ಅಟ್ಲಾಂಟಾ: ಮದುವೆಯಾದ ಕೆಲವೇ ಗಂಟೆಗಳಲ್ಲೇ ನವದಂಪತಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿ ಭಾರತೀಯ ಮೂಲದ ವರ ಮೃತಪಟ್ಟಿದ್ದು, ವಧು ಗಂಭೀರ ಗಾಯಗಳ ನಡುವೆಯೂ ಬದುಕುಳಿದಿರುವ ಹೃದಯವಿದ್ರಾವಕ ಘಟನೆ ಅಮೆರಿಕದ ಜಾರ್ಜಿಯಾದಲ್ಲಿ ನಡೆದಿದೆ.
ಅಪಘಾತದಲ್ಲಿ ಭಾರತೀಯ ಮೂಲದ 25 ವರ್ಷದ ಡೇವ್ ಫಿಜಿ ಮೃತಪಟ್ಟಿದ್ದಾರೆ. ಅವರು ಡೆಲ್ಟಾ ಏರ್ಲೈನ್ಸ್ನಲ್ಲಿ ಪೈಲಟ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಅವರ ಪತ್ನಿ ಜೆಸ್ನಿ ಗಂಭೀರ ಗಾಯಗೊಂಡಿದ್ದರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕೇರಳ ಮೂಲದ ಈ ದಂಪತಿಯ ವಿವಾಹ ಶುಕ್ರವಾರ ಜಾರ್ಜಿಯಾದ ಡಾಸನ್ವಿಲ್ಲೆಯಲ್ಲಿರುವ ‘ದಿ ರೆವೆರೆ’ ಕಲ್ಯಾಣ ಮಂಟಪದಲ್ಲಿ ಕುಟುಂಬ ಸದಸ್ಯರು ಮತ್ತು ಆತ್ಮೀಯರ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿತ್ತು. ಮದುವೆ ಸಮಾರಂಭದ ಬಳಿಕ ನವದಂಪತಿ ಹೆಲಿಕಾಪ್ಟರ್ ಮೂಲಕ ಹೋಟೆಲ್ಗೆ ತೆರಳುತ್ತಿದ್ದರು.
ಈ ವೇಳೆ ಮಳೆ ಹಾಗೂ ದಟ್ಟ ಮಂಜಿನ ಕಾರಣದಿಂದ ಗೋಚರತೆ ಕುಂಠಿತಗೊಂಡಿದ್ದು, ಹೆಲಿಕಾಪ್ಟರ್ ನಿಯಂತ್ರಣ ತಪ್ಪಿ ಡಾಸನ್ವಿಲ್ಲೆಯ ಅರಣ್ಯ ಪ್ರದೇಶದಲ್ಲಿ ಪತನಗೊಂಡಿದೆ. ಅಪಘಾತದ ತೀವ್ರತೆಗೆ ಹೆಲಿಕಾಪ್ಟರ್ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಡೇವ್ ಫಿಜಿ ಹಾಗೂ ಹೆಲಿಕಾಪ್ಟರ್ ಪೈಲಟ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಐದು ಗಂಟೆಗಳ ರಕ್ಷಣಾ ಕಾರ್ಯಾಚರಣೆ
ಅಪಘಾತದ ಬಳಿಕ ದಟ್ಟ ಅರಣ್ಯ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುವುದು ಸವಾಲಾಗಿತ್ತು. ಅವಶೇಷಗಳು ಹಾಗೂ ಬಿದ್ದ ಮರಗಳ ನಡುವೆ ಸಿಲುಕಿಕೊಂಡಿದ್ದ ಜೆಸ್ನಿಯನ್ನು ರಕ್ಷಣಾ ಸಿಬ್ಬಂದಿ ಸುಮಾರು ಐದು ಗಂಟೆಗಳ ಕಾರ್ಯಾಚರಣೆಯ ಬಳಿಕ ಸುರಕ್ಷಿತವಾಗಿ ಹೊರತೆಗೆದರು.
ವೃತ್ತಿಯಲ್ಲಿ ನರ್ಸ್ ಆಗಿರುವ ಜೆಸ್ನಿಗೆ ದೇಹದ ಹಲವು ಭಾಗಗಳಲ್ಲಿ ಗಾಯಗಳಾಗಿದ್ದರೂ, ಯಾವುದೇ ಮೂಳೆ ಮುರಿತ ಸಂಭವಿಸಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ.
ಅಪಘಾತದ ಕಾರಣ ಪತ್ತೆಗೆ ತನಿಖೆ
ಅಪಘಾತಕ್ಕೀಡಾದ ರಾಬಿನ್ಸನ್ R66 ಹೆಲಿಕಾಪ್ಟರ್ ‘ಪ್ರೆಸ್ಟೀಜ್ ಹೆಲಿಕಾಪ್ಟರ್ಸ್’ ಸಂಸ್ಥೆಗೆ ಸೇರಿದ್ದು, ಸಂಸ್ಥೆಯು ಹಲವು ವರ್ಷಗಳಿಂದ ಸುರಕ್ಷಿತ ಕಾರ್ಯಾಚರಣೆಗೆ ಹೆಸರುವಾಸಿಯಾಗಿದೆ.
ಘಟನೆಯ ನಿಖರ ಕಾರಣ ತಿಳಿದುಕೊಳ್ಳಲು ಅಮೆರಿಕದ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ (NTSB) ತನಿಖೆ ಆರಂಭಿಸಿದೆ. ಪ್ರಾಥಮಿಕ ತನಿಖಾ ವರದಿ ಮುಂದಿನ 30 ದಿನಗಳಲ್ಲಿ ಪ್ರಕಟವಾಗುವ ಸಾಧ್ಯತೆ ಇದೆ.
ಭೀಕರ ದುರಂತದಲ್ಲೂ ಜೆಸ್ನಿ ಬದುಕುಳಿದಿರುವುದು ಕುಟುಂಬ ಸದಸ್ಯರಿಗೆ ಸಮಾಧಾನ ತಂದಿದ್ದು, ಡೇವ್ ಫಿಜಿ ಅವರ ಅಕಾಲಿಕ ನಿಧನದಿಂದ ಕುಟುಂಬ ಹಾಗೂ ಸ್ನೇಹಿತರ ವಲಯದಲ್ಲಿ ದುಃಖ ಮನೆ ಮಾಡಿದೆ.
















