ್ವಾಮೀಜಿ ಅವರ ಪರವಾಗಿ ಸಲ್ಲಿಕೆಯಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ವಾದ-ಪ್ರತಿವಾದ ಆಲಿಸಿದ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಬಿ ಕೆ ಕೋಮಲಾ ಅವರು ತೀರ್ಪು ಕಾಯ್ದಿರಿಸಿದ್ದಾರೆ.

ಮುರುಘಾ ಶರಣರ ಪರವಾಗಿ ವಾದಿಸಿದ ವಕೀಲರಾದ ಕೆ ಎನ್ ವಿಶ್ವನಾಥಯ್ಯ ಅವರು “ಮಠಕ್ಕೆ ಸೇರಿದ ಅನೇಕ ಸಂಸ್ಥೆಗಳಿದ್ದು, ಅಲ್ಲಿ ಕೆಲಸ ಮಾಡುವ ಸಿಬ್ಬಂದಿ ಮತ್ತು ಉದ್ಯೋಗಿಗಳಿಗೆ ಒಂದು ತಿಂಗಳ ವೇತನ ಪಾವತಿಸಲಾಗಿಲ್ಲ. ಮಠಕ್ಕೆ ಸೇರಿದ ವೈದ್ಯಕೀಯ ಆಸ್ಪತ್ರೆಗೆ ಅಗತ್ಯವಾದ ಔಷಧ ಮತ್ತು ಇತರೆ ವಸ್ತುಗಳನ್ನು ಖರೀದಿಸಲು ಚೆಕ್ಗೆ ಸ್ವಾಮೀಜಿ ಅವರ ಸಹಿ ಅಗತ್ಯವಾಗಿದೆ. ಹೀಗಾಗಿ, ಚೆಕ್ಗೆ ಸಹಿ ಮಾಡಲು ಅವರಿಗೆ ಅನುಮತಿಸಬೇಕು” ಎಂದು ಕೋರಿದರು.

ಇದಕ್ಕೆ ಆಕ್ಷೇಪಿಸಿದ ಸರ್ಕಾರಿ ಅಭಿಯೋಜಕರಾದ ಕೆ ಬಿ ನಾಗವೇಣಿ ಅವರು “ಮಠದ ಟ್ರಸ್ಟ್ನಲ್ಲಿ ಆರೋಪಿ ಸ್ವಾಮೀಜಿ ಅವರು ಏಕೈಕ ಟ್ರಸ್ಟಿಯಾಗಿದ್ದಾರೆ. ಮಠದ ಎಲ್ಲಾ ಸಂಸ್ಥೆಗಳು ಟ್ರಸ್ಟ್ ಅಡಿ ಬರುತ್ತವೆ. ಟ್ರಸ್ಟ್ಗೆ ಸಂಬಂಧಿಸಿದ ದಾಖಲೆಗಳಿಗೆ ಸ್ವಾಮೀಜಿ ಸಹಿ ಮಾಡಲು ಅನುಮತಿಸುವ ಅಧಿಕಾರ ವ್ಯಾಪ್ತಿ ಈ ನ್ಯಾಯಾಲಯಕ್ಕೆ ಇಲ್ಲ. ಕ್ರಿಮಿನಲ್ ಪ್ರಕರಣಗಳ ವಿಚಾರಣೆಗೆ ಇರುವ ವಿಶೇಷ ನ್ಯಾಯಾಲಯ ಇದಾಗಿದ್ದು, ಅರ್ಜಿದಾರರು ತಮ್ಮ ಕೋರಿಕೆಯನ್ನು ಪ್ರತ್ಯೇಕವಾಗಿ ಪ್ರಧಾನ ಜಿಲ್ಲಾ ನ್ಯಾಯಾಧೀಶರ ಮುಂದೆ ಮಂಡಿಸಬಹುದು” ಎಂದರು.

ಮುಂದುವರಿದು, “ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಹೃದಯ ತಪಾಸಣಾ ಕೇಂದ್ರವಿದೆ. ಅಲ್ಲಿ, ಹೃದಯ ತಜ್ಞರೂ ಇದ್ದಾರೆ. ಆದರೆ, ಕರೋನರಿ ಆಂಜಿಯೋಗ್ರಾಮ್ ಮಾಡುವ ಸರ್ಜನ್ ಇಲ್ಲ” ಎಂದು ವಿವರಿಸಿ, ದಾಖಲೆ ಸಲ್ಲಿಸಿದರು. ಕರೋನರಿ ಆಂಜಿಯೋಗ್ರಾಮ್ ಚಿಕಿತ್ಸೆ ಪಡೆಯಲು ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಗೆ ತೆರಳಲು ಅನುಮತಿಸಬೇಕು ಎಂದು ಅರ್ಜಿದಾರರು ಕೋರಿದ್ದರು. ಇದಕ್ಕೆ ನಿರಾಕರಿಸಿದ್ದ ನ್ಯಾಯಾಲಯವು ಸಮೀಪದಲ್ಲಿ ಕರೋನರಿ ಆಂಜಿಯೋಗ್ರಾಮ್ ಚಿಕಿತ್ಸೆ ಸಿಗುವ ಆಸ್ಪತ್ರೆಗಳ ಬಗ್ಗೆ ಮಾಹಿತಿ ನೀಡುವಂತೆ ಪ್ರಾಸಿಕ್ಯೂಷನ್ಗೆ ಸೆಪ್ಟೆಂಬರ್ 9ರಂದು ಸೂಚಿಸಿತ್ತು.

ಉಳಿದಂತೆ, ಮುರುಘಾ ಶರಣರು ಮತ್ತು ಎರಡನೇ ಆರೋಪಿ ಹಾಗೂ ಅಕ್ಕಮಹಾದೇವಿ ಹಾಸ್ಟೆಲ್ ವಾರ್ಡನ್ ಎಸ್ ರಶ್ಮಿ ಅವರ ಜಾಮೀನು ಮನವಿಗೆ ಸಂಬಂಧಿಸಿದಂತೆ ನಾಳೆ ವಾದಿಸಲು ಪ್ರಾಸಿಕ್ಯೂಷನ್ಗೆ ನ್ಯಾಯಾಲಯ ನಿರ್ದೇಶಿಸಿದೆ.

ಹಿಂದಿನ ಲೇಖನಕಲಬುರಗಿಯಲ್ಲಿ ಜವಳಿ ‌ಪಾರ್ಕ್‌ಗೆ ಶೀಘ್ರ ಅಡಿಗಲ್ಲು: ಸಿಎಂ ಬೊಮ್ಮಾಯಿ
ಮುಂದಿನ ಲೇಖನಪ್ರಧಾನಿ ನರೇಂದ್ರ ಮೋದಿಗೆ ರಷ್ಯಾ ಅಧ್ಯಕ್ಷ ಪುಟಿನ್ ಶುಭ ಹಾರೈಕೆ