ಮೈಸೂರು: ವೈದ್ಯಕೀಯ ವಿದ್ಯಾರ್ಥಿಗಳ ಅಂತಿಮ ಪರೀಕ್ಷೆಯನ್ನು ಮುಂದೂಡುವಂತೆ ಒತ್ತಾಯಿಸಿ ಎಐಡಿಎಸ್ ಓ ಮೈಸೂರು ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು.
ಜಿಲ್ಲಾಧಿಕಾರಿಗಳ ಕಛೇರಿ ಎದುರು ಇಂದು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ, ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳಿಗೆ ತರಗತಿ ಪ್ರಾರಂಭವಾಗಿದ್ದು ಮೇ ತಿಂಗಳಲ್ಲಿ ಜುಲೈ ತಿಂಗಳವರೆಗೂ ಆನ್ ಲೈನ್ ನಲ್ಲಿಯೇ ತರಗತಿಗಳು ನಡೆದಿವೆ. ಈ ಕಾರಣದಿಂದಾಗಿ ಅಗತ್ಯವಿದ್ದಷ್ಟು ಕ್ಲಿನಿಕಲ್ ಪೋಸ್ಟಿಂಗ್ ಸಹ ಆಗಿರಲಿಲ್ಲ. ಈ ವಾಸ್ತವ ಸಮಸ್ಯೆಗಳ ಹಿನ್ನೆಲೆಯಲ್ಲಿ ಅಂತಿಮ ವರ್ಷದ ಪರೀಕ್ಷೆ ಮುಂದೂಡಲು ರಾಜ್ಯದ ವೈದ್ಯಕೀಯ ವಿದ್ಯಾರ್ಥಿಗಳು ಮನವಿ ಮಾಡಿದ್ದೇವೆ ಎಂದರು.
ಎಐಡಿಎಸ್ ಓ ರಾಜ್ಯ ಸಮಿತಿ ಮತ್ತು ವೈದ್ಯಕೀಯ ವಿದ್ಯಾರ್ಥಿಗಳ ಹೋರಾಟ ಸಮಿತಿಯ ನಿಯೋಗವು ಮನವಿಯನ್ನು ರಾಜ್ಯ ಸರ್ಕಾರದ ವೈದ್ಯಕೀಯ ಶಿಕ್ಷಣ ಮಂತ್ರಿಯವರಿಗೆ ಸಲ್ಲಿಸಿ ವಿದ್ಯಾರ್ಥಿಗಳ ಅಹವಾಲನ್ನು ಅವರ ಮುಂದಿಟ್ಟಿದ್ದೆವು. ಮನವಿಯನ್ನು ಪರಿಶೀಲಿಸಿದ ಮಂತ್ರಿಗಳು ಇದು ನಿಜವಾದ ಸಮಸ್ಯೆ ಮತ್ತು ಇದರಲ್ಲಿ ಹೇಳಲಾಗಿರುವ ಕಾರಣಗಳು ಒಪ್ಪುವಂಥದ್ದು ಎಂದು ಹೇಳಿ ವಿವಿಗೆ ಪರೀಕ್ಷೆಯನ್ನು ಮುಂದೂಡುವಂತೆ ಸೂಚನೆಯನ್ನು ನೀಡಿದ್ದರು. ಆದರೆ ರಾಜೀವ್ ಗಾಂಧಿ ಯೂನಿವರ್ಸಿಟಿ ಆಫ್ ಹೆಲ್ತ್ ಸೈನ್ಸ್ ವೈದ್ಯಕೀಯ ಪರೀಕ್ಷೆಗಳ ಕುರಿತು ವೇಳಾಪಟ್ಟಿ ಹೊರಡಿಸಿ ಅಂತಿಮ ವರ್ಷದ ಪರೀಕ್ಷೆಗಳನ್ನು ಫೆ.22ರಂದು ನಡೆಸಲು ನಿರ್ಧರಿಸಿದೆ. ಬಿಕ್ಕಟ್ಟಿನ, ಆತಂಕಮಯ ಸಮಯದಲ್ಲಿ ಓದಲು, ಪರೀಕ್ಷೆಗೆ ತಯಾರಾಗಲು ಸಮಯಾವಕಾಶ ಬೇಕು. ವಿದ್ಯಾರ್ಥಿಗಳ ಆತಂಕಕ್ಕೆ, ಸಮಸ್ಯೆಗೆ ಸ್ಪಂದಿಸಿ ಪರೀಕ್ಷೆಗಳನ್ನು ಮುಂದೂಡಬೇಕು. ಅಂತಿಮ ವರ್ಷದ ಪರೀಕ್ಷೆಗೆ ಅಚ್ಚುಕಟ್ಟಾಗಿ ತಯಾರಾಗಲು ಅಗತ್ಯವಿರುವಷ್ಟು ಕಾಲಾವಕಾಶ ಒದಗಿಸಿ ನಂತರದಲ್ಲಿ ಪರೀಕ್ಷೆಯ ವೇಳಾಪಟ್ಟಿಯನ್ನು ನಿಗದಿಪಡಿಸಿ ಎಂದು ಒತ್ತಾಯಿಸಿದರು.