ಮನೆ ಅಪರಾಧ ಗಾಂಜಾ ಮಾರಾಟದಲ್ಲಿ ಪೇದೆಗಳು ಸಿಕ್ಕಿಬಿದ್ದ ಪ್ರಕರಣ: ತನಿಖಾಧಿಕಾರಿಗಳ ಅಮಾನತು, ಡಿಸಿಪಿಗಳಿಗೆ ನೋಟಿಸ್

ಗಾಂಜಾ ಮಾರಾಟದಲ್ಲಿ ಪೇದೆಗಳು ಸಿಕ್ಕಿಬಿದ್ದ ಪ್ರಕರಣ: ತನಿಖಾಧಿಕಾರಿಗಳ ಅಮಾನತು, ಡಿಸಿಪಿಗಳಿಗೆ ನೋಟಿಸ್

0

ಬೆಂಗಳೂರು : ಸಿಎಂ ನಿವಾಸದ ಭದ್ರತೆಗೆ ನಿಯೋಜನೆಗೊಂಡಿದ್ದ ಇಬ್ಬರು ಕಾನ್‌ಸ್ಟೆಬಲ್‌ಗಳು ಗಾಂಜಾ ಮಾರಾಟ ಮಾಡಿ ಸಿಕ್ಕಿಬಿದ್ದಿರುವ ಇಬ್ಬರು ಕಾನ್ ಸ್ಟೆಬಲ್ ಗಳ ಪ್ರಕರಣದಲ್ಲಿ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿಲ್ಲ ಎಂಬ ಆರೋಪದ ಮೇರೆಗೆ ತನಿಖಾಧಿಕಾರಿ ಹಾಗೂ ಆರ್‌.ಟಿ. ನಗರ ಪೊಲೀಸ್‌ ಠಾಣೆ ಇನ್ಸ್‌ಪೆಕ್ಟರ್‌ ಮತ್ತು ಪಿಎಸ್‌ಐ ಅಮಾನತುಗೊಳಿಸಲಾಗಿದೆ.

ಇನ್ಸ್‌ಪೆಕ್ಟರ್‌ ಅಶ್ವತ್ಥಗೌಡ ಹಾಗೂ ಪಿಎಸ್‌ಐ ವೀರಭದ್ರ ಅವರನ್ನು ನಗರ ಪೊಲೀಸ್‌ ಆಯುಕ್ತ ಕಮಲ್‌ಪಂತ್‌ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದು, ಪ್ರಕರಣದಲ್ಲಿ ಪೊಲೀಸರೇ ಭಾಗಿಯಾಗಿರುವ ಸಂಬಂಧ ಉತ್ತರ ನೀಡುವಂತೆ ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್‌ ಜೋಷಿ ಹಾಗೂ ವಿಐಪಿ ಡಿಸಿಪಿ ಮಂಜುನಾಥ್‌ ಅವರಿಗೆ ಸೂಚಿಸಿದ್ದಾರೆ.

ಘಟನೆ ವಿವರ:  ಜನವರಿ 13ರಂದು ಸಿಎಂ ಮನೆ ಮುಂದೆ ಭದ್ರತೆಗೆ ನಿಯೋಜನೆಗೊಂಡಿದ್ದ ಕೋರಮಂಗಲ ಠಾಣೆಯ ಇಬ್ಬರು ಕಾನ್‌ಸ್ಟೆಬಲ್‌ಗಳಾದ ಸಂತೋಷ್‌ಕುಮಾರ್‌ ಹಾಗೂ ಶಿವಕುಮಾರ್‌ ಡ್ರಗ್‌ ಪೆಡ್ಲರ್‌ಗಳಿಂದ ಗಾಂಜಾ ತರಿಸಿಕೊಂಡಿದ್ದರು.

ಆರ್‌.ಟಿ. ನಗರದ 80 ಅಡಿ ರಸ್ತೆಯಲ್ಲಿ ಆಟೋವೊಂದರಲ್ಲಿ ನಾಲ್ವರು ಅನುಮಾನಾಸ್ಪದವಾಗಿ ತೆರಳುತ್ತಿದ್ದರು. ಇದನ್ನು ಗಮನಿಸಿದ ಸ್ಥಳೀಯರು ಕಂಟ್ರೋಲ್‌ ರೂಂಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಮಾಹಿತಿ ದೊರೆತ ಕೂಡಲೇ ಪಕ್ಕದಲ್ಲಿದ್ದ ಹೊಯ್ಸಳ ಸಿಬ್ಬಂದಿ ಆಟೊ ತಡೆದು ಪರಿಶೀಲಿಸಿದಾಗ ಗಾಂಜಾ ಪತ್ತೆಯಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಿದಾಗ ಇಬ್ಬರು ಕಾನ್‌ಸ್ಟೆಬಲ್‌ಗಳು ಇರುವುದು ಗೊತ್ತಾಗಿದೆ.


ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಒಬ್ಬ ಡೆಲಿವರಿ ಬಾಯ್‌ ಸೇರಿ ಮತ್ತೆ ಮೂವರನ್ನು ಬಂಧಿಸಿದ್ದರು. ಸಿಎಂ ನಿವಾಸದ ಭದ್ರತೆಗೆ ನಿಯೋಜಿಸುವ ಮುನ್ನ ಸಿಬ್ಬಂದಿಗಳನ್ನು ಪೊಲೀಸ್‌ ಅಧಿಕಾರಿಗಳು ಪರಿಶೀಲಿಸಬೇಕು. ಆದರೆ, ಪೂರ್ವಾಪರ ಪರಿಶೀಲಿಸದೇ ನೇಮಕ ಮಾಡಿರುವುದನ್ನು ಪ್ರಶ್ನಿಸಿ ಆಗ್ನೇಯ ವಿಭಾಗದ ಶ್ರೀನಾಥ್‌ ಜೋಷಿ ಹಾಗೂ ವಿಐಪಿ ಡಿಸಿಪಿ ಮಂಜುನಾಥ್‌ ಬಾಬು ಅವರಿಗೆ ನೋಟಿಸ್‌ ನೀಡಲಾಗಿದೆ.

ಡ್ರಗ್‌ ಪೆಡ್ಲರ್‌ಗಳನ್ನು ಬಂಧಿಸಿದ್ದ ಆರ್‌.ಟಿ. ನಗರದ ಇನ್ಸ್‌ಪೆಕ್ಟರ್‌ ಅಶ್ವತ್ಥಗೌಡ ಈ ವಿಷಯವನ್ನು ಮೇಲಾಧಿಕಾರಿಗಳಿಗೆ ತಿಳಿಸಿರಲಿಲ್ಲ. ವರದಿಯನ್ನು ಮೇಲಾಧಿಕಾರಿಗಳಿಗೆ ಸಲ್ಲಿಸಿರಲಿಲ್ಲ. ಹೀಗಾಗಿ, ಆರೋಪಿಗಳನ್ನು ನ್ಯಾಯಾಲಯಕ್ಕೆ ಒಪ್ಪಿಸಿದಾಗ ಪ್ರಕರಣದ ಸಂಬಂಧ ಸಮರ್ಥನೀಯವಾದ ತಕರಾರು ಅರ್ಜಿ ಸಲ್ಲಿಸದೆ ಇರುವುದರಿಂದ ಆರೋಪಿಗಳಿಗೆ ಜಾಮೀನು ಮಂಜೂರಾಗಿದೆ.



ಪ್ರಕರಣದ ವರದಿ ಸಲ್ಲಿಸಿದ ಕ್ಷಣದಲ್ಲೇ ಅಮಾನತು!
ಮಂಗಳವಾರ ಗಾಂಜಾ ಪ್ರಕರಣದಲ್ಲಿಆರೋಪಿಗಳನ್ನು ಬಂಧಿಸಿ ತನಿಖೆ ನಡೆಸಿದ್ದ ವರದಿಯನ್ನು ಸಲ್ಲಿಸಲು ಬುಧವಾರ ಎಸಿಪಿ ರೀನಾ ಸುವರ್ಣ ಹಾಗೂ ಇನ್ಸ್‌ಪೆಕ್ಟರ್‌ ಅಶ್ವತ್ಥಗೌಡ ಆಯುಕ್ತರ ಕಚೇರಿಗೆ ತೆರಳಿದ್ದರು. ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತ ಸುಬ್ರಹ್ಮಣೇಶ್ವರರಾವ್‌ ಅವರಿಗೆ ವರದಿ ಒಪ್ಪಿಸಿದ ಬಳಿಕ ನಗರ ಪೊಲೀಸ್‌ ಆಯುಕ್ತ ಕಮಲ್‌ಪಂತ್‌ ಅವರಿಗೆ ಸಲ್ಲಿಸಲಾಗಿತ್ತು. ವರದಿ ಪರಿಶೀಲಿಸಿದ ಅರ್ಧ ತಾಸಿನಲ್ಲೇ ಸಂಬಂಧಪಟ್ಟ ತನಿಖಾಧಿಕಾರಿ ಅಶ್ವತ್ಥಗೌಡ ಹಾಗೂ ಎಸ್‌ಐ ವೀರಭದ್ರ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದರು ಎಂದು ಮೂಲಗಳಿಂದ ತಿಳಿದು ಬಂದಿದೆ.