ಬೆಂಗಳೂರು: ಕೆಲಸ ಮಾಡಿಕೊಂಡಿದ್ದ ಮನೆಯಲ್ಲಿ ಕಳ್ಳತನ ಎಸಗಿದ್ದ ನೇಪಾಳ ಮೂಲದ ದಂಪತಿಯನ್ನು ನಗರದ ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪವನ್ ಬಿಸ್ತಾ ಹಾಗೂ ಸೀತಾ ಬಿಸ್ತಾ ಬಂಧಿತ ಆರೋಪಿಗಳು. ನಗರದ ಅರ್ಕಾವತಿ ಲೇಔಟ್‌ನಲ್ಲಿರುವ ಗುತ್ತಿಗೆದಾರರೊಬ್ಬರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಆರೋಪಿಗಳು, ಮೇ 27ರಂದು ಮನೆಯ ಕಬೋರ್ಡ್‌ನಲ್ಲಿದ್ದ 25 ಲಕ್ಷ ರೂಪಾಯಿ ನಗದು ದೋಚಿಕೊಂಡು ಪರಾರಿಯಾಗಿರುವ ಬಗ್ಗೆ ದೂರು ದಾಖಲಾಗಿತ್ತು ಎನ್ನಲಾಗಿದೆ.

ಹಾಗೂ ದೂರುದಾರ ಉದ್ಯಮಿಯ ಮನೆಯಲ್ಲಿ ಆರೋಪಿ ಪವನ್ ಬಿಸ್ತಾ ಒಂದು ತಿಂಗಳಿನಿಂದ ಸೆಕ್ಯುರಿಟಿ ಗಾರ್ಡ್ ಕೆಲಸಕ್ಕಿದ್ದರೆ, ಆತನೊಂದಿಗೆ ಪತ್ನಿ ಸೀತಾ ಬಿಸ್ತಾ ಮನೆಗೆಲಸ ಮಾಡಿಕೊಂಡಿದ್ದಳು. ಕೆಲಸಗಾರರಿಗೆ ಕೊಡಬೇಕಿದ್ದ ವೇತನದ ಹಣ 25 ಲಕ್ಷ ರೂಪಾಯಿಯನ್ನು ಉದ್ಯಮಿಯು ಮನೆಯ ಕಬೋರ್ಡ್‌ನಲ್ಲಿ ಇಟ್ಟಿದ್ದರು. ಮೇ 27ರಂದು ಮನೆ ಮಾಲೀಕರು ಕೆಲಸದ ನಿಮಿತ್ತ ಮನೆಯಿಂದ ಹೊರಗಡೆ ಹೋಗಿದ್ದರು. ಅದೇ ಸಮಯದಲ್ಲಿ ಮನೆಯೊಳಗೆ ನುಗ್ಗಿದ್ದ ಆರೋಪಿಗಳು ನಗದು ದೋಚಿ ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮಾಲೀಕ ಮನೆಗೆ ಬಂದಾಗ ಕೆಲಸಗಾರರಿಬ್ಬರು ನಾಪತ್ತೆಯಾಗಿದ್ದರು.

ಆದರಿಂದ ಅನುಮಾನಗೊಂಡು ಕಬೋರ್ಡ್ ಪರಿಶೀಲಿಸಿದಾಗ ಮನೆಯಲ್ಲಿ ನಗದು ಕಳ್ಳತನವಾಗಿರುವುದು ಬಯಲಾಗಿತ್ತು. ತಕ್ಷಣ ಮಾಲೀಕರು ಅಮೃತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತನಿಖೆ ನಡೆಸಿದ ಅಮೃತಹಳ್ಳಿ ಠಾಣೆ ಪೊಲೀಸರು ಕೆಂಗೇರಿಯ ಶಿರ್ಕೆಯ ಬಳಿ ವಾಸವಿದ್ದ ಆರೋಪಿ ದಂಪತಿಯನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 25 ಲಕ್ಷ ರೂ. ನಗದು ವಶಪಡಿಸಿಕೊಂಡು ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ ಎನ್ನಲಾಗುತ್ತಿದೆ.















