ಮನೆ ರಾಜಕೀಯ ರಾಜ್ಯದಲ್ಲಿ ಇನ್ನೊಂದು ವರ್ಷದಲ್ಲಿ ಎವಿಜಿಸಿ ನೀತಿ: ಅಶ್ವತ್ಥನಾರಾಯಣ

ರಾಜ್ಯದಲ್ಲಿ ಇನ್ನೊಂದು ವರ್ಷದಲ್ಲಿ ಎವಿಜಿಸಿ ನೀತಿ: ಅಶ್ವತ್ಥನಾರಾಯಣ

0

ಬೆಂಗಳೂರು: ಡಿಜಿಟಲ್ ಮನೋರಂಜನಾ ಕ್ಷೇತ್ರವು ಅಗಾಧವಾಗಿ ಬೆಳೆಯುತ್ತಿದ್ದು, ಒಂದು ವರ್ಷದಲ್ಲಿ ನೂತನ `ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್ಸ್ ನೀತಿ’ (ಎವಿಜಿಸಿ ಪಾಲಿಸಿ)ಯನ್ನು ರಾಜ್ಯದಲ್ಲಿ ಜಾರಿಗೆ ತರಲಾಗುವುದು ಎಂದು ಐಟಿ, ಬಿಟಿ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.

ಇಲ್ಲಿನ ಮಹದೇವಪುರದಲ್ಲಿ ದೇಶದ ಪ್ರಪ್ರಥಮ ಮತ್ತು ಏಷ್ಯಾದ ಅತಿದೊಡ್ಡ `ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್ಸ್ ಉತ್ಕೃಷ್ಟತಾ ಕೇಂದ್ರ’ಕ್ಕೆ (ಎವಿಜಿಸಿ ಸೆಂಟರ್ ಆಫ್ ಎಕ್ಸಲೆನ್ಸ್) ಗುರುವಾರದಂದು ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದಲ್ಲಿ `ಡಿಜಿಟಲ್ ಮಾಧ್ಯಮ ಮನೋರಂಜನಾ ಪ್ರದೇಶ’ವನ್ನು ಕೂಡ ಇನ್ನು ಒಂದು ವರ್ಷದಲ್ಲಿ ಮಹದೇವಪುರದ ಸಮೀಪವೇ ಸ್ಥಾಪಿಸಲಾಗುವುದು. ಇದಕ್ಕೆ ಅಗತ್ಯ ಭೂಮಿಯನ್ನು ಗುರುತಿಸುವಂತೆ ಕೈಗಾರಿಕಾ ಇಲಾಖೆಗೆ ಹೇಳಲಾಗುವುದು ಎಂದರು.

ಇದರೊಂದಿಗೆ, ರಾಜ್ಯವು ಎವಿಜಿಸಿ ವಲಯದಲ್ಲಿ ಉತ್ಕೃಷ್ಟತಾ ಕೇಂದ್ರವನ್ನು ಸ್ಥಾಪಿಸಿದ ಮೊಟ್ಟಮೊದಲ ರಾಜ್ಯವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ರಾಜ್ಯವು 2012ರಲ್ಲೇ ಎವಿಜಿಸಿ ನೀತಿಯನ್ನು ಜಾರಿಗೆ ತಂದ ಹಿರಿಮೆಯನ್ನು ಕೂಡ ಹೊಂದಿರುವುದನ್ನು ಇಲ್ಲಿ ನೆನೆಯಬಹುದು. ಈ ಉತ್ಕೃಷ್ಟತಾ ಕೇಂದ್ರವನ್ನು `ಅಭಯ್’ ಸಂಸ್ಥೆಯು (ಹಿಂದಿನ `ಅಸೋಸಿಯೇಶನ್ ಆಫ್ ಬೆಂಗಳೂರು ಅನಿಮೇಷನ್ ಇಂಡಸ್ಟ್ರಿ’) ನಿರ್ವಹಿಸಲಿದೆ.

ಈ ಉತ್ಕೃಷ್ಟತಾ ಕೇಂದ್ರದೊಂದಿಗೆ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳೆಲ್ಲವೂ ಒಡಂಬಡಿಕೆ ಮಾಡಿಕೊಳ್ಳುವಂತೆ ಮಾಡಲಾಗುವುದು. ಇದರ ಜೊತೆಗೆ ರಾಜ್ಯದ ವಿ.ವಿ.ಗಳಲ್ಲಿ ಸಣ್ಣ ಪ್ರಮಾಣದ ಉತ್ಕೃಷ್ಟತಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಇದರಿಂದ ವಿದ್ಯಾರ್ಥಿಗಳ ಕಲಿಕೆಯನ್ನು ಹೆಚ್ಚು ಆಸಕ್ತಿಕರಗೊಳಿಸಿ, ಹೆಚ್ಚುಹೆಚ್ಚು ವಿದ್ಯಾರ್ಥಿಗಳಿಗೆ ಜಾಗತಿಕ ಗುಣಮಟ್ಟದ ಶಿಕ್ಷಣ ಒದಗಿಸಬಹುದು ಎಂದು ಸಚಿವರು ನುಡಿದರು.

ದಕ್ಷಿಣ ಏಷ್ಯಾದ ಅತ್ಯಾಧುನಿಕ ಡಿಜಿಟಲ್ ಮಾಧ್ಯಮ ತಾಣವಾಗಿರುವ ಈ ಎವಿಜಿಸಿ ಉತ್ಕೃಷ್ಟತಾ ಕೇಂದ್ರಕ್ಕೆ ರಾಜ್ಯ ವಿದ್ಯುನ್ಮಾನ, ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯು `ಇನ್ನೋವೇಟ್ ಕರ್ನಾಟಕ’ ಉಪಕ್ರಮದಡಿ ಅಗತ್ಯ ಹಣಕಾಸು ನೆರವು ನೀಡಲಾಗಿದೆ ಎಂದರು.

`ದಕ್ಷಿಣ ಕೊರಿಯಾದಂತಹ ಸಣ್ಣ ದೇಶ ಇಂದು ಟ್ರಿಲಿಯನ್ ಮೌಲ್ಯದ ಆರ್ಥಿಕ ಶಕ್ತಿಯಾಗಿ ಬೆಳೆದಿದೆ. ಮನೋರಂಜನೆ ಮತ್ತು ಅದಕ್ಕೆ ಪೂರಕವಾಗಿರುವ ಇತರ ಕ್ಷೇತ್ರಗಳನ್ನು ನಮ್ಮ ಚಿತ್ರೋದ್ಯಮ, ಫೋಟೋಗ್ರಫಿ ಜಾಹೀರಾತು, ಮಾಧ್ಯಮಲೋಕ, ಅನಿಮೇಷನ್ ಮತ್ತು ಗ್ರಾಫಿಕ್ಸ್ ವಲಯಗಳು ಸಹ ಗರಿಷ್ಠ ಮಟ್ಟದಲ್ಲಿ ಬೆಳೆಸಿಕೊಳ್ಳಬೇಕು. ಹೀಗಾದರೆ, 2030ರ ಹೊತ್ತಿಗೆ ಕರ್ನಾಟಕ ಕೂಡ ಟ್ರಿಲಿಯನ್ ಆರ್ಥಿಕತೆಯಾಗಿ ಬೆಳೆಯಬಹುದು’ ಎಂದು ಅವರು ಸೂಚಿಸಿದರು.

ಇಲ್ಲಿರುವ `ಫಿನಿಶಿಂಗ್ ಸ್ಕೂಲ್’ನಲ್ಲಿ ಭವಿಷ್ಯದ ತಂತ್ರಜ್ಞಾನಗಳಾದ ವರ್ಚುಯಲ್ ರಿಯಾಲಿಟಿ, ಡಿಜಿಟಲ್ ಕಂಪ್ರೆಷನ್, ಫೋಟೋಗ್ರಾಮಿಟ್ರಿ, ಶೈಕ್ಷಣಿಕ ಗೇಮಿಫಿಕೇಶನ್ ಮುಂತಾದವುಗಳಲ್ಲಿ ವಿಶಿಷ್ಟ ಕೋರ್ಸುಗಳನ್ನು ಕಲಿಸಲಾಗುವುದು ಎಂದು ಸಚಿವರು ನುಡಿದರು.

ಎವಿಜಿಸಿ ಉತ್ಕೃಷ್ಟತಾ ಕೇಂದ್ರವು ಜಾಗತಿಕ ಮಟ್ಟದ ಅತ್ಯಾಧುನಿಕ ಮೂಲಸೌಲಭ್ಯಗಳನ್ನು ಹೊಂದಿದೆ. ವೈಯಕ್ತಿಕ ಮಟ್ಟದಲ್ಲಿ ಇದು ಸಾಧ್ಯವಿಲ್ಲ. ಆದ್ದರಿಂದ, ಎವಿಜಿಸಿ ವೃತ್ತಿಪರರಿಗೆ ಒಂದೇ ಕಡೆ ಅಗತ್ಯ ಸೌಲಭ್ಯಗಳು ಸಿಗಬೇಕೆನ್ನುವ ದೃಷ್ಟಿಯಿಂದ ಈ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದು ಅವರು ವಿವರಿಸಿದರು.

ಹಿಂದಿನ ಲೇಖನನಟ ದುನಿಯಾ ವಿಜಯ್ ಗೆ ಹುಟ್ಟುಹಬ್ಬದ ಸಂಭ್ರಮ
ಮುಂದಿನ ಲೇಖನಶತಮಾನ ಕಂಡ ವಿವಿ ಸಿಬ್ಬಂದಿಗೆ ವೇತನ ನೀಡಲು ಸರ್ಕಾರದಿಂದ ವಿಳಂಬ ನೀತಿ