ಮನೆ ಸುದ್ದಿ ಜಾಲ ಮೈಸೂರಿಗೆ ಪ್ರಧಾನಿ ಮೋದಿ: ಭರದಿಂದ ಸಾಗಿದ ಸಕಲ ಸಿದ್ಧತೆ; ಸಂಸದ ಪ್ರತಾಪ್‌ ಸಿಂಹ

ಮೈಸೂರಿಗೆ ಪ್ರಧಾನಿ ಮೋದಿ: ಭರದಿಂದ ಸಾಗಿದ ಸಕಲ ಸಿದ್ಧತೆ; ಸಂಸದ ಪ್ರತಾಪ್‌ ಸಿಂಹ

0

ಮೈಸೂರು (Mysuru):ಜೂನ್‌ 21 ರಂದು ಮೈಸೂರಿನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದು, ಅದಕ್ಕಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಸಂಸದ ಪ್ರತಾಪ್‌ ಸಿಂಹ ಹೇಳಿದರು.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ಅವರ ಕಾರ್ಯಾಲಯದ ಸೂಚನೆಯಂತೆ ಒಂದೇ ಜಾಗದಲ್ಲಿ ಅಧಿಕೃತವಾಗಿ ಕಾರ್ಯಕ್ರಮ ನಡೆಸಲಾಗುವುದು. ಜೂನ್ 21ರಂದು ಬೆಳಿಗ್ಗೆ 6:30ಕ್ಕೆ ಅಂಬಾವಿಲಾಸ ಅರಮನೆಗೆ ಪ್ರಧಾನಿ ಆಗಮಿಸಲಿದ್ದಾರೆ. ವೇದಿಕೆಯಲ್ಲಿ ಪ್ರಧಾನಿ ಜೊತೆ ಮುಖ್ಯಮಂತ್ರಿ, ರಾಜ್ಯಪಾಲರು, ಕೇಂದ್ರ ಆಯುಷ್ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮಾತ್ರವೇ ಅವಕಾಶ ಇರಲಿದೆ ಎಂದರು.

ಜೂನ್‌ 20ರಂದೇ ಪ್ರಧಾನಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ಮಧ್ಯಾಹ್ನ 3.30ಕ್ಕೆ ಬೆಂಗಳೂರಿನಿಂದ ಮೈಸೂರಿಗೆ ಆಗಮಿಸಲಿದ್ದಾರೆ. ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದಕ್ಕೆ ಯೋಜಿಸಲಾಗಿದೆ. ಲಕ್ಷ ಫಲಾನುಭವಿಗಳು ಭಾಗಿಯಾಗಲಿದ್ದಾರೆ. ಚಾಮುಂಡಿ ಬೆಟ್ಟ ಹಾಗೂ ಸುತ್ತೂರು ಮಠಕ್ಕೆ ಕರೆತರುವ ಯತ್ನವನ್ನೂ ಮಾಡುತ್ತಿದ್ದೇವೆ. ಜೂನ್‌ 20ರ ಕಾರ್ಯಕ್ರಮ ಇನ್ನೂ ಅಧಿಕೃತವಾಗಿಲ್ಲ. ಅಧಿಕಾರಿಗಳೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.

10 ಸಾವಿರದಿಂದ 15ಸಾವಿರ ಮಂದಿಗೆ ಅಲ್ಲಿ ಅವಕಾಶವಿರಲಿದೆ. ಯೋಗಪಟುಗಳು ಬೆಳಿಗ್ಗೆ 5.30 ರೊಳಗೆ ಅರಮನೆಗೆ ಆಗಮಿಸಬೇಕು. ಬೆಳಿಗ್ಗೆ 6.30ರಿಂದ 7ರವರಗೆ ವೇದಿಕೆ ಕಾರ್ಯಕ್ರಮ ನಡೆಯಲಿದೆ. 7ರಿಂದ 7.45ರವರಗೆ ಪ್ರಧಾನಿ ಮೋದಿ ಅವರೊಂದಿಗೆ ಯೋಗಾಸನಗಳ ಪ್ರದರ್ಶನ ಇರಲಿದೆ. ಇದಕ್ಕಾಗಿ ಸಿದ್ಧತೆ ನಡೆಸಲಾಗುತ್ತಿದೆ. ಯೋಗಪಟುಗಳ ನೋಂದಣಿ ಬಗ್ಗೆಯೂ ನಿರ್ಧಾರವಾಗಿಲ್ಲ ಎಂದು ಹೇಳಿದರು.

ಹಿಂದಿನ ಲೇಖನಮುಂಗಾರು ಬೆಳೆಗಳ ಕನಿಷ್ಟ ಬೆಂಬಲ ಬೆಲೆ ಏರಿಕೆಗೆ ಕೇಂದ್ರ ಸಚಿವ ಸಂಪುಟ ತೀರ್ಮಾನ
ಮುಂದಿನ ಲೇಖನವಕೀಲರಿಗೆ ಅಪಮಾನ ಆರೋಪ: ಪತ್ರದ ಮೂಲಕ ಸಂಸದ ಪ್ರತಾಪ್ ಸಿಂಹ ಸ್ಪಷ್ಟನೆ