ಮನೆ ಸುದ್ದಿ ಜಾಲ ಪ್ರಥಮ ಬಾರಿಗೆ ರಾಜ್ಯದ ಚಾಮರಾಜನಗರದಲ್ಲಿ ಕಾಗದ ರಹಿತ ನೋಂದಣಿಗೆ ಚಾಲನೆ

ಪ್ರಥಮ ಬಾರಿಗೆ ರಾಜ್ಯದ ಚಾಮರಾಜನಗರದಲ್ಲಿ ಕಾಗದ ರಹಿತ ನೋಂದಣಿಗೆ ಚಾಲನೆ

0

ಚಾಮರಾಜನಗರ  ಕಾವೇರಿ 2.0 ಪೋರ್ಟಲ್ ಮೂಲಕ ರಾಜ್ಯ ಸರ್ಕಾರದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ರಾಜ್ಯದಲ್ಲಿ ಇದೇ ಪ್ರಥಮ ಬಾರಿಗೆ ಚಾಮರಾಜನಗರದ ಉಪನೋಂದಣಿ ಕಚೇರಿಯಲ್ಲಿ ಕಾಗದ ರಹಿತ ನೋಂದಣಿಗೆ ಮುದ್ರಾಂಕ ಇಲಾಖೆಯ ಮಹಾಪರಿವೀಕ್ಷಕ ಮತ್ತು ಮುದ್ರಾಂಕಗಳ ಆಯುಕ್ತ ಎಂ. ಪಿ. ಮುಲ್ಲೈ ಮುಗಿಲನ್ ಅವರು ಚಾಲನೆ ನೀಡಿದರು ಎನ್ನಲಾಗಿದೆ.

ಚಾಮರಾಜನಗರದ ತಾಲೂಕು ಕಚೇರಿ ಆವರಣದಲ್ಲಿರುವ ನೋಂದಣಿ ಕಚೇರಿಯಲ್ಲಿ ಗುರುವಾರ(ಏ 30) ರಂದು ಜಿಲ್ಲೆಯ ರೈತರಿಗೆ ಕಾಗದ ರಹಿತ ನೋಂದಣಿ ಪ್ರಕ್ರಿಯೆಗೆ ಕಂಪ್ಯೂಟರ್ ಬಟನ್ ಒತ್ತುವುದರ ಮೂಲಕ ಚಾಲನೆ ನೀಡಿದರು ಎನ್ನಲಾಗಿದೆ. ಬಳಿಕ ಅವರು, ಮಾತನಾಡಿ ನೂತನ ಕಾಗದ ರಹಿತ ನೋಂದಣಿ ವ್ಯವಸ್ಥೆಯು ನಾಗರಿಕ ಕೇಂದ್ರಿತ, ಪಾರದರ್ಶಕ ಹಾಗೂ ಪರಿಣಾಮಕಾರಿ ನೋಂದಣಿ ಸೇವೆಗಳನ್ನು ಒದಗಿಸುವಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಸಾಂಪ್ರದಾಯಿಕ ಕಾಗದ ಆಧಾರಿತ ನೋಂದಣಿ ವ್ಯವಸ್ಥೆಯಿಂದ ಸಂಪೂರ್ಣ ಡಿಜಿಟಲ್, ಕಾಗದರಹಿತ ವ್ಯವಸ್ಥೆಗೆ ಆಗುತ್ತಿರುವ ಪರಿವರ್ತನೆ, ಆಸ್ತಿ ವ್ಯವಹಾರಗಳನ್ನು ನಿರ್ವಹಿಸುವ ವಿಧಾನದಲ್ಲಿ ಮಹತ್ತರ ಬದಲಾವಣೆ ಜೊತೆಗೆ ವಿಶ್ವಾಸಾರ್ಹತೆ ಹೆಚ್ಚುತ್ತದೆ ಎಂದು ತಿಳಿಸಿದ್ದಾರೆ.

ಈ ಕುರಿತ್ತಾಗಿ ಹೊಸ ವ್ಯವಸ್ಥೆಯ ಪ್ರಯೋಜನೆಯಡಿ ಕೇವಲ ಸುಧಾರಣೆಯಷ್ಟೇ ಅಲ್ಲ. ಹಳೆಯ ಕೈಚಾಲಿತ ವ್ಯವಸ್ಥೆಯಲ್ಲಿದ್ದ ಸಮಸ್ಯೆಗಳು ಮತ್ತು ತೊಂದರೆಗಳಿಗೆ ಸಮಗ್ರ ಪರಿಹಾರ ಒದಗಿಸಲಿವೆ ಎಂಬುದಾಗಿದೆ. ಕಾಗದದ ವ್ಯವಸ್ಥೆಯಿಂದ ಭೌತಿಕ ದಾಖಲೆಗಳು ನಕಲಿ, ಅಕ್ಷರ ಬದಲಾವಣೆ, ಪುಟ ಬದಲಾವಣೆ ಹಾಗೂ ನಂತರದ ತಿದ್ದುಪಡಿಗಳಿಗೆ ಒಳಪಡುವ ಸಾಧ್ಯತೆಗಳು ಇದ್ದವು. ಪರಿಶೀಲನೆ ಬಹುತೇಕ ಕೈಚಾಲಿತವಾಗಿದ್ದು, ದೋಷಗಳ ಸಾಧ್ಯತೆ ಹೆಚ್ಚು ಇರುತ್ತದೆ ಎಂದು ಹೇಳಿದ್ದಾರೆ. ಈದರ ಪ್ರಕಾರ ನೂತನ ಕಾಗದ ರಹಿತ ವ್ಯವಸ್ಥೆಯಿಂದ ಡಿಜಿಟಲ್ ದಾಖಲೆಗಳು ಎನ್​ಕ್ರಿಪ್ಷನ್, ಆಡಿಟ್ ಟ್ರೇಲ್ ಮತ್ತು ಹ್ಯಾಶ್ ಆಧಾರಿತ ಪರಿಶೀಲನೆಯ ಮೂಲಕ ಸುರಕ್ಷಿತವಾಗಿರುತ್ತವೆ. ಡಿಜಿಟಲ್ ಸಹಿ ಮಾಡಿದ ನಂತರ ಯಾವುದೇ ಬದಲಾವಣೆ ಪತ್ತೆಯಾಗಲಿದೆ ಎಂದು ಅವರು ತಿಳಿಸಿದರು ಎನ್ನಲಾಗಿದೆ.

ಚಾಮರಾಜನಗರ ಜಿಲ್ಲೆಯಿಂದಲೇ  ಕಾಗದ ರಹಿತ ನೋಂದಣಿಗೆ ಚಾಲನೆ ನೀಡಿದ್ದು, ಇನ್ನು ಎರಡು ಮೂರು ತಿಂಗಳಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಈ ವ್ಯವಸ್ಥೆಯನ್ನು ಹಂತ ಹಂತವಾಗಿ ಜಾರಿ ಮಾಡಲಾಗುತ್ತದೆ. ಸಾರ್ವಜನಿಕರಿಗೆ ನೇರವಾಗಿ ಈ ವ್ಯವಸ್ಥೆಯಡಿಯಲ್ಲಿ ತಮ್ಮ ಅಸ್ತಿಗಳನ್ನು ನೋಂದಣಿ ಮಾಡಲು ಅವಕಾಶ ಇದೆ. ಎಲ್ಲವು ಆಧಾರ್ ಬೇಸ್ ಮೇಲೆ ನಡೆಯುತ್ತದೆ. ಇದರಿಂದ ಯಾವುದೇ ರೀತಿ ಮೋಸ ಆಗುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ಕಾವೇರಿ 2.0 ಪೋರ್ಟಲ್ ಅಡಿ ಅನುಷ್ಠಾನವಾಗುತ್ತಿರುವ ಕಾಗದರಹಿತ ನೋಂದಣಿ ಪ್ರಕ್ರಿಯೆ ಸರಳ, ಪಾರದರ್ಶಕ ಹಾಗೂ ಸಮಯ ಉಳಿತಾಯವಾಗುವಂತೆ ವಿನ್ಯಾಸಗೊಳಿಸಲಾಗಿದೆ. ನೂತನ ವ್ಯವಸ್ಥೆಯು ಡಿಜಿಟಲ್ ಭವಿಷ್ಯದತ್ತ ಒಂದು ಮಹತ್ವದ ಹೆಜ್ಜೆಯಾಗಿದ್ದು, ತಂತ್ರಜ್ಞಾನದ ಮೂಲಕ ಸಾರ್ವಜನಿಕ ಸೇವೆಗಳನ್ನು ಸುಧಾರಿಸಲು ಸರ್ಕಾರದ ಬದ್ಧತೆಯನ್ನು ತೋರಿಸುತ್ತದೆ. ಕಾಗದರಹಿತ ನೋಂದಣಿ ವ್ಯವಸ್ಥೆಯ ಮೂಲಕ ಪಾರದರ್ಶಕತೆ, ವೇಗ ಮತ್ತು ನಾಗರಿಕರಿಗೆ ಅನುಕೂಲ ಮಾಡುವ ಉದ್ದೇಶವನ್ನು ನಮ್ಮ ಸರ್ಕಾರ ಹೊಂದಿದೆ ಎಂದು ಹೇಳಿದರು.

ಜಿಲ್ಲಾ ಪತ್ರ ಬರಹಗಾರರ ಸಂಘದವರು ತಮ್ಮ ಬೇಡಿಕೆಗಳ ಕುರಿತ ಮನವಿಯನ್ನು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಮಹಾಪರಿವೀಕ್ಷಕ ಮತ್ತು ಮುದ್ರಾಂಕಗಳ ಆಯುಕ್ತರಿಗೆ ಸಲ್ಲಿಸಿದರು. ಮತ್ತು ನೋಂದಣಿ ಉಪ ಮಹಾಪರಿವೀಕ್ಷಕ ಹೆಚ್.ಎನ್.ಪ್ರಭಾಕರನ್, ಚಾಮರಾಜನಗರ ಜಿಲ್ಲಾ ನೋಂದಣಾಧಿಕಾರಿ ಕಿರಣ್, ಮಂಡ್ಯ ಜಿಲ್ಲಾ ನೋಂದಣಾಧಿಕಾರಿ ಎಸ್.ಸಿದ್ದೇಶ್, ಕೇಂದ್ರ ಸ್ಥಾನಿಕ ಸಹಾಯಕ ಬಿ.ಜಿ.ಮಂಜುನಾಥ್ ಸೇರಿದಂತೆ ಇತರರು ಇದ್ದರು ಎಂಬುದ್ದಾಗಿ ತಿಳಿದುಬಂದಿದೆ.