ಮನೆ ಸುದ್ದಿ ಜಾಲ ಶತಮಾನ ಕಂಡ ವಿವಿ ಸಿಬ್ಬಂದಿಗೆ ವೇತನ ನೀಡಲು ಸರ್ಕಾರದಿಂದ ವಿಳಂಬ ನೀತಿ

ಶತಮಾನ ಕಂಡ ವಿವಿ ಸಿಬ್ಬಂದಿಗೆ ವೇತನ ನೀಡಲು ಸರ್ಕಾರದಿಂದ ವಿಳಂಬ ನೀತಿ

0

ಮೈಸೂರು: ದೇಶದ ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯದ ಸಿಬ್ಬಂದಿಗೆ ಸಂಬಳ ನೀಡಲು ಸರಕಾರ ವಿಳಂಬ ಮಾಡಿದ್ದು, ಇದೇ ಮೊದಲ ಬಾರಿಗೆ ಸಂಬಳ ನಿಗಧಿತ ಸಮಯಕ್ಕೆ ಪಡೆಯುವಲ್ಲಿ ಇಲ್ಲಿನ ಸಿಬ್ಬಂದಿ ವರ್ಗ ತೊಂದರೆ ಅನುಭವಿಸುವಂತಾಗಿದೆ.

ನೂರು ವರ್ಷ ಹಳೆಯದಾದ ರಾಜ್ಯದ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳ ಪೈಕಿ ಒಂದಾದ ಮೈಸೂರು ವಿಶ್ವವಿದ್ಯಾನಿಲಯದ ಸಿಬ್ಬಂದಿಗೆ ಸರಕಾರ ಸಂಬಳ ನೀಡುವಲ್ಲಿ ವಿಫಲವಾಗಿದೆ. ವಿವಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಿಬ್ಬಂದಿಗೆ ಈ ಅನುಭವವಾಗಿದೆ. ಸಂಬಳ ವಿತರಿಸುವ ಜವಾಬ್ದಾರಿ ಹೊತ್ತಿದ್ದ ರಾಜ್ಯ ಸರಕಾರ ಸಮರ್ಪಕವಾಗಿ ಕಾರ್ಯ ನಿರ್ವಹಿಸುವಲ್ಲಿ ವಿಫಲವಾದ್ದದ್ದು ಇದಕ್ಕೆ ಕಾರಣ ಎನ್ನಲಾಗಿದೆ.
ಈ ತನಕ ವಿಶ್ವವಿದ್ಯಾನಿಲಯವೇ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದ ಸಂಬಳದ ಖರ್ಚು, ವೆಚ್ಚ ನಿರ್ವಹಿಸುತ್ತಿತ್ತು. ರಾಜ್ಯ ಸರಕಾರವೇ ಹಣ ನೀಡುತ್ತಿದ್ದಾದರೂ ಆ ಸಂಬಳದ ಹಣವನ್ನು ವಿವಿಯೇ ಬಿಡುಗಡೆ ಮಾಡುತ್ತಿತ್ತು. ಒಂದು ವೇಳೆ ಸರಕಾರದಿಂದ ಹಣ ಬಿಡುಗಡೆಯಾಗುವುದು ವಿಳಂಬವಾದಲ್ಲಿ, ವಿವಿ ತನ್ನ ಇತರೆ ಮೂಲಗಳಿಂದ ಹಣವನ್ನು ಸಂಬಳಕ್ಕಾಗಿ ಬಳಸಿಕೊಂಡು ಬಳಿಕ ಸರಕಾರ ಬಿಡುಗಡೆಗೊಳಿಸಿದಾಗ ಅದನ್ನು ಅಲ್ಲಿಗೆ ಜಮಾ ಮಾಡುತ್ತಿತ್ತು. ಇದರಿಂದ ಪ್ರತಿ ತಿಂಗಳ 30 ರೊಳಗೆ ಸಿಬ್ಬಂದಿಗಳ ಬ್ಯಾಂಕ್ ಖಾತೆಗೆ ಸಂಬಳದ ಹಣ ಸಂದಾಯವಾಗುತ್ತಿತ್ತು.

ಆದರೆ, ಇದೀಗ ರಾಜ್ಯ ಸರಕಾರ HRMS ( Human Resource Managment Software) ಮೂಲಕವೇ ವಿಶ್ವವಿದ್ಯಾನಿಲಯದ ಸಿಬ್ಬಂದಿಗೆ ಸಂಬಳ ನೀಡುವ ವ್ಯವಸ್ಥೆ ಜಾರಿಗೆ ತಂದಿದೆ. ಕಳೆದ ನವೆಂಬರ್ ತಿಂಗಳಿನಲ್ಲಿ ಮೈಸೂರು ವಿವಿ ಸಹ ಎಚ್.ಆರ್.ಎಂ.ಎಸ್. ವ್ಯಾಪ್ತಿಗೆ ಒಳಪಟ್ಟಿತು. ಪರಿಣಾಮ ಡಿಸೆಂಬರ್ ತಿಂಗಳ ವೇತನ ನೂತನ ಪದ್ಧತಿಯಂತೆಯೇ ಸಿಬ್ಬಂದಿಗೆ ಬಿಡುಗಡೆಗೊಂಡಿದೆ.

ವಿಪರ್ಯಾಸವೆಂದರೆ, ಮುಂದಿನ ತಿಂಗಳ ಅಂದರೆ ಡಿಸೆಂಬರ್ ತಿಂಗಳ ವೇತನ ಬಿಡುಗಡೆ ಈಗ ವಿಳಂಬವಾಗಿದೆ. ಜನವರಿ 20 ಕಳೆದರು ಸಂಬಳ ವಿತರಿಸುವ ಜವಾಬ್ದಾರಿ ಹೊತ್ತಿರುವ ರಾಜ್ಯ ಸರಕಾರ, ಈ ತನಕ ಮೈಸೂರು ವಿವಿ ಸಿಬ್ಬಂದಿಗೆ ವೇತನ ಬಿಡುಗಡೆ ಮಾಡಿಲ್ಲ.
ಮೂಲಗಳ ಪ್ರಕಾರ ಮೈಸೂರು ವಿವಿಯ ಬೋಧಕ ವರ್ಗದ 289 ಮಂದಿ, ಬೋಧಕೇತರ ವರ್ಗದ 330 ಮಂದಿ ಹಾಗೂ ಡಿ ವರ್ಗದ 235 ಮಂದಿ ಸೇರಿದಂತೆ ಒಟ್ಟು 855 ಮಂದಿಗೆ ಮಾಸಿಕ ಸಂಬಳದ ಮೊತ್ತ 9, 41, 15,305 ರೂ.ಗಳು. ಈ ಮೊತ್ತ ಬಿಡುಗಡೆ ಮಾಡದೆ ರಾಜ್ಯ ಸರಕಾರ ವಿಳಂಬ ಮಾಡುತ್ತಿರುವುದಾರೂ ಯಾಕೆ ಎಂಬ ಪ್ರಶ್ನೆ ಉದ್ಭವಿಸಿದೆ.

ಹಿಂದಿನ ಲೇಖನರಾಜ್ಯದಲ್ಲಿ ಇನ್ನೊಂದು ವರ್ಷದಲ್ಲಿ ಎವಿಜಿಸಿ ನೀತಿ: ಅಶ್ವತ್ಥನಾರಾಯಣ
ಮುಂದಿನ ಲೇಖನಇಂದಿನ ದಿನ ಭವಿಷ್ಯ