ಗೌತಮ್ ಬುದ್ಧ ನಗರ(ಉತ್ತರ ಪ್ರದೇಶ): ಇಲ್ಲಿನ ಜೆವಾರ್ನಲ್ಲಿರುವ ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಾಣಿಜ್ಯ ವಿಮಾನ ಕಾರ್ಯಾಚರಣೆಗಳನ್ನು ಇಂದಿನಿಂದ ಅಧಿಕೃತವಾಗಿ ಪ್ರಾರಂಭಿಸಲಾಗಿದೆ. ಈ ಮೂಲಕ ಇದು ಭಾರತದ ವಾಯುಯಾನ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಮಹತ್ವದ ಮೈಲಿಲ್ಲಾಗಿದೆ. ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಅವರು ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆಗಳನ್ನು ಉದ್ಘಾಟಿಸಿದ್ದು ಈ ನಿಲ್ದಾಣದಿಂದ ಮೊದಲ ಹಾರಾಟ ನಡೆಸಿದ ಇಂಡಿಗೊದ 6ಇ-2278 ವಿಮಾನ ಲಕ್ನೋದಲ್ಲಿನ ಚೌಧರಿ ಚರಣ್ ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿಯಿತು. ಇದಾದ ಬಳಿಕ ಜೆವಾರ್ಗೆ ಆಗಮಿಸಿ, ಅಲ್ಲಿಂದ ಬೆಂಗಳೂರಿನತ್ತ ಹಾರಾಟ ಮುಂದುವರೆಸಿತು ಎಂದು ತಿಳಿದುಬಂದಿದೆ.

ಹಾಗೂ ನೋಯ್ಡಾ ವಿಮಾನ ನಿಲ್ದಾಣದ ನಿರ್ಮಾಣಕ್ಕಾಗಿ ಸುಮಾರು 20 ಮಹಿಳೆಯರೂ ಸೇರಿದಂತೆ ಜೆವಾರ್ ಪ್ರದೇಶದ 170 ರೈತರು ಸ್ವಯಂಪ್ರೇರಣೆಯಿಂದ ತಮ್ಮ ಭೂಮಿ ದಾನ ಮಾಡಿದ್ದು, ಅವರು ಲಕ್ನೋಗೆ ಪ್ರಯಾಣಿಸಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾಗಲಿದ್ದಾರೆ. ರೈತರ ನಿಯೋಗವನ್ನು ಜೆವಾರ್ ಶಾಸಕ ಧಿರೇಂದ್ರ ಸಿಂಗ್ ನೇತೃತ್ವದಲ್ಲಿ ಸಿಎಂ ಭೇಟಿಯಾಗಲಿದ್ದಾರೆ. ಈ ಕುರಿತು ಅಧಿಕೃತ ಹೇಳಿಕೆ ಪ್ರಕಟಿಸಲಾಗಿದ್ದು, ರೈತರು ಲಕ್ನೋದಲ್ಲಿ ಸಿಎಂ ಆದಿತ್ಯನಾಥ್ ಅವರನ್ನು ಭೇಟಿಯಾಗಿ ಈ ಪ್ರದೇಶದಲ್ಲಿ ಉತ್ತಮ ಸಂಪರ್ಕ ಮತ್ತು ಆರ್ಥಿಕ ಉತ್ತೇಜನಕ್ಕಾಗಿ ಸರ್ಕಾರದ ಅಭಿವೃದ್ದಿ ಉಪಕ್ರಮಗಳಿಗೆ ಧನ್ಯವಾದ ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದೆ. ಹೊಸ ವಿಮಾನ ನಿಲ್ದಾಣವು ಎನ್ಸಿಆರ್ಗೆ ಪ್ರಮುಖ ಅಂತಾರಾಷ್ಟ್ರೀಯ ಪ್ರವೇಶ ಮಾರ್ಗವಾಗಿದ್ದು, ದೇಶದ ವಿಮಾನ ನಿಲ್ದಾಣ ಮೂಲಸೌಕರ್ಯ ಬಲಪಡಿಸುವ ಮತ್ತು ಪ್ರಾದೇಶಿಕ ಹಾಗು ಅಂತಾರಾಷ್ಟ್ರೀಯ ಸಂಪರ್ಕ ಹೆಚ್ಚಿಸುವ ಪ್ರಮುಖ ಹೆಜ್ಜೆಯಾಗಿದೆ.

ದೆಹಲಿ-ಎನ್ಸಿಆರ್ ಪ್ರದೇಶದಲ್ಲಿ ಇದೀಗ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಾರ್ಯಾರಂಭಿಸಿದಂತಾಗಿದೆ. ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಭಾರತದ ಅತಿದೊಡ್ಡ ಗ್ರೀನ್ಫೀಲ್ಡ್ ವಿಮಾನ ನಿಲ್ದಾಣ ಯೋಜನೆಗಳಲ್ಲಿ ಒಂದಾಗಿದೆ. ಮೊದಲ ಹಂತವನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯ ಅಡಿಯಲ್ಲಿ ಸುಮಾರು 11,200 ಕೋಟಿ ರೂ.ಗಳ ಹೂಡಿಕೆಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ವಿಶಾಲ ಸಾಮರ್ಥ್ಯದಲ್ಲಿ ವಿಮಾನಗಳು ಇಲ್ಲಿ ಕಾರ್ಯ ನಿರ್ವಹಿಸಲು ಅವಕಾಶವಿದೆ. 3,900 ಮೀಟರ್ ರನ್ವೇ ಹೊಂದಿದೆ. ಇನ್ಸ್ಟ್ರುಮೆಂಟ್ ಲ್ಯಾಂಡಿಂಗ್ ಸಿಸ್ಟಮ್ ಸೇರಿದಂತೆ ಆಧುನಿಕ ದಕ್ಷ ಸಂಚಾರ ವ್ಯವಸ್ಥೆ ಮತ್ತು ಎಲ್ಲಾ ಹವಾಮಾನ, 24/7 ಕಾರ್ಯಾಚರಣೆಗಳನ್ನು ಬೆಂಬಲಿಸಲು ಸುಧಾರಿತ ಏರ್ಫೀಲ್ಡ್ ಲೈಟಿಂಗ್ ಹೊಂದಿದೆ ಎಂಬುದ್ದಾಗಿ ತಿಳಿದುಬಂದಿದೆ.















