ಇಂದೋರ್: ನರ್ಮದಾ-ಕ್ಷಿಪ್ರಾ ಪೈಪ್‌ಲೈನ್ ಏಕಾಏಕಿ ಸ್ಫೋಟಗೊಂಡ ಪರಿಣಾಮ ನೀರು ಮುಗಿಲೆತ್ತರಕ್ಕೆ ಚಿಮ್ಮಿದ ಘಟನೆ ಮಧ್ಯಪ್ರದೇಶದ ಇಂದೋರ್-ಖಂಡ್ವಾ ರಸ್ತೆಯಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪೈಪ್‌ಲೈನ್ ಒಡೆದ ಪರಿಣಾಮ ಅಪಾರ ಪ್ರಮಾಣದ ನೀರು ರಸ್ತೆಯ ಮೇಲೆ ಹರಿದು ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಯಿತು. ಇದರಿಂದ ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.
ಸ್ಫೋಟದ ನಂತರ ನೀರು ಸುತ್ತಮುತ್ತಲಿನ ಪ್ರದೇಶಗಳಿಗೆ ಹರಡಿದ್ದು, ಹಲವಾರು ಮನೆಗಳಿಗೆ ನುಗ್ಗಿ ಮನೆಗಳಲ್ಲಿದ್ದ ವಸ್ತುಗಳಿಗೆ ಹಾನಿ ಉಂಟು ಮಾಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಸ್ಥಳೀಯ ನಿವಾಸಿಗಳ ಮಾಹಿತಿ ಪ್ರಕಾರ, ಈ ಪೈಪ್‌ಲೈನ್ ಓಂಕಾರೇಶ್ವರದಿಂದ ಉಜ್ಜಯಿನಿವರೆಗೆ ನೀರು ಪೂರೈಸುವ ನರ್ಮದಾ-ಕ್ಷಿಪ್ರಾ ಯೋಜನೆಯ ಭಾಗವಾಗಿದೆ. ಪೈಪ್‌ಲೈನ್ ಸ್ಫೋಟಗೊಂಡ ನಂತರ ಸುಮಾರು ಒಂದು ಗಂಟೆ ಕಾಲ ನೀರಿನ ಹರಿವು ತೀವ್ರವಾಗಿತ್ತು.
ಬೆಳಗ್ಗೆ ಸುಮಾರು 8.30ರ ವೇಳೆಗೆ ನೀರು ಸರಬರಾಜು ಸ್ಥಗಿತಗೊಳಿಸಿದ ಬಳಿಕ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, ನೀರಿನ ಹರಿವು ಕಡಿಮೆಯಾಗಿದೆ.
ಘಟನೆಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ. ಪೈಪ್‌ಲೈನ್ ಸ್ಫೋಟಕ್ಕೆ ನಿಖರ ಕಾರಣ ಏನು ಎಂಬುದರ ಕುರಿತು ಸಂಬಂಧಿತ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
















