ಬೆಂಗಳೂರು, ಜೂನ್ 06: ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ತಡವಾಗಿ ಬರುವುದು ಹಾಗೂ ಗೈರುಹಾಜರಾಗುವ ಪ್ರವೃತ್ತಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಬಳಸಲು ಮುಂದಾಗಿದೆ. ಪ್ರತಿಯೊಬ್ಬ ಸರ್ಕಾರಿ ಅಧಿಕಾರಿ ಮತ್ತು ಸಿಬ್ಬಂದಿ ಪ್ರತಿದಿನ ಬೆಳಗ್ಗೆ 10 ಗಂಟೆಯೊಳಗೆ ಕಡ್ಡಾಯವಾಗಿ ಕಚೇರಿಯಲ್ಲಿ ಹಾಜರಾಗಬೇಕು ಎಂದು ಮುಖ್ಯಮಂತ್ರಿ ಇತ್ತೀಚೆಗೆ ನಡೆದ ಸಭೆಯಲ್ಲಿ ಸ್ಪಷ್ಟ ಸೂಚನೆ ನೀಡಿದ್ದರು. ಇದರ ಬೆನ್ನಲ್ಲೇ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅಧಿಕೃತ ಆದೇಶ ಹೊರಡಿಸಿದ್ದಾರೆ.

‘ಕರ್ತವ್ಯ (KAAMS) App’ ಬಳಕೆ ಕಡ್ಡಾಯ
ಸರ್ಕಾರಿ ನೌಕರರ ಹಾಜರಾತಿ ವ್ಯವಸ್ಥೆಯನ್ನು ಡಿಜಿಟಲ್ ರೂಪದಲ್ಲಿ ನಿರ್ವಹಿಸಲು ಇ-ಆಡಳಿತ ಇಲಾಖೆ ‘ಕರ್ತವ್ಯ (KAAMS) App’ ಅನ್ನು ಅಭಿವೃದ್ಧಿಪಡಿಸಿದೆ. HRMS ತಂತ್ರಾಂಶದಲ್ಲಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಯ ಮಾಹಿತಿಯನ್ನು ಈಗಾಗಲೇ ಈ ಆ್ಯಪ್ನಲ್ಲಿ ಸಂಯೋಜಿಸಲಾಗಿದೆ. ಆದರೆ ಹಲವರು ನಿಯಮಿತವಾಗಿ ಆ್ಯಪ್ ಬಳಸುತ್ತಿಲ್ಲ ಎಂಬ ಮಾಹಿತಿ ಸರ್ಕಾರಕ್ಕೆ ಲಭ್ಯವಾಗಿದೆ.
ಈ ಹಿನ್ನೆಲೆಯಲ್ಲಿ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಸೇರಿದಂತೆ ಎಲ್ಲ ಸರ್ಕಾರಿ ನೌಕರರು ಪ್ರತಿದಿನ ಬೆಳಗ್ಗೆ 10 ಗಂಟೆಯೊಳಗೆ ಆ್ಯಪ್ನಲ್ಲಿ Check In ಹಾಗೂ ಕರ್ತವ್ಯ ಮುಗಿದ ಬಳಿಕ Check Out ದಾಖಲಿಸುವುದು ಕಡ್ಡಾಯಗೊಳಿಸಲಾಗಿದೆ.
ತಡವಾದರೆ AI ಸಿದ್ಧಪಡಿಸಲಿದೆ ವರದಿ
ಈ ನಿಯಮದ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಇ-ಆಡಳಿತ ಇಲಾಖೆ ಅತ್ಯಾಧುನಿಕ AI ತಂತ್ರಜ್ಞಾನವನ್ನು ಅಳವಡಿಸಿದೆ. ಬೆಳಗ್ಗೆ 10 ಗಂಟೆಯೊಳಗೆ ಹಾಜರಾತಿ ದಾಖಲಿಸದ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಜಿಲ್ಲಾವಾರು ಹಾಗೂ ಕಚೇರಿವಾರು ಮಾಹಿತಿಯನ್ನು AI ಸ್ವಯಂಚಾಲಿತವಾಗಿ ಸಂಗ್ರಹಿಸಿ ವರದಿ ಸಿದ್ಧಪಡಿಸಲಿದೆ.

ಈ AI ಆಧಾರಿತ ವರದಿ ಸಂಬಂಧಿಸಿದ ಇಲಾಖೆಯ ಮುಖ್ಯಸ್ಥರ ವೈಯಕ್ತಿಕ ಡ್ಯಾಶ್‌ಬೋರ್ಡ್‌ಗೆ ನೇರವಾಗಿ ರವಾನೆಯಾಗಲಿದ್ದು, ಪ್ರತಿದಿನ ಅದನ್ನು ಪರಿಶೀಲಿಸಿ ಹಾಜರಾತಿ ದಾಖಲಿಸದ ಸಿಬ್ಬಂದಿಗೆ ಸೂಕ್ತ ಕ್ರಮ ಕೈಗೊಳ್ಳುವ ಜವಾಬ್ದಾರಿ ಇಲಾಖಾ ಮುಖ್ಯಸ್ಥರದ್ದಾಗಿರುತ್ತದೆ.
ಅಧಿಕೃತ ಪ್ರವಾಸದಲ್ಲಿದ್ದರೆ OOD ಆಯ್ಕೆ
ಯಾವುದೇ ಅಧಿಕಾರಿ ಅಥವಾ ಸಿಬ್ಬಂದಿ ಅಧಿಕೃತ ಕರ್ತವ್ಯದ ನಿಮಿತ್ತ ಕಚೇರಿಯಿಂದ ಹೊರಗಿದ್ದರೆ, ಆ್ಯಪ್ನಲ್ಲಿರುವ OOD (On Official Duty) ಆಯ್ಕೆಯನ್ನು ಬಳಸಿ ತಮ್ಮ ಪ್ರವಾಸದ ವಿವರ ದಾಖಲಿಸಬಹುದು. ನಂತರ ಸಂಬಂಧಪಟ್ಟ ಮೇಲಾಧಿಕಾರಿಗಳು ಅದನ್ನು ಪರಿಶೀಲಿಸಿ ಅನುಮೋದನೆ ನೀಡಬೇಕಾಗುತ್ತದೆ.
ರಾಜ್ಯ ಸರ್ಕಾರ ಈ ಆದೇಶವನ್ನು ತಕ್ಷಣದಿಂದಲೇ ಜಾರಿಗೆ ತರುವಂತೆ ಸೂಚಿಸಿದ್ದು, ಎಲ್ಲಾ ಇಲಾಖೆಗಳು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕೆಂದು ನಿರ್ದೇಶನ ನೀಡಲಾಗಿದೆ. ‘Kartavya (KAAMS) APP’ ಬಳಕೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಯೂಟ್ಯೂಬ್‌ನಲ್ಲಿ ಲಭ್ಯವಿರುವ ಮಾರ್ಗದರ್ಶಿ ವಿಡಿಯೋ ವೀಕ್ಷಿಸಬಹುದಾಗಿದೆ.














