ಮನೆ ರಾಜ್ಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ತುಂಬಿ-ತುಳುಕುತ್ತಿರುವ ಕೆರೆ ಕಟ್ಟೆಗಳು

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ತುಂಬಿ-ತುಳುಕುತ್ತಿರುವ ಕೆರೆ ಕಟ್ಟೆಗಳು

0

ಚಾಮರಾಜನಗರ(Chamarajanagara): ಜುಲೈ ಅಂತ್ಯ ಹಾಗೂ ಆಗಸ್ಟ್ ವಾರದ ಆರಂಭದಲ್ಲಿ ಕೇರಳ ಮತ್ತು ರಾಜ್ಯದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕೆರೆ ಕಟ್ಟೆಗಳು ತುಂಬಿ ತುಳುಕುತ್ತಿದ್ದು, ಪ್ರಾಣಿ ಪಕ್ಷಿಗಳು ಸ್ವಚ್ಛಂದವಾಗಿ ವಿಹರಿಸುತ್ತಿವೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ 373 ಕೆರೆಗಳಿದ್ದು, ಇವುಗಳಲ್ಲಿ 350ಕ್ಕೂ ಹೆಚ್ಷು ಕೆರೆಗಳು ತುಂಬಿವೆ. ಸಫಾರಿಗರ ಕಣ್ಣಿಗೆ ಹಬ್ಬದ ನೋಟವನ್ನೇ ಕಾಡು ಕಣ್ತುಂಬಿಸುತ್ತಿದೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವು ತಮಿಳುನಾಡಿನ ಮಧುಮಲೈ, ಕೇರಳದ ವೈನಾಡು ವನ್ಯಜೀವಿ ಅಭಯಾರಣ್ಯಕ್ಕೆ ಹೊಂದಿಕೊಂಡಿದ್ದು, ಈ ಭಾಗದಲ್ಲಿ ಸತತವಾಗಿ ಮಳೆಯಾದ್ದರಿಂದ 13 ವಲಯಗಳಲ್ಲಿನ 350 ಕೆರೆಗಳು ಭರ್ತಿಯಾಗಿರುವುದು ಪರಿಸರ ಪ್ರೇಮಿಗಳ ಸಂತಸಕ್ಕೆ ಕಾರಣವಾಗಿದೆ.

ಮಳೆಗಾಲದಲ್ಲಿ ಜಲ ಮೂಲಗಳಿಂದ ತುಂಬುವ ಕೆರೆಗಳು ಬೇಸಿಗೆಯಲ್ಲಿ ಪ್ರಾಣಿಗಳಿಗೆ ನೀರಿನ ದಾಹ ತೀರಿಸುತ್ತವೆ. ಸದಾ ಕಾಡಿನ ಕೆರೆಗಳಲ್ಲಿ ನೀರು ಇರಬೇಕು, ಪ್ರಾಣಿಗಳಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಕೆಲವೆಡೆ ಸೋಲಾರ್ ಪಂಪ್​ಗಳ ಮೂಲಕವೂ ಕೆರೆಗೆ ನೀರು ತುಂಬಿಸಲಾಗುತ್ತಿತ್ತು. ಆದರೆ, ಈಗಾಗಲೇ ಕೆರೆಗಳು ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಬೇಸಿಗೆಯಲ್ಲಿ ಅಷ್ಟೇನೂ ನೀರಿನ ಕೊರತೆ ಬಾಧಿಸದು ಎಂಬ ವಿಶ್ವಾಸದಲ್ಲಿ ಅರಣ್ಯ ಇಲಾಖೆಯಿದೆ.

ಬಂಡೀಪುರ‌ ವಲಯದ ನೀಲಕಂಠರಾವ್ ಕೆರೆ, ಸೊಳ್ಳಿಕಟ್ಟೆ, ತಾವರಗಟ್ಟೆ, ಕುಂದುಕೆರೆ ವಲಯದ ಮಾಲಗಟ್ಟೆ, ಕಡಬೂರುಕಟ್ಟೆ, ದೇವರ ಮಾಡು, ಗೋಪಾಲಸ್ವಾಮಿ ಬೆಟ್ಟ ವಲಯದ ಹಿರಿ ಕೆರೆ ಕೋಳಚಿಕಟ್ಟೆ, ಹಗ್ಗದಹಳ್ಳದ ಕಟ್ಟೆ ಮುಂತಾದ ಕೆರೆಗಳು ತುಂಬಿವೆ. ಎಲ್ಲ ವಲಯದಲ್ಲಿ ಮಳೆಯಾಗಿರುವುದರಿಂದ ಹಸಿರು ಸಹ ಉತ್ತಮವಾಗಿದ್ದು ಮೇವು ಸಮೃದ್ಧವಾಗಿದೆ. ನುಗು, ಯಡಿಯಲ, ಓಂಕಾರ, ಮೊಳೆಯೂರು ವಲಯದ ಭಾಗದಲ್ಲಿರುವ ಕೆರೆಗಳು ಸಹ ಭರ್ತಿಯಾಗಿದೆ.

ಸಫಾರಿ ವಲಯದಲ್ಲಂತೂ ಕಾಡು ಹಚ್ಚಹಸಿರು ಹೊದ್ದು ನಿಂತಿದ್ದು ಆನೆ, ಕಾಡೆಮ್ಮೆ, ಜಿಂಕೆಗಳ ಹಿಂಡು ಆಗಾಗ್ಗೆ ಹುಲಿಗಳು ಕಾಣಸಿಗುತ್ತಿದೆ.

ಹಿಂದಿನ ಲೇಖನಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣ: 11 ಆರೋಪಿಗಳ ಬಿಡುಗಡೆ ಕ್ರಮ ರದ್ದಿಗೆ ಒತ್ತಾಯಿಸಿ ಸುಪ್ರೀಂಗೆ 6000 ಮನವಿ
ಮುಂದಿನ ಲೇಖನಕತ್ತಿ ಬೀಸಿ ಇಬ್ಬರ ಮೇಲೆ ಹಲ್ಲೆ; ಆರೋಪಿ ವಶಕ್ಕೆ