ಮನೆ ರಾಜ್ಯ ಮೆಟ್ರೋದಲ್ಲಿ ಮಹಿಳೆಯರ ಅಶ್ಲೀಲ ವಿಡಿಯೋ ಚಿತ್ರೀಕರಿಸಿದ್ದ, ಆರೋಪಿ ಅರ್ಜಿ ವಜಾ

ಮೆಟ್ರೋದಲ್ಲಿ ಮಹಿಳೆಯರ ಅಶ್ಲೀಲ ವಿಡಿಯೋ ಚಿತ್ರೀಕರಿಸಿದ್ದ, ಆರೋಪಿ ಅರ್ಜಿ ವಜಾ

0

ಬೆಂಗಳೂರು : ನಮ್ಮ ಮೆಟ್ರೋ ರೈಲಿನಲ್ಲಿ ಮಹಿಳೆಯರ ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಿ ‘ಬೆಂಗಳೂರು ಮೆಟ್ರೋ ಚಿಕ್ಸ್’ ಎಂಬ ಇನ್‌ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡುತ್ತಿದ್ದ, ದಿಗಂತ್.ಬಿ.ಕೆ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ. ಅಷ್ಟೇ ಅಲ್ಲದೆ ‘ನೀವು ಮಹಿಳೆಯರನ್ನು ಎಲ್ಲಿಯೂ ಸುರಕ್ಷಿತವಾಗಿರಲು ಬಿಡುವುದಿಲ್ಲ, ಯಾವ ರೀತಿಯ ಮನುಷ್ಯರು ನೀವು’ ಎಂದು ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ತನ್ನ ವಿರುದ್ಧದ ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಗೊಳಿಸುವಂತೆ ಕೋರಿ ‘ಬೆಂಗಳೂರು ಮೆಟ್ರೋ ಚಿಕ್ಸ್’ ಎಂಬ ಇನ್‌ಸ್ಟಾಗ್ರಾಮ್​ ಖಾತೆ ಹೊಂದಿದ್ದ ದಿಗಂತ್.ಬಿ.ಕೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠವು ತಿರಸ್ಕರಿಸಿದೆ.

ಇನ್ನು ವಿಚಾರಣೆ ಆರಂಭವಾಗುತ್ತಿದ್ದಂತೆ ಪೀಠವು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ‘ನೀವು ಮಹಿಳೆಯರ ಮುಂಭಾಗ ಮತ್ತು ಹಿಂಭಾಗದಿಂದ ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಿ ಅದನ್ನು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಾಕುತ್ತೀರಾ, ಯಾವ ರೀತಿಯ ಮನುಷ್ಯರು ನೀವು? ಮೆಟ್ರೋದಲ್ಲಿ ಮಾತ್ರವಲ್ಲ, ಮಹಿಳೆಯರನ್ನು ಎಲ್ಲಿಯೂ ಸುರಕ್ಷಿತವಾಗಿರಲು ನೀವು ಬಿಡುವುದಿಲ್ಲ, ನಾಚಿಕೆಯಾಗಲ್ವಾ’ ಎಂದು ಕಿಡಿಕಾರಿದೆ.

ಇನ್ನು ಅರ್ಜಿದಾರರ ಪರ ವಕೀಲ ಎಸ್​​ಆರ್‌ ಶ್ರೀಪ್ರಸಾದ್‌ ವಾದ ಮಂಡಿಸಿದ್ದು, ‘ಮೆಟ್ರೋದಲ್ಲಿ ಸಿಸಿಟಿವಿ ಕ್ಯಾಮೆರಾಗಳಿವೆ. ಇಲ್ಲಿ ಪೊಲೀಸರೇ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿದ್ದಾರೆ ಹೊರತು ಯಾವುದೇ ಸಂತ್ರಸ್ತ ಮಹಿಳೆಯರು ದೂರು ನೀಡಿಲ್ಲ. ಹಾಗಾಗಿ ಇಲ್ಲಿ ಯಾವುದೇ ಅಪರಾಧ ನಡೆದಿಲ್ಲ’, ಎಂದು ವಾದಿಸಿದರು.

ಇದಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿದ ಪೀಠವು, ‘ಇನ್‌ಸ್ಟಾಗ್ರಾಂನಲ್ಲಿ ‘ಮೆಟ್ರೊ ಚಿಕ್ಸ್‌ ರೀಲ್ಸ್‌’ ಎಂಬ ಪ್ರತ್ಯೇಕ ಪೇಜ್‌ ಸೃಷ್ಟಿಸಲಾಗಿದೆ. ಇಂತಹ ಗಂಭೀರ ಪ್ರಕರಣಗಳಲ್ಲಿ ಕೇವಲ ತಾಂತ್ರಿಕ ಅಂಶಗಳನ್ನು ಮುಂದಿಟ್ಟುಕೊಂಡು ತಪ್ಪಿಸಿಕೊಳ್ಳಲು ಆಗುವುದಿಲ್ಲ. ಕೆಲವು ವಿಚಾರಗಳಲ್ಲಿ ತಾಂತ್ರಿಕತೆಗಿಂತ ನೈತಿಕತೆ ಮತ್ತು ಸುರಕ್ಷತೆ ಮುಖ್ಯ, ಆ ತಾಂತ್ರಿಕ ವಾದಗಳಿಗೆ ಬ್ರೇಕ್ ಹಾಕುವ ಸಮಯ ಬಂದಿದೆ’ ಎಂದು ಹೇಳಿದೆ.

ಅಲ್ಲದೆ, ಮಹಿಳೆಯರನ್ನು ಅವರ ಅನುಮತಿಯಿಲ್ಲದೆ ಅಶ್ಲೀಲವಾಗಿ ಚಿತ್ರೀಕರಿಸಿ ಸೋಶಿಯಲ್​ ಮೀಡಿಯಾಗೆ ಅಪ್‌ಲೋಡ್ ಮಾಡುವುದು ಅಪರಾಧವಲ್ಲದೆ ಮತ್ತೇನು? ಎಂದು ಖಾರವಾಗಿ ಪ್ರಶ್ನಿಸಿದ ಪೀಠ, ಆರೋಪಿಯ ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ.

ದಿಗಂತ್ ಬಿ.ಕೆ ಎಂಬಾತ ನಮ್ಮ ಮೆಟ್ರೋ ರೈಲಿನಲ್ಲಿ ಮಹಿಳೆಯರ ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಿ ‘ಬೆಂಗಳೂರು ಮೆಟ್ರೋ ಚಿಕ್ಸ್’ ಎಂಬ ಇನ್‌ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡುತ್ತಿದ್ದ. ಈ ಬಗ್ಗೆ ಬನಶಂಕರಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದರು. 14 ವಿಡಿಯೋ ಪೋಸ್ಟ್ ಮಾಡಿದ್ದ ಆರೋಪಿ ವಿರುದ್ಧ FIR ದಾಖಲಿಸಿದ್ದರು. 2025ರ ಮೇ ತಿಂಗಳಲ್ಲಿ ಬಿ.ಕೆ. ದಿಗಂತ್​​ನನ್ನು ಬನಶಂಕರಿ ಪೊಲೀಸರು ಬಂಧಿಸಿದ್ದರು.

ಈತನ ಇನ್‌ಸ್ಟಾಗ್ರಾಮ್ ಖಾತೆ 6,000ಕ್ಕೂ ಹೆಚ್ಚು ಫಾಲೋವರ್‌ಗಳನ್ನು ಹಾಗೂ ಟೆಲಿಗ್ರಾಮ್‌ನಲ್ಲಿ 1,000ಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿದೆ. ಪ್ರಸ್ತುತ ಬೆಂಗಳೂರಿನ ಹೆಚ್ಚುವರಿ ಸಿಜೆಎಂ ನ್ಯಾಯಾಲಯದಲ್ಲಿ ಈತನ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 78(2), 238(ಸಿ) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.