ಚಾಮರಾಜನಗರ : ನಾಗಮಲೆ ಅರಣ್ಯದಲ್ಲಿ ಚಿರತೆ ದಾಳಿಯಿಂದ 10 ವರ್ಷದ ಬಾಲಕ ಮೃತಪಟ್ಟಿರುವ ಹಿನ್ನೆಲೆ ವನ್ಯಜೀವಿ ಸಂಚಾರವಿರುವ ಎಲ್ಲ ಚಾರಣಪಥ ಮತ್ತು ಸಂಚಾರಪಥಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಬಿ ಖಂಡ್ರೆ ಸೂಚನೆ ನೀಡಿದ್ದಾರೆ.
ಸಾರ್ವಜನಿಕರು ಮತ್ತು ಚಾರಣಿಗರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಆದೇಶದವರೆಗೆ ಚಿರತೆ, ಹುಲಿ, ಆನೆ, ಕರಡಿ ಮತ್ತಿತರೆ ವನ್ಯಜೀವಿಗಳು ಸಂಚರಿಸುವ ಮತ್ತು ಮಾನವ-ವನ್ಯಜೀವಿ ಸಂಘರ್ಷ ಸಂಭವಿಸಿರುವ ಕಡೆಗಳಲ್ಲಿ ಚಾರಣ ಮತ್ತು ಸಂಚಾರ ಪಥಗಳನ್ನು ತಕ್ಷಣದಿಂದಲೇ ಸ್ಥಗಿತಗೊಳಿಸಲು ಸೂಚಿಸಿದ್ದು, ಈ ಸಂಬಂಧ ಅಧಿಕೃತ ಸುತ್ತೋಲೆ ಹೊರಡಿಸಲಾಗಿದೆ.
ಚಾರಣ ಚಟುವಟಿಕೆಗಳನ್ನು ಸುರಕ್ಷಿತ ಮತ್ತು ಜವಾಬ್ದಾರಿಯುತ ರೀತಿಯಲ್ಲಿ ನಡೆಸುವಂತೆ ಅರಣ್ಯ ಸಚಿವ ಖಂಡ್ರೆ ಅವರು ಸೂಚಿಸಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆ ಮಾಡಿದ ಪ್ರಮಾಣಿತ ಕಾರ್ಯಾಚರಣೆ ವಿಧಾನಗಳನ್ನು ಕಡ್ಡಾಯವಾಗಿ ಪಾಲಿಸುವಂತೆಯೂ ಸೂಚಿಸಲಾಗಿದೆ. ಒಂದೊಮ್ಮೆ ಎಸ್.ಓ.ಪಿ. ಪಾಲನೆಗೆ ಸಿದ್ಧತೆ ಮಾಡಿಕೊಳ್ಳದೇ ಇದ್ದಲ್ಲಿ ಅಂತಹ ಚಾರಣ ಪಥಗಳಲ್ಲಿ ಚಟುವಟಿಕೆಯನ್ನು ಸ್ಥಗಿತಗೊಳಿಸಲು ಸೂಚಿಸಲಾಗಿದೆ.
ಕರ್ನಾಟಕ ಅರಣ್ಯ ಇಲಾಖೆ ಮತ್ತು ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಮೇಲ್ವಿಚಾರಣೆಯಲ್ಲಿ ಕೈಗೊಳ್ಳುವ ಚಾರಣಪಥಗಳಲ್ಲಿ ಎಸ್.ಓ.ಪಿ. ಪಾಲನೆಗೆ ಪೂರ್ವಸಿದ್ಧತೆ ಮಾಡಿಕೊಂಡು ನಂತರ ಚಾರಣ ಚಟುವಟಿಕೆ ಮುಂದುವರಿಸುವಂತೆ ಆದೇಶ ನೀಡಲಾಗಿದೆ. ಅಧಿಕೃತವಾಗಿ ಈ ಸಂಬಂಧ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರು ಎರಡು ಪ್ರತ್ಯೇಕ ಸುತ್ತೋಲೆಗಳನ್ನು ಹೊರಡಿಸಿದ್ದಾರೆ.
















