ಮನೆ ರಾಜಕೀಯ ಮೇಕೆದಾಟು ಪಾದಯಾತ್ರೆ: ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಸಮನ್ಸ್ ಜಾರಿ

ಮೇಕೆದಾಟು ಪಾದಯಾತ್ರೆ: ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಸಮನ್ಸ್ ಜಾರಿ

0

ಬೆಂಗಳೂರು(Bengaluru): ಮೇಕೆದಾಟು ಪಾದಯಾತ್ರೆ ಸಂದರ್ಭದಲ್ಲಿ ಕೋವಿಡ್ ನಿಯಮಾವಳಿ ಉಲ್ಲಂಘಿಸಿದ ಕಾರಣಕ್ಕಾಗಿ ಚಾರಣೆಗೆ ಹಾಜರಾಗುವಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಲಯದಿಂದ ಸಮನ್ಸ್ ಜಾರಿಯಾಗಿದೆ.

ನಾಳೆ(ಮೇ 24) ರಂದು ನಡೆಯುವ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಲಾಗಿದೆ. ಮೇಕೆದಾಟು ಯೋಜನೆ ಜಾರಿಗೊಳಿಸುವಂತೆ ಆಗ್ರಹಿಸಿ ಜನವರಿ ಹಾಗೂ ಫೆಬ್ರವರಿಯಲ್ಲಿ ಎರಡು ಹಂತದಲ್ಲಿ ತಲಾ ಐದು ದಿನ ಕಾಂಗ್ರೆಸ್ ನಾಯಕರು ಪಾದಯಾತ್ರೆ ನಡೆಸಿದ್ದರು. ಈ ವೇಳೆ ಕೋವಿಡ್​ ನಿಯಮ ಉಲ್ಲಂಘಿಸಲಾಗಿದೆ ಎಂದು ಸಮನ್ಸ್​ ಜಾರಿಯಾಗಿದೆ.

ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಮೇಕೆದಾಟು ಸಮೀಪದ ಸಂಗಮ ಸ್ಥಳದಿಂದ ಆರಂಭವಾಗಿದ್ದ ಪಾದಯಾತ್ರೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆದಿತ್ತು.

10 ದಿನಗಳ ನಿರಂತರ ಕಾಲ್ನಡಿಗೆ ಮೂಲಕ ರಾಮನಗರದಿಂದ ಬೆಂಗಳೂರು ತಲುಪಲು ಪಾದಯಾತ್ರೆ ಕಾರ್ಯಕ್ರಮ ರೂಪಿಸಲಾಗಿತ್ತು. ಆದರೆ ಕೋವಿಡ್ ನಿಯಮಾವಳಿಗಳನ್ನು ಮುಂದಿಟ್ಟು ಎದುರಾದ ಆಕ್ಷೇಪಗಳ ಹಿನ್ನೆಲೆ ಪಾದಯಾತ್ರೆಯನ್ನು ಕಾಂಗ್ರೆಸ್ ನಾಯಕರು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದರು. ಕೋವಿಡ್ ಪ್ರಕರಣಗಳು ಕಡಿಮೆಯಾದ ಹಿನ್ನೆಲೆ ಫೆಬ್ರವರಿ ತಿಂಗಳಲ್ಲಿ ಎರಡನೇ ಹಂತದ ಪಾದಯಾತ್ರೆ ನಡೆಸಿದ್ದರು.

ನ್ಯಾಯಾಲಯದ ಆಕ್ಷೇಪ ಹಾಗೂ ರಾಜ್ಯ ಸರ್ಕಾರದ ವಿರೋಧದ ಹಿನ್ನೆಲೆ ಪಾದಯಾತ್ರೆಯನ್ನು ಕಾಂಗ್ರೆಸ್ ನಾಯಕರು ಎರಡು ಹಂತದಲ್ಲಿ ನಡೆಸಿದ್ದರು. ಪಾದಯಾತ್ರೆ ಸಂದರ್ಭ ಅತಿ ಹೆಚ್ಚು ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಒಗ್ಗೂಡಿಸಿ ಕೋವಿಡ್ ನಿಯಮಾವಳಿಗಳನ್ನು ಪಾಲಿಸದ ಹಿನ್ನೆಲೆ ಕಾಂಗ್ರೆಸ್ ನಾಯಕರ ವಿರುದ್ಧ ವಿವಿಧ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿತ್ತು. ಇದೀಗ ಇವುಗಳ ವಿಚಾರಣೆಯನ್ನು ಆರಂಭಿಸಿರುವ ಜನಪ್ರತಿನಿಧಿಗಳ ನ್ಯಾಯಾಲಯ ಸಿದ್ದರಾಮಯ್ಯಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ.