ಡಾ.ರಾಜ್ಕುಮಾರ್ ಅವರು ಅದ್ಭುತ ನಟರಷ್ಟೇ ಅಲ್ಲದೇ ಅತ್ಯುತ್ತಮ ಗಾಯಕರಾಗಿಯೂ ಗುರುತಿಸಿಕೊಂಡಿದ್ದರು. ಅವರ ಸುಮಧುರ ಕಂಠಕ್ಕೆ ಮನ ಸೋಲದವರೇ ಇಲ್ಲ. ಅಂತಹ ಅಪ್ರತಿಮ ಕಲಾವಿದ ಡಾ.ರಾಜ್ಕುಮಾರ್ ಅವರ ಸಂಗೀತ ಜ್ಞಾನವನ್ನು ಪರಿಚಯಿಸುವ ‘ನಾದಯೋಗಿ ಡಾ.ರಾಜಕುಮಾರ್’ ಎಂಬ ವಿಶೇಷ ಪುಸ್ತಕ ಅನಾವರಣಗೊಂಡಿದೆ. ಆರ್.ಮಂಜುನಾಥ್ ಚವ್ಹಾಣ್ ಹಾಗೂ ಡಾ.ಸೌಮ್ಯ ಮಂಜುನಾಥ್ ಚವ್ಹಾಣ್ ಬರೆದಿರುವ ಈ ಪುಸ್ತಕ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನ ಕಲಾವಿದರ ಸಂಘದಲ್ಲಿ ಅದ್ದೂರಿಯಾಗಿ ನೆರವೇರಿತು ಎನ್ನಲಾಗುತ್ತಿದೆ. ಹಾಗೂ ಡಾ.ರಾಜ್ಕುಮಾರ್ ಪುತ್ರಿ ಪೂರ್ಣಿಮಾ ರಾಮ್ಕುಮಾರ್ ಈ ಪುಸ್ತಕವನ್ನು ಅನಾವರಣ ಮಾಡಿದರು. ರಾಜ್ ಸಹೋದರ ವರದಪ್ಪ ಅವರ ಪುತ್ರಿ ಡಾ.ಲತಾ, ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ಲಹರಿ ಸಂಸ್ಥೆಯ ಮನೋಹರ ನಾಯ್ಡು, ಲಹರಿ ವೇಲು, ಕಾವೇರಿ ಕನ್ನಡ ಸಂಘದ ಧಾರ್ ಎಸ್ ಸಲಾಂ, ತಾಂಜಾನಿಯಾ ಪೂರ್ವ ಆಫ್ರಿಕಾ ಪ್ರತಿನಿಧಿ ಗೌಡ ಅವರು ಈ ಸಮಾರಂಭಕ್ಕೆ ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿದ್ದರು.
ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕನ್ನಡ ಕಣ್ಮಣಿ ಡಾಕ್ಟರ್ ರಾಜ್ಕುಮಾರ್ ಅವರ ಪುಸ್ತಕ ಪೂರ್ವ ಆಫ್ರಿಕಾಕ್ಕೆ ತಲುಪುತ್ತಿರುವುದು ನಾಡು ನುಡಿಯ ಹೆಮ್ಮೆಯ ಪ್ರತೀಕವಾಗಿ ಸದ್ದು ಮಾಡಿದ್ದು. ಪುಸ್ತಕ ಅನಾವರಣಗೊಳಿಸಿ ಮಾತನಾಡಿದ ಡಾ.ರಾಜ್ಕುಮಾರ್ ಪುತ್ರಿ ಪೂರ್ಣಿಮಾ ರಾಮ್ಕುಮಾರ್, ನಮ್ಮ ತಂದೆಗೆ ಸಂಗೀತ ಎಂದರೆ ಪ್ರಾಣ. ಗಜಲ್ ಬಹಳ ಇಷ್ಟ. ನಮ್ಮ ಮನೆಯಲ್ಲಿ ಎಲ್ಲರೂ ಸಂಗೀತ ಪ್ರೇಮಿಗಳೇ. ನಮ್ಮ ಕುಟುಂಬಕ್ಕೆ ಆತ್ಮೀಯರಾದ ಮಂಜುನಾಥ್ ಹಾಗೂ ಸೌಮ್ಯ ಮಂಜುನಾಥ್ ಅವರು ಅಪ್ಪಾಜಿ ಅವರಿಗಿದ್ದ ಸಂಗೀತದ ಜ್ಞಾನವನ್ನು ಪರಿಚಯಿಸುವ ಈ ಪುಸ್ತಕವನ್ನು ಬರೆದಿದ್ದಾರೆ. ಈ ಪುಸ್ತಕವನ್ನು ಬಿಡುಗಡೆ ಮಾಡಿದ್ದು ಬಹಳ ಖುಷಿ ಕೊಟ್ಟಿದೆ ಎಂದಿದ್ದಾರೆ. ನಂತರ ಪುಸ್ತಕ ಲೇಖಕ ಆರ್.ಮಂಜುನಾಥ್ ಚವ್ಹಾಣ್ ಮಾತನಾಡಿ, 1992ರ ಜೀವನ ಚೈತ್ರ ಚಿತ್ರದ ಸಂದರ್ಭದಲ್ಲಿ ಡಾ.ರಾಜ್ಕುಮಾರ್ ಹಾಗೂ ಪಾರ್ವತಮ್ಮ ರಾಜ್ಕುಮಾರ್ ಅವರ ಪರಿಚಯವಾಯಿತು. ಆನಂತರ ಅವರೊಂದಿಗೆ ಬಹಳ ಹತ್ತಿರದ ಒಡನಾಟವಿತ್ತು. ಅಣ್ಣಾವ್ರು ಬಹಳ ದೊಡ್ಡ ಸಂಗೀತ ಪ್ರೇಮಿ. ಅವರಿಗೆ ಸಂಗೀತದ ಎಲ್ಲಾ ಪ್ರಕಾರಗಳು ಗೊತ್ತಿತ್ತು. ಅವರ ಸಹೋದರ ವರದಪ್ಪ ಅವರೂ ಕೂಡಾ ಸಂಗೀತದ ಬಗ್ಗೆ ಅಪಾರ ಜ್ಞಾನವುಳ್ಳವರಾಗಿದ್ದರು. ರಾಜ್ ಅವರಿಗೆ ಕರ್ನಾಟಕ ಸಂಗೀತ ಅಷ್ಟೇ ಅಲ್ಲದೇ ಹಿಂದೂಸ್ತಾನಿ ಸಂಗೀತ ಕೂಡಾ ಬಹಳ ಇಷ್ಟ. ಅದರಲ್ಲೂ ಗಜಲ್ ಎಂದರೆ ತುಂಬಾನೇ ಇಷ್ಟ. 70 ವರ್ಷವಿದ್ದ ಸಂದರ್ಭವೂ ಸಂಗೀತದಲ್ಲಿ ತಮಗೆ ತಿಳಿಯದ ಕೆಲವು ಸಂಗತಿಗಳ ಬಗ್ಗೆ ತಿಳಿದವರಿಂದ ತಿಳಿದುಕೊಳ್ಳುವ ಉತ್ಸಾಹ ಅವರಲ್ಲಿತ್ತು. ಇದನೆಲ್ಲವನ್ನು ಹತ್ತಿರದಿಂದ ಕಂಡಿದ್ದ ನಾನು ಹಾಗೂ ನನ್ನ ಶ್ರೀಮತಿ ಸೌಮ್ಯ ಅವರು, ಡಾ.ರಾಜ್ಕುಮಾರ್ ಅವರಿಗಿದ್ದ ಸಂಗೀತ ಜ್ಞಾನವನ್ನು ಪುಸ್ತಕ ರೂಪದಲ್ಲಿ ಎಲ್ಲರಿಗೂ ತಿಳಿಸಬೇಕು ಎಂಬ ಉದ್ದೇಶದಿಂದ “ನಾದಯೋಗಿ ಡಾ.ರಾಜ್ಕುಮಾರ್” ಎಂಬ ಪುಸ್ತಕವನ್ನು ಕನ್ನಡ ಹಾಗೂ ಇಂಗ್ಲಿಷ್ನಲ್ಲಿ ಬರೆದಿದ್ದೇವೆ ಎಂಬ ಮಾಹಿತಿ ತೀಲಿಸಿದ್ದರು ಎನ್ನಲಾಗುತ್ತಿದೆ. ಹಾಗೂ ರಾಜ್ ಪುತ್ರಿ ಪೂರ್ಣಿಮಾ ರಾಮ್ಕುಮಾರ್ ಅವರು ಈ ಪುಸ್ತಕ ಅನಾವರಣ ಮಾಡಿಕೊಟ್ಟಿದ್ದು ಬಹಳ ಸಂತೋಷವಾಗಿದೆ. ಅವರಿಗೆ ಹಾಗೂ ಆಗಮಿಸಿರುವ ಗಣ್ಯರಿಗೆ ಧನ್ಯವಾದಗಳು. 7.5.1954 ರಾಜ್ಕುಮಾರ್ ಅಭಿನಯದ ಮೊದಲ ಚಿತ್ರ ಬೇಡರ ಕಣ್ಣಪ್ಪ ಬಿಡುಗಡೆಯಾಗಿತ್ತು. ಕಾಕತಾಳೀಯವಾಗಿ ಇಂದು 7.5.2026 ನಮ್ಮ ನಾದಯೋಗಿ ಡಾ.ರಾಜಕುಮಾರ್ ಪುಸ್ತಕ ಅನಾವರಣಗೊಂಡಿದೆ ಎಂದು ಸಂತೋಷ ಹಂಚಿಕೊಂಡರು ಎನ್ನಲಾಗಿದೆ.















