ಬೆಂಗಳೂರು: ಬೆಂಗಳೂರಿನಲ್ಲಿ ನಿಫಾ ಹಾಗೂ ಮಂಕಿಪಾಕ್ಸ್ ಆತಂಕ ಮತ್ತೆ ಶುರುವಾಗಿದೆ. ಕೊರೊನಾ ಬಳಿಕ ಮತ್ತೆ ನಿಫಾದಿಂದ ರಾಜಧಾನಿಯಲ್ಲಿ ಹೋಮ್ ಕ್ವಾರಂಟೈನ್ ಶುರುವಾಗಿದೆ.
ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಕೇರಳದ ಯುವಕ ನಿಫಾಗೆ ಬಲಿಯಾಗಿದ್ದು ಯುವಕನ ಅಂತ್ಯಸಂಸ್ಕಾರಕ್ಕೆ ಬೆಂಗಳೂರಿನಿಂದ ತೆರಳಿದ್ದ ಸ್ನೇಹಿತರು ಹಾಗೂ ಪ್ರಾಥಮಿಕ ಸಂಪರ್ಕಿತರಿಗೆ ಹೋಂ ಐಸೊಲೇಷನ್ ಮಾಡಲಾಗಿದೆ. 41 ಪ್ರಾಥಮಿಕ ಸಂಪರ್ಕಿತರ ಪತ್ತೆಯಾಗಿದ್ದು 41 ಜನರಿಗೂ ಕಡ್ಡಾಯ ಹೋಂ ಐಸೊಲೇಷನ್ ಮಾಡಲಾಗಿದೆ. ಎಲ್ಲಾ ಸಂಪರ್ಕಿತರ ಮೇಲೆ ಆರೋಗ್ಯಾಧಿಕಾರಿಗಳು ನಿಗಾವಹಿಸಿದ್ದಾರೆ.
41 ಸಂಪರ್ಕಿತರ ಪೈಕಿ ಒಬ್ಬರಿಗೆ ನಿಫಾ ಗುಣಲಕ್ಷಣ ಕಂಡು ಬಂದಿದ್ದು ಗುಣಲಕ್ಷಣಗಳಿರುವ ವ್ಯಕ್ತಿಯ ರಕ್ತ ಮತ್ತು ಸೆರಂ ಮಾದರಿ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಸದ್ಯ ಕೋವಿಡ್ನಲ್ಲಿ ಭಯ ಹುಟ್ಟಿಸಿದ್ದ ಕ್ವಾರಂಟೈನ್ ಈಗ ಮತ್ತೆ ನಿಫಾ ಹೆಸರಲ್ಲಿ ಶುರುವಾಗಿದೆ. ಹೀಗಾಗಿ ಆರೋಗ್ಯ ಇಲಾಖೆ ಬಿ ಅಲರ್ಟ್ ಅಂತಿದ್ದಾರೆ. ಎಲ್ಲಾ ಸಂಪರ್ಕಿತರ ಮೇಲೆ ಆರೋಗ್ಯಾಧಿಕಾರಿಗಳು ನಿಗಾ ಇಟ್ಟಿದ್ದಾರೆ.
ಸದ್ಯ ರಾಜ್ಯದಲ್ಲಿ ಯಾವ ನಿಫಾ ಕೇಸ್ ಕೂಡ ದಾಖಲಾಗಿಲ್ಲ. ಕೇರಳಕ್ಕೆ ಹೋಗಿದ್ದ ಸ್ನೇಹಿತರು ಹಾಗೂ ಸಿಬ್ಬಂದಿಗಳನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ. ಮುಂದಿನ ಎರಡು ದಿನಗಳ ಬಳಿಕ ಲಕ್ಷಣ ಕಂಡು ಬರದಿದ್ದರೆ ಆತಂಕ ಕಡಿಮೆ ಆಗಲಿದೆ. ಕ್ವಾರಂಟೈನ್ ನಿಂದ ಸ್ನೇಹಿತರು ಹಾಗೂ ಕಾಲೇಜು ಸಿಬ್ಬಂದಿ ಪರದಾಡುತ್ತಿದ್ದಾರೆ.